ಜೈಲಲ್ಲಿ 'ರಾಮಲೀಲಾ' ನಾಟಕ: ಸೀತಾಮಾತೆ ಹುಡುಕುವಾಗ ವಾನರ ವೇಷ ತೊಟ್ಟ ಕೈದಿಗಳು ಪರಾರಿ!
ನವದೆಹಲಿ, ಅಕ್ಟೋಬರ್ 13: ದಸರಾ ಅಂಗವಾಗಿ ಜೈಲಿನಲ್ಲಿ 'ರಾಮಲೀಲಾ' ನಾಟಕ ಆಯೋಜನೆ ಮಾಡಲಾಗಿತ್ತು. ಜೈಲಿನ ಕೈದಿಗಳು ವಿವಿಧ ಪಾತ್ರಧಾರಿಗಳಾಗಿ ಅಭಿನಯಿಸುತ್ತಿದ್ದರು. 'ವಾನರ' ವೇಷ ತೊಟ್ಟಿದ್ದ ಇಬ್ಬರು ಕೈದಿಗಳು ಸೀತಾ ಮಾತೆ ಹುಡುಕುವಾಗ ಜೈಲಿನಿಂದ ಪರಾರಿಯಾಗಿದ್ದಾರೆ. ಈಗ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು, ಜೈಲಿನ ಸಿಬ್ಬಂದಿ ಕೈದಿಗಳಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ವಿಜಯದಶಮಿ ಅಂಗವಾಗಿ ಜೈಲಿನಲ್ಲಿ 'ರಾಮಲೀಲಾ' ನಾಟಕ ಆಯೋಜನೆ ಮಾಡಲಾಗಿತ್ತು. ನಾಟಕ ನಡೆಯುವಾಗಲೇ ವಾನರ ವೇಷ ತೊಟ್ಟಿದ್ದ ಇಬ್ಬರು ಕೈದಿಗಳು ಏಣಿಯ ಸಹಾಯದಿಂದ ಜೈಲಿನಿಂದ ಪರಾರಿಯಾಗಿದ್ದಾರೆ.

ರಾಜ್ ಕುಮಾರ್ ಮತ್ತು ಪಂಕಜ್ ಪರಾರಿಯಾದ ಕೈದಿಗಳು. 'ರಾಮಲೀಲಾ' ನಾಟಕದಲ್ಲಿ ಈ ಇಬ್ಬರು ಸಹ ವಾನರ ವೇಷವನ್ನು ತೊಟ್ಟಿದ್ದರು. ಸೀತಾಮಾತೆಯನ್ನು ಹುಡುಕಾಟ ನಡೆಸುವ ಸನ್ನಿವೇಶ ನಡೆಯುವಾಗ ಏಣಿಯ ಸಹಾಯದಿಂದ ಜೈಲಿನ ಗೋಡೆಯನ್ನು ಏರಿ ಇಬ್ಬರು ತಪ್ಪಿಸಿಕೊಂಡಿದ್ದಾರೆ.
ಜೈಲಿನಲ್ಲಿ ಕಾಮಗಾರಿಗಳು: ಇಬ್ಬರು ಕೈದಿಗಳ ಪೈಕಿ ಪಂಕಜ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ರಾಜ್ ಕುಮಾರ್ ಅಪಹರಣ ಪ್ರಕರಣದಲ್ಲಿ ಬಂಧಿತಾಗಿದ್ದು, ವಿಚಾರಣಾಧೀನ ಕೈದಿಯಾಗಿ ಹರಿದ್ವಾರ ಜೈಲು ಸೇರಿದ್ದ. ಶನಿವಾರ ಬೆಳಗ್ಗೆ ಜೈಲಿನ ಕಂಟ್ರೋಲ್ ರೂಂ ಮೂಲಕ ಇಬ್ಬರು ಪರಾರಿಯಾದ ಮಾಹಿತಿ ಸಿಕ್ಕಿದೆ.
