ಕೋಟ್ಯಾಧಿಪತಿಗಳಿಂದ ಹರಿಯಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧೆ: ಅಂಕಿ ಸಂಖ್ಯೆ ವಿವರ
ನವದೆಹಲಿ, ಅಕ್ಟೋಬರ್ 01: ಹರಿಯಾಣ ವಿಧಾನಸಭಾ ಚುನಾವಣೆ 2024 ರಂಗು ಹೆಚ್ಚಾಗಿದೆ. ಇತ್ತ ಜಮ್ಮು ಮತ್ತು ಕಾಶ್ಮೀರದ ಮತದಾನ ಪೂರ್ಣಗೊಂಡಿದ್ದು, ಹರಿಯಾಣದತ್ತ ದೇಶದ ಜನರ ಗಮನ ನೆಟ್ಟಿದೆ. ಏಕೆಂದರೆ ಇಲ್ಲಿ ಸ್ಪರ್ಧೆಗೆ ಇಳಿದ ಬಹುತೇಕರು ಕೋಟ್ಯಾಧಿಪತಿಗಳು ಎಂಬುದು ವಿಶೇಷ. ಈ ಕುರಿತು ಅಪ್ಡೇಟ್, ಇಂದಿನ ಅಂಕಿ ಸಂಖ್ಯೆ, 2019ರಲ್ಲಿದ್ದ ಕೋಟ್ಯಾಧಿಪತಿ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ.
ಒಟ್ಟು 90 ಕ್ಷೇತ್ರಗಳಿಗೆ ವಿಧಾಸಭಾ ಚುನಾವಣೆ ನಡೆಯುತ್ತಿದೆ. ಒಟ್ಟು 1,031 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಪೈಕಿ ಶೇಕಡಾ 52 ರಷ್ಟು ಅಂದರೆ, ಅರ್ಧಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳು ಕೋಟ್ಯಾಧಿಪತಿಗಳು ಎಂದು 'ಬಿಸಿನೆಸ್ ಸ್ಟಾಂಡರ್ಡ್' ವರದಿ ಮಾಡಿದೆ.

ಎಷ್ಟು ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಕೇಸಿದೆ?
ಪ್ರಸಕ್ತ ಸಾಲಿನ ಹರಿಯಾಣ ವಿಧಾನಸಭಾ ಚುಣಾವಣೆಯಲ್ಲಿ 67 ಹಾಲಿ ಶಾಸಕರು ಪುನಃ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಿಶ್ಲೇಷಣೆಯ ಪ್ರಕಾರ, 1,031 ಅಭ್ಯರ್ಥಿಗಳಲ್ಲಿ 133 ಅಭ್ಯರ್ಥಿಗಳು (ಶೇಕಡಾ 13) ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ಧಮೆಗಳು ಇವೆ ಎಂದು ಘೋಷಿಸಿದ್ದಾರೆ. ಇದರ ಪ್ರಮಾಣ 2019 ರಲ್ಲಿ ಶೇಕಡಾ 10ರಷ್ಟು ಇತ್ತು. ಈ ವರ್ಷ ಅದರ ಪ್ರಮಾಣ ಹೆಚ್ಚಾಗಿದೆ.
2024 ಮತ್ತು 2019 ಕೋಟ್ಯಾಧಿಪತಿಗಳ ವಿವರ
ಈ ವರ್ಷ ಶೇಕಡಾ 52ರಷ್ಟು ಅಭ್ಯರ್ಥಿಗಳು ಕೋಟ್ಯಾಧಿಪತಿಗಳು ಹಾಗೂ 2019ರ ಹಿಂದಿನ ಚುನಾವಣೆಯಲ್ಲಿ ಶೇಕಡಾ 42 ರಷ್ಟಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸಂಶೋಧನೆ ವರದಿ ಮಾಹಿತಿ ಬಿಡುಗಡೆ ಮಾಡಿದೆ. ಈ ಎಡಿಆರ್ ಸಂಸ್ಥೆ ದೆಹಲಿ ಮೂಲದ ಸರ್ಕಾರೇತರ ಸಂಸ್ಥೆ ಆಗಿದೆ. ಚುನಾವಣಾ ಸಂಬಂಧಿತ ವಿಷಯಗಳ ಮೇಲೆ ಕೆಲಸ ಮಾಡುತ್ತದೆ.
