Haryana: ಮೋದಿ ಕೆಲಸಗಳನ್ನ ಕಾಂಗ್ರೆಸ್‌ನ 7 ತಲೆಮಾರು ಬಂದ್ರೂ ಮಾಡಲ್ಲ ಎಂದ ಸೈನಿ
ಹರಿಯಾಣ ಸಿಎಂ ಕುರ್ಚಿ ಏರಲು ಸಜ್ಜಾಗಿರುವ ನಯಾಬ್ ಸಿಂಗ್ ಸೈನಿ, ಸರ್ಕಾರ ರಚನೆಗೂ ಮುನ್ನವೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ರೈತರಿಗಾಗಿ ಮಾಡಿರುವ ಕೆಲಸಗಳನ್ನು ಕಾಂಗ್ರೆಸ್ ಪಕ್ಷದ ಏಳು ತಲೆಮಾರಿನವರು ಬಂದರೂ ಮಾಡಲು ಸಾಧ್ಯವಿಲ್ಲ ಎಂದು ಸೈನಿ ಹೇಳಿದ್ದಾರೆ.
ಕಾಂಗ್ರೆಸ್‌ನವರು 10 ವರ್ಷಗಳ ಕಾಲ ಹರಿಯಾಣದಲ್ಲಿ ಅಧಿಕಾರದಲ್ಲಿದ್ದರು. ನಾನು ಕಾಂಗ್ರೆಸ್ ನಾಯಕರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ಆದರೆ ಅವರು ಒಂದಕ್ಕೂ ಉತ್ತರಿಸಲಿಲ್ಲ ಎಂದಿದ್ದಾರೆ.

ಕಾಂಗ್ರೆಸ್‌ನಲ್ಲಿ ಯಾವುದೇ ಗೆಲುವು ಸಿಗದಿದ್ದಾಗ ಇವಿಎಂಗಳ ಮೇಲೆ ಪ್ರಶ್ನೆಗಳನ್ನು ಎತ್ತುವುದು ಅವರ ಸಂಪ್ರದಾಯ. ಆದರೆ ಹರಿಯಾಣದಲ್ಲಿ ಪ್ರಧಾನಿ ಮೋದಿಯವರ ನೀತಿಗಳು ಗೆದ್ದಿದ್ದು, ಕಾಂಗ್ರೆಸ್‌ನ ಸುಳ್ಳುಗಳು ಸೋತಿವೆ. ಮೋದಿಯವರ ಗ್ಯಾರಂಟಿ ದೇಶದಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಹರಿಯಾಣವು ಮೋದಿ ಅವರ ಕೆಲಸಗಳಲ್ಲಿ ನಂಬಿಕೆ ಹೊಂದಿದೆ. ನಮ್ಮ ಭಾರತವು ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಯಲ್ಲಿ ದಾಪುಗಾಲಿಟ್ಟಿದೆ ಎಂದು ಹೇಳಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಹ್ಯಾಟ್ರಿಕ್ ಗೆಲುವಿನ ಕಹಳೆ ಮೊಳಗಿಸಿದೆ. ಇದರ ಬೆನ್ನಲ್ಲೇ ನೂತನ ಸರ್ಕಾರ ರಚನೆಗೆ ಕಮಲ ಭರ್ಜರಿ ಸಿದ್ಧತೆ ನಡೆಸಿದ್ದು, ಇದೇ ಅಕ್ಟೋಬರ್ 15ರಂದು (ನಾಳೆ) ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.

ಹರಿಯಾಣದ ನೂತನ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹರಿಯಾಣದಲ್ಲಿ ತಮ್ಮ ಮತಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸೈನಿ, ಒಟ್ಟು ಫಲಿತಾಂಶದ ಬಳಿಕ ದೆಹಲಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಹಿರಿಯ ನಾಯಕರನ್ನು ಭೇಟಿಯಾಗಿ ಬಂದಿದ್ದರು.
ಹರಿಯಾಣದಲ್ಲಿ ನೂತನ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಅಕ್ಟೋಬರ್ 15ರಂದು ಪಂಚಕುಲದಲ್ಲಿ ನಡೆಯಲಿದೆ. ಹೀಗಾಗಿ ಪಂಚಕುಲದಲ್ಲಿ ಈ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ದಂಡು ಪ್ರಮಾಣವಚನ ಕಾರ್ಯಕ್ರಮದಲ್ಲಿ ಇರಲಿದೆ ಎಂದು ಹೇಳಲಾಗಿದೆ.
ಬಿಜೆಪಿ ಪ್ರಮಾಣ ವಚನ ಸಮಾರಂಭಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ಕೂಡ ರಚಿಸಲಾಗಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಆಡಳಿತವಿರುವ ವಿವಿಧ ರಾಜ್ಯಗಳು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಪ್ರಮುಖರು ಭಾಗಿಯಾಗುವ ನಿರೀಕ್ಷೆ ಇದೆ. ಇದೇ ವರ್ಷದ ಮಾರ್ಚ್‌ನಲ್ಲಿ ಹರಿಯಾಣ ಮುಖ್ಯಮಂತ್ರಿಯನ್ನು ಬದಲಿಸಿತ್ತು.
ಇದಾದ ಕೆಲವೇ ತಿಂಗಳ ಬಳಿಕ ವಿಧಾನಸಭೆ ಚುನಾವಣೆ ನಿಗದಿಯಾಗಿತ್ತು. ಈ ವೇಳೆ ಹಿಂದುಳಿದ ವರ್ಗಗಳಿಂದ ಹಿನ್ನೆಲೆಯಿರುವ ನಯಾಬ್ ಸಿಂಗ್ ಸೈನಿ ಅವರು ಚುನಾವಣೆಯಲ್ಲಿ ಗೆದ್ದರೆ, ಸಿಎಂ ಆಗೋದು ಖಚಿತ ಎಂದು ಮೊದಲೇ ಹೇಳಲಾಗಿತ್ತು. ಅದರಂತೆ ಸೈನಿ ಸಿಎಂ ಕುರ್ಚಿ ಏರಲು ಸಜ್ಜಾಗಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಹರಿಯಾಣದಲ್ಲಿ ಕಮಲ ಮತ್ತೊಮ್ಮೆ ಅರಳುತ್ತಿದೆ.












Click it and Unblock the Notifications