Hassan Airport: ಹಾಸನ ವಿಮಾನ ನಿಲ್ದಾಣ ಕುರಿತು ಬಿಗ್ ಅಪ್ಡೇಟ್ ನೀಡಿದ ಹೆಚ್ ಡಿ ದೇವೇಗೌಡ
ನವದೆಹಲಿ, ಡಿಸೆಂಬರ್ 06: ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುವುದರಿಂದ ಇತಿಹಾಸ ಪ್ರಸಿದ್ಧ ಬೇಲೂರು-ಹಳೇಬೀಡು- ಶ್ರವಣಬೆಳಗೋಳ ತಾಣಗಳ ಪ್ರವಾಸೋದ್ಯಮ ಅಭಿವೃದ್ಧಿಯಾಗುವುದರ ಜತೆಗೆ ಜಿಲ್ಲೆಯ ರೈತರಿಗೆ ಕೃಷಿ ರಫ್ತು ಹೆಚ್ಚಿಸುವಲ್ಲಿ ಸಹಕಾರಿ ಆಗುತ್ತದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಮನವಿ ಮಾಡಿದರು.
ಈ ಬಗ್ಗೆ ಗುರುವಾರದಂದು ರಾಜ್ಯಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು, ಇದು ಅತ್ಯಂತ ಮಹತ್ವಾಕಾಂಕ್ಷೆಯ ವಿಮಾನ ನಿಲ್ದಾಣವಾಗಿದ್ದು, ಕ್ಷಿಪ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಜನತೆಗೆ ಹೆಚ್ಚು ಅನುಕೂಲ ಆಗುತ್ತದೆ. ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತದೆ ಎಂದು ಒತ್ತಿ ಹೇಳಿದರು.

ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದ ಬಲವರ್ಧನೆ ಸಹಕಾರಿಯಾಗುವ ಹಾಗೂ ರೈತರಿಗೆ ಅತಿ ಹೆಚ್ಚು ಉಪಯುಕ್ತವಾಗುವ ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಹೃದಯಪೂರ್ವಕವಾಗಿ ಮನವಿ ಮಾಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಆಗಿರುವ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಅಸಂಖ್ಯಾತ ಪ್ರವಾಸಿಗರು ಬರುತ್ತಾರೆ. ಐತಿಹಾಸಿಕ ಬೇಲೂರು, ಹಳೆಬೀಡು ಹಾಗೂ ಶ್ರವಣಬೆಳಗೊಳ ಪ್ರವಾಸಿ ತಾಣಗಳಿಗೆ ಭೇಟಿ ಕೊಡಲು ಇವರೆಲ್ಲರೂ ಬರುತ್ತಾರೆ. ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಎಂದು ಹೆಚ್ ಡಿ ದೇವೇಗೌಡ ಹೇಳಿದರು.
ಈವರೆಗೆ ಹಲವಾರು ಸರ್ಕಾರಗಳು ಬಂದು ಹೋಗಿವೆ. ದುರದೃಷ್ಟವಶಾತ್ ಹಾಸನ ವಿಮಾನ. ನಿಲ್ದಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಆರ್ಥಿಕ ಹಾಗೂ ವ್ಯೂಹಾತ್ಮಕ ಉದ್ದೇಶದಿಂದ ಹಾಸನ ವಿಮಾನ ನಿಲ್ದಾಣ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು. ಹಾಸನದಲ್ಲಿ ಮೂಲಭೂತ ಸೌಕರ್ಯಗಳಿಗೆ ಕೊರತೆ ಇಲ್ಲ. ಅತ್ಯುತ್ತಮ ಶಿಕ್ಷಕ ಸಂಸ್ಥೆಗಳು ಮತ್ತು ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು ಕಾಲೇಜುಗಳು ಇವೆ. ಅಲ್ಲದೆ, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಉಪಗ್ರಹ ನಿಯಂತ್ರಣ ಕೇಂದ್ರವೂ ಅಲ್ಲಿದೆ.