ಹರ್ಯಾಣ ವಿಧಾನಸಭೆ ಚುನಾವಣೆಗೆ ಕಣದಲ್ಲಿರುವ ಒಟ್ಟು (1,031) ಸ್ಪರ್ಧಾಳುಗಳಲ್ಲಿ 538 (ಶೇ. 52) ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಈ ಕೋಟ್ಯಾಧಿಪತಿಗಳ ಪ್ರಮಾಣ 2019ರಲ್ಲಿ ಒಟ್ಟು 1,138 ಅಭ್ಯರ್ಥಿಗಳಲ್ಲಿ ಪೈಕಿ 481 ರಷ್ಟಿತ್ತು, ಅಂದರೆ ಶೇಕಡಾ 42ರಷ್ಟು ಎಂದು ಎಡಿಆರ್ ಸಂಶೋಧನೆಗಳು ಮಾಹಿತಿ ನೀಡಿವೆ.
ಚುನಾವಣೆಯಲ್ಲಿ ಮೇಲೆ ಹಣದ ಪ್ರಭಾವ?
ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಎಎಪಿ ಸೇರಿದಂತೆ ಸ್ಥಳೀಯ ಹಾಗೂ ರಾಷ್ಟ್ರೀಯ ರಾಜಕೀಯ ಪಕ್ಷಗಳು ಶ್ರೀಮಂತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ಕೆಲವೊಬ್ಬರು ಪಕ್ಷೇತರವಾಗಿಯು ಕಣಕ್ಕೆ ಇಳಿದಿದ್ದಾರೆ. ಇದೆಲ್ಲ ಕಾರಣದಿಂದ ಹರಿಯಾಣ ಚುನಾವಣೆಯಲ್ಲಿ ಈ ವರ್ಷ ನಗದು ಪಾತ್ರ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ.
ಪ್ರಸಕ್ತ 2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಪ್ರತಿಯೊಬ್ಬ ಅಭ್ಯರ್ಥಿಯ ಸರಾಸರಿ ಆಸ್ತಿ 8.68 ಕೋಟಿ ರೂಪಾಯಿ ಎಂದು ಹೇಳಲಾಗಿದೆ. 2019 ರಲ್ಲಿ ಪ್ರತಿ ಅಭ್ಯರ್ಥಿ ಸರಾಸರಿ ಆಸ್ತಿ ಮೌಲ್ಯ 4.31 ಕೋಟಿ ರೂಪಾಯಿ ಎಂದು ವರದಿ ತಿಳಿಸಿದೆ.
ಪಕ್ಷವಾರು ಕೋಟ್ಯಾಧಿಪತಿ ಅಭ್ಯರ್ಥಿಗಳ ವಿವರ
ಹರಿಯಾಣದಲ್ಲಿ ಸ್ಪರ್ಧಿಸಿದವರ ಪೈಕಿ 2024ರಲ್ಲಿ BJP ಅಭ್ಯರ್ಥಿಗಳು 96 ಮಂದಿ ಕೋಟ್ಯಾಧಿಕಾರಿಗಳು (2019ರಲ್ಲಿ 89 ಮಂದಿ ಕೋಟ್ಯಾಧಿಪತಿಗಳು), ಕಾಂಗ್ರೆಸ್ 94 ಮಂದಿ ಕೋಟ್ಯಾಧಿಪತಿಗಳು (ಕಳೆದ ಬಾರಿ 91 ಮಂದಿ), JJP 70 ಮಂದಿ (71), INLD 67 ಮಂದಿ (63), AAP 59 (41), BSP ಪಕ್ಷೇತರ 51 (40) ಹಾಗೂ ಪಕ್ಷೇತರ ಅಭ್ಯರ್ಥಿಗಳು 40 ಮಂದಿ (27 ಮಂದಿ) ಕೋಟ್ಯಾಧಿಪತಿಗಳು ಕಣದಲ್ಲಿದ್ದಾರೆ.












Click it and Unblock the Notifications