ಸೋತರೂ ಗುಜರಾತ್ ಪಾಟೀದಾರರ ಕಣ್ಮಣಿಯಾದ ಹಾರ್ದಿಕ್ ಪಟೇಲ್
Recommended Video

ಅಹಮದಾಬಾದ್, ಡಿಸೆಂಬರ್ 18: ಹಾರ್ದಿಕ್ ಪಟೇಲ್ ಬೆಂಬಲ ನೀಡಿದರೂ ಗುಜರಾತ್ ನಲ್ಲಿ ಕಾಂಗ್ರೆಸ್ ಮತ್ತೆ ಮಕಾಡೆ ಮಲಗಿದೆ. ಆದರೆ ಪಟೇಲ್ ಸಮುದಾಯದ ಕಣ್ಮಣಿಯಾಗಿ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ಮೂಡಿ ಬಂದಿದ್ದಾರೆ.
ಒಂದು ಕಾಲದಲ್ಲಿ ಪಟೇಲ್ ಸಮುದಾಯದ ಮೇರು ನಾಯಕನಾಗಿ ಗುರುತಿಸಿಕೊಂಡಿದ್ದವರು ಬಿಜೆಪಿಯ ಕೇಶುಭಾಯ್ ಪಟೇಲ್. ಸದ್ಯ ಅದೇ ಜಾಗಕ್ಕೆ ಹಾರ್ದಿಕ್ ಪಟೇಲ್ ಲಗ್ಗೆ ಹಾಕಿದ್ದಾರೆ.
ಲಕ್ಷ ಲಕ್ಷ ಜನರನ್ನು ಸೇರಿಸಿ ಕಾಂಗ್ರೆಸ್ ಪರವಾಗಿ ಸಮಾವೇಶಗಳನ್ನು ನಡೆಸಿದ ಹಾರ್ದಿಕ್ ಪಟೇಲ್ ಗುಜರಾತ್ ಚುನಾವಣೆಯ ಹಿನ್ನಲೆಯಲ್ಲಿ ಅಕ್ಷರಶಃ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದರು. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯ ರಾಜಕೋಟ್ ಪಶ್ಚಿಮ ಕ್ಷೇತ್ರ ಸೇರಿದಂತೆ ಬಿಜೆಪಿ ಶಕ್ತಿಕೇಂದ್ರಗಳಲ್ಲೇ ಹಾರ್ದಿಕ್ ಪಟೇಲ್ ತಮ್ಮ ಸಾಮರ್ಥ್ಯ ತೆರೆದಿಟ್ಟಿದ್ದರು.

ಮಿಷನ್ 150ಗೆ ಕೊಳ್ಳಿ
ಪಾಟೇಲ್ ಸಮುದಾಯವನ್ನು ಚುನಾವಣೆಗೂ ಮೊದಲು ಒಗ್ಗಟ್ಟಿನಲ್ಲಿಟ್ಟು ಬಿಜೆಪಿಯ ಮಿಷನ್-150ಗೆ ಕೊಳ್ಳಿ ಇಟ್ಟಿದ್ದರು. ಈ ಮೂಲಕ ಹಾರ್ದಿಕ್ ಪಟೇಲ್ ಗುಜರಾತ್ ರಾಜಕೀಯದಲ್ಲಿ ನವತಾರೆಯಾಗಿ ಉದಯಸಿದ್ದು ಈ ಚುನಾವಣೆಯ ವಿಶೇಷ. ಜತೆಗೆ ಪಾಟೀದಾರ್ ಸಮುದಾಯದ ಮೇರು ನಾಯಕನಾಗಿ ಅವರು ಮೂಡಿ ಬಂದಿದ್ದಾರೆ.

ಮಂಡಿಯೂರಿದ ಆನಂದಿಬೆನ್, ನಿತಿನ್ ಪಟೇಲ್
ಹಾಗೆ ನೋಡಿದರೆ ಪಾಟೀದಾರ್ ಸಮುದಾಯದ ಅನಭಿಷಿಕ್ತ ದೊರೆಯಾಗಿ ಗುರುತಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಯತ್ನಿಸಿದ್ದರು. ಆದರೆ 23ರ ಯುವಕ ಹಾರ್ದಿಕ್ ಪಟೇಲ್ ರಂತೆ ಲಕ್ಷ ಲಕ್ಷ ಜನ ಸೇರಿಸಲು ಇಬ್ಬರಿಗೂ ಸಾಧ್ಯವಾಗಿರಲಿಲ್ಲ.

