Haryana Assembly Election 2024 Results: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಆಘಾತ, ಕಾರಣ ಬಹಿರಂಗ
ನವದೆಹಲಿ, ಅಕ್ಟೋಬರ್ 08: ಹರಿಯಾಣ ವಿಧಾನಸಭೆ ಚುನಾವಣೆ 2024ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. 90 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಅಕ್ಟೋಬರ್ 5ರ ಶನಿವಾರ ಮತದಾನ ನಡೆದಿತ್ತು. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರ ಹಿಡಿಯಲಿವೆ ಎಂದು ಅಂದಾಜಿಸಿದ್ದವು. ಆದರೆ ಮಂಗಳವಾರ ಮತ ಎಣಿಕೆ ನಡೆಯುವಾಗ ಬಂದ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಅಘಾತವನ್ನು ತಂದಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46.
ಸಮಯ 1.30ರ ಮಾಹಿತಿಯಂತೆ ಹರಿಯಾಣದಲ್ಲಿ ಬಿಜೆಪಿ 50, ಕಾಂಗ್ರೆಸ್ 35, ಐಎನ್‌ಎಲ್‌ಡಿ 1, ಬಿಎಸ್‌ಪಿ 1 ಮತ್ತು ಇತರರು 3 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವುದು ಖಾತ್ರಿಯಾಗಿದೆ. ಸತತ 3ನೇ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಲಿದೆ.

ಕಾಂಗ್ರೆಸ್ ಹಿನ್ನಡೆಗೆ ಕಾರಣವೇನು?; ಹರಿಯಾಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಎಲ್ಲಾ ನಿರೀಕ್ಷೆ ಇತ್ತು. ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ವರವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಪಕ್ಷದ ನಾಯಕರ ನಡುವಿನ ಜಟಾಪಟಿಯೇ ಪಕ್ಷಕ್ಕೆ ಮಾರಕವಾಗಿದೆ.
ಕುಮಾರಿ ಸೆಲ್ಜಾ, ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ರಾಜ್ಯದ ಪ್ರಮುಖ ನಾಯಕರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ 31 ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿಯೂ ಪಕ್ಷ ಇದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆ ಇದೆ.
ಹರಿಯಾಣ ರಾಜ್ಯದಲ್ಲಿ ಚುನಾವಣೆ ಫಲಿತಾಂಶ ಘೋಷಣೆಯಾಗುವ ಮೊದಲೇ ನಾಯಕರ ನಡುವೆ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ಆರಂಭವಾಯಿತು. ಕುಮಾರಿ ಸೆಲ್ಜಾ, ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ನಡುವೆ ನಡೆಯುತ್ತಿದ್ದ ಈ ಚರ್ಚೆ ಬಹಿರಂಗವಾಗದೇ ಉಳಿಯಲಿಲ್ಲ.
ಈ ಕುರ್ಚಿ ಕದನ ಚುನಾವಣೆಯಲ್ಲಿ ಪಕ್ಷಕ್ಕೆ ಏಟು ಕೊಟ್ಟಿದೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ಎಂದು ಕಾಂಗ್ರೆಸ್ ಪದೇ ಪದೇ ಹೇಳಿತು. ಆದರೆ ಇದು ಚುನಾವಣೆಯಲ್ಲಿ ಪಕ್ಷಕ್ಕೆ ಸಾಕಷ್ಟು ಹಿನ್ನಡೆ ತಂದಿತು.
ಚುನಾವಣೆಯಲ್ಲಿ ಎಎಪಿ ಸೇರಿದಂತೆ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಬಯಸಿತ್ತು. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾಗೆ ಸಂಪೂರ್ಣ ಸ್ವತಂತ್ರ್ಯ ನೀಡಲಾಗಿತ್ತು. ಆದರೆ ಚುನಾವಣೆಯಲ್ಲಿ ಇದು ಅನುಕೂಲ ಮಾಡಿಕೊಡಲಿಲ್ಲ. ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲಿಲ್ಲ.
ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಪಕ್ಷ ನೀಡಿತ್ತು. ಆಡಳಿತ ವಿರೋಧಿ ಅಲೆ ಇದ್ದರೂ ಸಹ ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಚುನಾವಣೆ ಗೆಲ್ಲಲು ಕಾಂಗ್ರೆಸ್ ವಿಫಲವಾಗಿದೆ.
2005ರಿಂದ 2014ರ ತನಕ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್ ಸಿಂಗ್ ಹೂಡಾ ರಾಜ್ಯದ ಪ್ರಭಾವಿ ನಾಯಕರು. ದಲಿತ ನಾಯಕಿ ಕುಮಾರಿ ಸೆಲ್ಜಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಭೂಪಿಂದರ್ ಸಿಂಗ್ ಹೂಡಾ ಪುತ್ರ ದೀಪಿಂದರ್ ಹೂಡಾ ಸಹ ಪ್ರಮುಖ ನಾಯಕರು. ಆದರೆ ಪಕ್ಷವನ್ನು ಗೆಲ್ಲುಸುವಲ್ಲಿ ಎಲ್ಲರೂ ವಿಫಲರಾದರು.












Click it and Unblock the Notifications