ಪ್ರತಿಭಾವಂತ ಮಹಿಳಾ ಬಾಕ್ಸರ್ ನತ್ತ ಕೊನೆಗೂ ಕಣ್ತೆರೆದ ಸರ್ಕಾರ
ಚಂಡೀಗಢ, ಏ.8: ರಾಜ್ಯ ಮಟ್ಟದ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಗೆದ್ದರೂ ಜೀವನ ನಿರ್ವಹಣೆ ಕಷ್ಟವಾಗಿ ಮುಸುರೆ ತಿಕ್ಕುತ್ತಿದ್ದ ರಿಷು ಮಿತ್ತಲ್ ಗೆ ಕೊನೆಗೂ ನೆರವು ಸಿಕ್ಕಿದೆ. ಪ್ರತಿಭಾವಂತ ಯುವ ಮಹಿಳಾ ಬಾಕ್ಸರ್ ರಿಷು ಮಿತ್ತಲ್ ಗೆ ಹರ್ಯಾಣ ಸರ್ಕಾರ ಬುಧವಾರ 1 ಲಕ್ಷ ರು ನೆರವು ಘೋಷಿಸಿದೆ.
ರಿಷು ಮಿತ್ತಲ್(16) ಗೆ ನೆರವು ನೀಡಲು ಸರ್ಕಾರ ಮುಂದಾಗಿರುವ ಸುದ್ದಿಯನ್ನು ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಅನಿಲ್ ವಿಜ್ ಅವರು ಖಚಿತಪಡಿಸಿದ್ದಾರೆ.
ಬಾಕ್ಸರ್ ರಿಷು ಮಿತ್ತಲ್ 10ನೇ ತರಗತಿ ಓದುತ್ತಿದ್ದು ವಿದ್ಯಾಭ್ಯಾಸ ಮುಂದುವರೆಸಲು ಬೇಕಾದ ಅರ್ಥಿಕ ನೆರವು ಇರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಅವರಿವರ ಮನೆ ಕೆಲಸ ಮಾಡಿ ಬಂದ ಹಣದಿಂದ ಶಾಲೆ ಶುಲ್ಕ ಕಟ್ಟುತ್ತಿದ್ದರು.

ರಿಷು ಮಿತ್ತಲ್ ತನ್ನ ಒಬ್ಬ ಅಣ್ಣನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಣ್ಣ ಖೈತಾಲ್ ಜಿಲ್ಲೆಯ ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 46ಕೆಜಿ ವಿಭಾಗದ ಬಾಕ್ಸಿಂಗ್ ಚಾಂಪಿಯನ್ ನಲ್ಲಿ ಹರ್ಯಾಣ ಪರ ಆಡಿ ಚಿನ್ನದ ಪದಕ ಗೆದ್ದಿದ್ದರು.
ಬೆಳಗ್ಗಿನ ಜಾವ 5 ಗಂಟೆಗೆ ಎದ್ದು ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ಮಾಡಿ ನಂತರ ಶಾಲೆಗೆ ತೆರಳುವ ರಿಷು ಸಂಜೆ ವೇಳೆ ಮನೆಕೆಲಸ ಮಾಡುತ್ತಾರೆ. ನಂತರ ಮತ್ತೆ ಬಾಕ್ಸಿಂಗ್ ತರಬೇತಿಗೆ ಬರುತ್ತಾರೆ. ಸರಿಯಾದ ಆಹಾರ ಕ್ರಮ ಹಾಗೂ ಆರ್ಥಿಕ ನೆರವು ಸಿಕ್ಕರೆ ಆಕೆಯನ್ನು ಮೇರಿ ಕೋಮ್ ರಂತೆ ಭಾರತದ ಹೆಮ್ಮೆಯ ಕ್ರೀಡಾಪಟು ಮಾಡುವ ಕನಸಿಗೆ ಎಂದು ಕೋಚ್ ರಾಜೀಂದರ್ ಸಿಂಗ್ ಹೇಳಿದ್ದಾರೆ. ಕೋಚ್ ಆಸೆ ನನಸಾಗಲಿ ಎಂಬುದು ಅನೇಕ ಕ್ರೀಡಾಭಿಮಾನಿಗಳ ಹಾರೈಕೆಯೂ ಆಗಿದೆ.












Click it and Unblock the Notifications