Haryana Assembly Election 2024: ಪಕ್ಷೇತರ ಶಾಸಕಿ ಸಾವಿತ್ರಿ ಜಿಂದಾಲ್ ಬಿಜೆಪಿಗೆ?
ನವದೆಹಲಿ, ಅಕ್ಟೋಬರ್ 09: ಹರಿಯಾಣ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದೆ. 90 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46. ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸರ್ಕಾರ ರಚನೆ ಮಾಡಲಿದೆ. ಈಗ ವಿಧಾನಸಭೆಯಲ್ಲಿ ಬಿಜೆಪಿ ಬಲ ಇನ್ನಷ್ಟು ಹೆಚ್ಚಾಗಲಿದೆ. ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಸೇರಲಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ ಕಣದಲ್ಲಿದ್ದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಹಿಸಾರ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಈಗ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಒಟ್ಟು ಮೂವರು ಶಾಸಕರು ಬಿಜೆಪಿಗೆ ಬೆಂಬಲ ಘೋಷಣೆ ಮಾಡಲಿದ್ದು, ಇಬ್ಬರು ಪಕ್ಷ ಸೇರಿದರೆ ಬಿಜೆಪಿ ಬಲ 50ಕ್ಕೆ ಏರಿಕೆಯಾಗಲಿದೆ.

ಬುಧವಾರದ ಮಾಹಿತಿಯಂತೆ ಸಾವಿತ್ರಿ ಜಿಂದಾಲ್, ದೇವೇಂದ್ರ ಖಾಡ್ಯಂ, ರಾಜೇಶ್ ಜೂನ್ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕ ಧರ್ಮೇಂದ್ರ ಪ್ರಧಾನ್ ಜೊತೆ ಪಕ್ಷೇತರ ಶಾಸಕರು ಮಾತುಕತೆ ನಡೆಸಿದ್ದಾರೆ.
ಹರಿಯಾಣದ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ದೇವೇಂದ್ರ ಖಾಡ್ಯಂ, ರಾಜೇಶ್ ಜೂನ್ ಬಿಜೆಪಿ ಸೇರಿದ್ದಾರೆ. ಆದರೆ ಸಾವಿತ್ರಿ ಜಿಂದಾಲ್ ಬಾಹ್ಯ ಬೆಂಬಲ ನೀಡಲಿದ್ದಾರೆಯೇ?, ಅಥವ ಪಕ್ಷ ಸೇರಲಿದ್ದಾರೆಯೇ? ಎಂಬುದು ಇನ್ನೂ ಅಂತಿಮವಾಗಿಲ್ಲ. ದೇಶದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಮಾರ್ಚ್‌ನಲ್ಲಿ ಬಿಜೆಪಿ ಸೇರಿದ್ದರು. ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು, ಚುನಾವಣೆಯಲ್ಲಿ ಗೆದ್ದರು.
ದೇವೇಂದ್ರ ಖಾಡ್ಯಂ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂದು ಬಂಡಾಯ ಅಭ್ಯರ್ಥಿಯಾದರು. ಗನೌರ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ರಾಜೇಶ್ ಜೂನ್ ಸಹ ಬಿಜೆಪಿ ಟಿಕೆಟ್ ಸಿಗದ ಕಾರಣ ಬಹದುರ್ಗಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದು ಗೆಲುವು ಕಂಡಿದ್ದಾರೆ.
ಹರಿಯಾಣ ಬಿಜೆಪಿ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಮಾತನಾಡಿ, "ಸಾವಿತ್ರಿ ಜಿಂದಾಲ್ ಅವರು ಪಕ್ಷಕ್ಕೆ ಮರಳುತ್ತಾರೆಯೇ? ಎಂದು ಅವರ ಜೊತೆ ಮಾತುಕತೆ ನಡೆಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿ ಸಚಿವ ಸಾವಿತ್ರಿ ಜಿಂದಾಲ್ ಹಿಸಾರ್ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸಿದ್ದಾರೆ. ಈ ಮೊದಲು 2005, 2009ರ ಚುನಾವಣೆಯಲ್ಲಿ ಅವರು ಜಯಗಳಿಸಿದ್ದರು. 74 ವರ್ಷದ ಅವರಿಗೆ ಈ ಬಾರಿಯ ಹರಿಯಾಣ ವಿಧಾನಸಭೆ ಚುನಾವಣೆ ಟಿಕೆಟ್ ನಿರಾಕರಿಸಲಾಗಿತ್ತು. ಆದ್ದರಿಂದ ಅವರು ಹಿಸಾರ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಸಾವಿತ್ರಿ ಜಿಂದಾಲ್ ಮಾತನಾಡಿ, "ಹಿಸಾರ್ ಕ್ಷೇತ್ರದ ಜನರು ನಾನು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಬಯಸಿದ್ದರು. ಬಿಜೆಪಿಯಿಂದ ಕಮಲ್ ಗುಪ್ತಾ, ಕಾಂಗ್ರೆಸ್‌ನಿಂದ ರಾರಾ ಸಾಹೇಬ್ ಅಭ್ಯರ್ಥಿಗಳು, ಆದ್ದರಿಂದ ನನಗೆ ಬೇರೆ ಯಾವುದೇ ಆಯ್ಕೆ ಇಲ್ಲದೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದೆ" ಎಂದರು. ಸಾವಿತ್ರಿ ಜಿಂದಾಲ್ ಪುತ್ರ ನವೀನ್ ಜಿಂದಾಲ್ ಕುರುಕ್ಷೇತ್ರ ಕ್ಷೇತ್ರದ ಬಿಜೆಪಿ ಸಂಸದರು.
ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನ ಗೆಲ್ಲುವ ಮೂಲಕ ಮೂರನೇ ಬಾರಿಗೆ ರಾಜ್ಯದಲ್ಲಿ ಅಧಿಕಾರವನ್ನು ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಕಾಂಗ್ರೆಸ್ 37, ಐಎನ್‌ಎಲ್‌ಡಿ 2 ಮತ್ತು 3 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.












Click it and Unblock the Notifications