ಅನಭಿಷಿಕ್ತ ದೊರೆ
ಹೀಗೆ ಚುನಾವಣೆಗೆ ನಿಲ್ಲುವಷ್ಟು ವಯಸ್ಸಾಗದಿದ್ದರೂ ಹಾರ್ದಿಕ್ ತಮ್ಮ ವಿಶಿಷ್ಟ ಛಾಪಿನ ಮೂಲಕ ಇವತ್ತು ಪಾಟೀದಾರ್ ಸಮುದಾಯದ ಅನಭಿಷಿಕ್ತ ದೊರೆಯಾಗಿ ಮೂಡಿ ಬಂದಿದ್ದಾರೆ.
ಅಷ್ಟೇ ಅಲ್ಲ ಹಾರ್ದಿಕ್ ಪಟೇಲರನ್ನೂ ಮೀರಿ ಒಬಿಸಿ ವರ್ಗಗಳನ್ನೂ ತಲುಪಿದ್ದು ಎಲ್ಲಾ ಸಮುದಾಯದ ನಾಯಕರಾಗುವ ಹಾದಿಯಲ್ಲಿದ್ದಾರೆ.

ಧೈರ್ಯಶಾಲಿ ಹಾರ್ದಿಕ್
ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಹಾರ್ದಿಕ್ ಪಟೇಲ್ ಇಟ್ಟ ದಿಟ್ಟ ಹೆಜ್ಜೆಗಳು ಅವರ ಧೈರ್ಯ, ಶಕ್ತಿ, ಸಮಾರ್ಥ್ಯವನ್ನು ಜನರ ಮುಂದೆ ತೆರೆದಿಡುವಂತೆ ಮಾಡಿದೆ.
ಎರಡು ವರ್ಷಗಳ ಹಿಂದೆ ಪಟೇಲರ ಮೀಸಲಾತಿ ಹೋರಾಟದ ಪರಿಣಾಮ ಹುಟ್ಟಿಕೊಂಡ ಗಲಭೆಯಿಂದಾಗ ಮೆಹ್ಸಾನ ಜಿಲ್ಲೆ ಪ್ರವೇಶಿಸದಂತೆ ಇವತ್ತಿಗೂ ಹಾರ್ದಿಕ್ ಪಟೇಲ್ ಗೆ ನಿರ್ಬಂಧವಿದೆ. ಇದೇ ಮೆಹ್ಸಾನ ಪಟೇಲರಲ್ಲಿ ಬರುವ ಕಡ್ವಾ ಪಟೇಲರ ಬಾಹುಳ್ಯ ದ ಪ್ರದೇಶವ. ಜತೆಗೆ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಪ್ರತಿನಿಧಿಸುವ ಕ್ಷೇತ್ರ. ಇದು ಪ್ರಧಾನಿ ನರೇಂದ್ರ ಮೋದಿ ತವರೂ ಹೌದು.
ಇಲ್ಲಿಗೆ ಪ್ರವೇಶವಿಲ್ಲದಿದ್ದರೂ ಗಡಿಯಲ್ಲಿ ಭಾರೀ ಸಮಾವೇಶ ನಡೆಸಿ ತಾನು ಬಿಜೆಪಿಗೆ ಹೆದರುವುದಿಲ್ಲ ಎಂಬ ಸಂದೇಶವನ್ನು ಹಾರ್ದಿಕ್ ಪಟೇಲ್ ರವಾನಿಸಿದ್ದರು.

ಭವ್ಯ ಭವಿಷ್ಯ
ಹೀಗೆ ಗುಜರಾತ್ ಚುನಾವಣೆ ಎಂದಿನಂತೆ ಬಿಜೆಪಿಗೆ ಮತ್ತೆ ಅಧಿಕಾರವನ್ನು ತಂದುಕೊಟ್ಟಿದ್ದರೂ ಹಲವು ಯುವ ನಾಯಕರು ಜನ್ಮ ತಾಳಲು ಈ ಚುನಾವಣೆ ಕಾರಣವಾಗಿದೆ. ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿಯಂಥ ನಾಯಕರ ಜತೆಗೆ ಹಾರ್ದಿಕ್ ಪಟೇಲ್ ಕೂಡ ಈ ಚುನಾವಣೆ ಮೂಲಕ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ.
ಇವತ್ತು ಹಾರ್ದಿಕ್ ಪಟೇಲ್ ಗೆ ಚುನಾವಣೆಗೆ ನಿಲ್ಲುವಷ್ಟು ವಯಸ್ಸಾಗದೇ ಇರಬಹುದು. ಅವರು ಚುನಾವಣೆಯಿಂದ ದೂರವೂ ಉಳಿದಿರಬಹುದು. ಆದರೆ ತಮಗಿರುವ ಜನಪ್ರಿಯತೆಯನ್ನು ಹೀಗೆ ಮುಂದುವರಿಸಿದಲ್ಲಿ ಭವ್ಯ ರಾಜಕೀಯ ಭವಿಷ್ಯ ಅವರಿಗಿದೆ.












Click it and Unblock the Notifications