ಕಾಫಿ, ಚಹಾ ರಫ್ತಿನಲ್ಲಿ ಹಾಸನ ಮುಂಚೂಣಿಯಲ್ಲಿದೆ. ಇದು ವಿದೇಶಿ ವಿನಿಮಯ ಗಳಿಕೆಗೆ ಹೆಚ್ಚು ಪೂರ್ಕವಾಗಿದೆ. ಪ್ರತಿ ತಿಂಗಳು ಹಾಸನ ಜಿಲ್ಲೆಯ ರೈತರು ಹಾಲು ಉತ್ಪಾದನೆಯ ಮೂಲಕ ₹900 ಕೋಟಿ ದುಡಿಮೆ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣ ಬಂದರೆ ಹಾಲು, ಹಾಲಿನ ಉತ್ಪನ್ನಗಳ ರಫ್ತಿಗೆ ಹೆಚ್ಚು ಅನುಕೂಲ ಆಗುತ್ತದೆ. ಹಾಗೆಯೇ, ಕಾಫಿ, ಚಹಾ ಇನ್ನಿತರೆ ಕೃಷಿ ಉತ್ಪನ್ನಗಳ ರಫ್ತಿಗೆ ಅನುಕೂಲವಾಗಿ ವಿಜ್ಞಾನ, ತಂತ್ರಜ್ಞಾನ, ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ದೇವೇಗೌಡರು ಪ್ರತಿಪಾದಿಸಿದರು.
ಹಾಸನವು ಮಂಗಳೂರು ಮತ್ತು ಚೆನ್ನೈ ಬಂದರುಗಳ ನಡುವೆ ಆಯಕಟ್ಟಿನ ಸ್ಥಳವಾಗಿದೆ ಎಂದು ವಿವರಿಸಿದ ಮಾಜಿ ಪ್ರಧಾನಿಗಳು; ಉತ್ತಮ ಸಂಪರ್ಕದಿಂದ ಹಾಸನ ಅತಿದೊಡ್ಡ ವಾಣಿಜ್ಯ ಕೇಂದ್ರವಾಗಿದೆ. ಬೆಂಗಳೂರು-ಹಾಸನ ಹೆದ್ದಾರಿಯ ಭಾಗಗಳನ್ನು ಈಗಾಗಲೇ ಕೈಗಾರಿಕಾ ಕಾರಿಡಾರ್ ಎಂದು ಘೋಷಿಸಲಾಗಿದ್ದು, ಹೈದರಾಬಾದ್-ಬೆಂಗಳೂರು ಕಾರಿಡಾರ್ ಇದಕ್ಕೆ ಪೂರಕವಾಗಿದೆ. ಹಾಸನದಲ್ಲಿ ವಿಮಾನ ನಿಲ್ದಾಣವು ಬೆಂಗಳೂರು, ಮಂಗಳೂರು ಮತ್ತು ಚೆನ್ನೈಗಳನ್ನು ಉತ್ತಮವಾಗಿ ಸಂಪರ್ಕಿಸುತ್ತದೆ. ಇದು ಆರ್ಥಿಕವಾಗಿ ಲಾಭದಾಯಕ ಮತ್ತು ಕಾರ್ಯತಂತ್ರದ ಭಾಗವಾಗಿರುತ್ತದೆ ಎಂದು ತಿಳಿಸಿದರು.
ಹಾಸನ ವಿಮಾನ ನಿಲ್ದಾಣ ಯೋಜನೆ ಎದುರಿಸುತ್ತಿರುವ ರಾಜಕೀಯ ಸವಾಲುಗಳ ಕುರಿತು ಮಾತನಾಡಿ, ಬೆಂಗಳೂರಿನ ಹೆಚ್ ಎಎಲ್ ನಲ್ಲಿ ಲಘು ಯುದ್ಧ ವಿಮಾನ ನಿಲ್ದಾಣ ಮತ್ತು 65 ಆಸನಗಳ ಲಘು ವಿಮಾನಗಳ ಉತ್ಪಾದನೆಗೆ ಮಂಜೂರಾತಿ ನೀಡಿದ ವಿಷಯವನ್ನು ಉಲ್ಲೇಖಿಸಿದರು.