ಹರಿದ್ವಾರ ಜೈಲಿನ ಸೂಪರಿಟೆಂಡೆಂಟ್ ಪರ್ಮೇಂದ್ರ ಸಿಂಗ್ ದೋಬಲ್ ಮಾತನಾಡಿ, "ನಾಟಕ ನಡೆಯುವ ವೇಳೆಯೇ ಇಬ್ಬರು ಕೈದಿಗಳು ಸೀತಾಮಾತೆ ಹುಡುಕುವ ಸನ್ನಿವೇಶದ ವೇಳೆ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸುತ್ತಮುತ್ತಲಿನ ಪೊಲೀಸ್ ಠಾಣೆ ಮಾಹಿತಿ ನೀಡಲಾಗಿದೆ. ಜೈಲಿನ ಸಿಬ್ಬಂದಿಗಳು ಸಹ ಅಕ್ಕಪಕ್ಕದ ಸ್ಥಳದಲ್ಲಿ ಹುಡುಕಾಟವನ್ನು ನಡೆಸುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಇಬ್ಬರು ಕೈದಿಗಳ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಅವರು ಸಿಕ್ಕ ತಕ್ಷಣ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಒಬ್ಬ ಕೈದಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ, ಮತ್ತೊಬ್ಬ ವಿಚಾರಣಾಧೀನ ಕೈದಿಯಾಗಿದ್ದ" ಎಂದು ತಿಳಿಸಿದ್ದಾರೆ.
ಹರಿದ್ವಾರ ಜಿಲ್ಲಾ ಕಾರಾಗೃಹದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದವು. ಆದ್ದರಿಂದ ಏಣಿಯನ್ನು ತರಿಸಲಾಗಿತ್ತು. ರಾಜ್ ಕುಮಾರ್ ಮತ್ತು ಪಂಕಜ್ ಮೊದಲೇ ತಯಾರಿಯನ್ನು ನಡೆಸಿ, ಏಣಿಯನ್ನು ಗೋಡೆಗೆ ವಾಲಿಸಿ ಇಟ್ಟುಕೊಂಡಿದ್ದರು. ನಾಟಕ ನಡೆಯುವಾಗ ಅಭಿನಯಿಸುತ್ತಿದ್ದ ಇಬ್ಬರೂ ಸಹ ಸೀತಾಮಾತೆ ಹುಡುಕಾಟದ ಸನ್ನಿವೇಶ ಬಂದಾಗ ಏಣಿ ಹತ್ತಿ, ಗೋಡೆ ಹಾರಿ ಪರಾರಿಯಾಗಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಕರ್ಮೇಂದ್ರ ಸಿಂಗ್ ಸಹ ನಾಟಕ ನೋಡಲು ಜೈಲಿಗೆ ಆಗಮಿಸಿದ್ದರು. ಕೈದಿಗಳು ಪರಾರಿಯಾದ ಮಾಹಿತಿ ತಿಳಿದ ಅವರು ಜೈಲಿನ ಸಿಬ್ಬಂದಿ ಕರ್ತವ್ಯ ಲೋಪದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೂ ಸಹ ನಾಟಕ ಆಯೋಜನೆ ಮಾಡಲಾಗಿತ್ತು, ಕೈದಿಗಳಿಗೆ ಸಿಗುವಂತೆ ಏಣಿಯನ್ನು ಇಟ್ಟು, ಜೈಲಿನ ಸಿಬ್ಬಂದಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.
ಪರಾರಿಯಾಗಿರುವ ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಅಲ್ಲದೇ ಅವರ ಹುಡುಕಾಟಕ್ಕೆ ಪೊಲೀಸರು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. ಜೈಲಿನ ಸಿಬ್ಭಂದಿಗಳ ವಿರುದ್ಧ ಇಲಾಖಾ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.












Click it and Unblock the Notifications