ಹಾಸನ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಕರ್ನಾಟಕದ ಐವರು ಮುಖ್ಯಮಂತ್ರಿಗಳು ರಾಜಕೀಯ ಮಾಡಿದ್ದಾರೆ. ನನ್ನ ಜೀವನದ ಕೊನೆಯ ಹಂತದಲ್ಲಿ, ನಾನು ಈ ಸದನದಲ್ಲಿ ಕುಳಿತು, ಈ ಯೋಜನೆಯು ಅಂತಿಮವಾಗಿ ಪೂರ್ಣಗೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ರೈತರಿಗಾಗಿ, ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ, ಕರ್ನಾಟಕಕ್ಕಾಗಿ, ಭಾರತದ ಪ್ರಗತಿಗಾಗಿ ಈ ವಿಮಾನ ನಿಲ್ದಾಣ ಆದಷ್ಟು ಬೇಗ ನಿರ್ಮಾಣ ಆಗಬೇಕಿದೆ ಎಂದು ಅವರು ಒತ್ತಿ ಹೇಳಿದರು.
"ಸರ್, ನೀವು ರೈತರ ಬಗ್ಗೆ ತುಂಬಾ ಕಾಳಜಿ, ಬದ್ಧತೆಯಿಂದ ಮಾತನಾಡುತ್ತೀರಿ. ಲೋಕಸಭೆ ಮತ್ತು ವಿಧಾನಸಭೆ ಎರಡಕ್ಕೂ ಏಳು ಬಾರಿ ಆಯ್ಕೆಯಾಗಿರುವ ರೈತ ನಾನು. ನನ್ನ ಜೀವನದ 66 ವರ್ಷಗಳನ್ನು ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದೇನೆ. ಹಾಸನ ವಿಮಾನ ನಿಲ್ದಾಣ ಪೂರ್ಣಗೊಳಿಸಬೇಕು. ಇದು ರೈತರನ್ನು ಉನ್ನತಿಗೆ ತರುತ್ತದೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಇದು ಕೇವಲ ಬೇಡಿಕೆಯಲ್ಲ; ಇದು ಈ ಸಂದರ್ಭದ ತುರ್ತು ಅಗತ್ಯವಾಗಿದೆ" ಎಂದು ಕೈ ಮುಗಿದು ಮನವಿ ಮಾಡಿದರು.
ಮಾಜಿ ಪ್ರಧಾನಿಗಳ ಮಾತನ್ನು ಆಲಿಸಿದ ನಂತರ ಸದನವನ್ನು ಉದ್ದೇಶಿಸಿ ಮಾತನಾಡಿದ ಸಭಾಪತಿಗಳಾದ ಜಗದೀಪ ಧನಕರ್ ಅವರು; ದೇವೇಗೌಡರು ರೈತರು ಮತ್ತು ಅವರ ಸಮಸ್ಯೆಗಳ ಬಗ್ಗೆ ಮಂಡಿಸಿದ ಎಲ್ಲಾ ವಿಚಾರಗಳು ನಮ್ಮೆಲ್ಲರ ಮುಂದಿವೆ. ಅವರ ಉಪಸ್ಥಿತಿಯನ್ನು ನಾವು ಆಶೀರ್ವಾದವೆಂದು ಪರಿಗಣಿಸುತ್ತೇವೆ. ಅವರ ಭಾವನೆಗಳು ನಮ್ಮ ಪಾಲಿಗೆ ಹೆಚ್ಚಿನ ಮೌಲಿಯುತವಾಗಿವೆ ಎಂದರು.












Click it and Unblock the Notifications