ದೆಹಲಿ ಪ್ರಧಾನಿ ಮನೆ ಎದುರು ಹನುಮಾನ್ ಚಾಲೀಸ್ ಪಠಣ, ನಮಾಜ್, ಪ್ರಾರ್ಥನೆಗೆ ಅನುಮತಿ ಕೊಡಿ ಪ್ಲೀಸ್!
ನವದೆಹಲಿ, ಏಪ್ರಿಲ್ 25: ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡುವುದೇ ತೀವ್ರ ವಿವಾದವನ್ನು ಸೃಷ್ಟಿಸಿದೆ. ಇದರೆ ಮಧ್ಯೆ ಮುಂಬೈನ ಉತ್ತರ ಜಿಲ್ಲೆ ನ್ಯಾಷನಲಿಷ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಕಾರ್ಯಾಧ್ಯಕ್ಷ ಫಹ್ಮಿದಾ ಹಸನ್ ಖಾನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬರೆದ ಪತ್ರವು ಸಖತ್ ಸುದ್ದಿ ಆಗಿದೆ.
ದೇಶದ ಪ್ರತಿಯೊಂದು ಧರ್ಮದವರು ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನಿವಾಸದ ಎದುರು ಪ್ರಾರ್ಥನೆ ಮಾಡುವುದಕ್ಕೆ ಅನುಮತಿ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
"ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಮುಂದೆ ನಮಾಜ್ ಮಾಡಲು, ಹನುಮಾನ್ ಚಾಲೀಸಾ, ನವಕರ ಮಂತ್ರ, ಗುರು ಗ್ರಂಥ ಮತ್ತು ನೊವೇನಾವನ್ನು ಪಠಿಸಲು ಅನುಮತಿ ನೀಡುವಂತೆ ಮಹಾರಾಷ್ಟ್ರ ಮುಂಬೈನ ಕಾಂದಿವಲಿಯ ಫಹ್ಮಿದಾ ಹಸನ್ ಖಾನ್ ಆಗಿರುವ ನಾನು ವಿನಂತಿಸುತ್ತೇನೆ. ದಯವಿಟ್ಟು ದಿನಾಂಕ ಮತ್ತು ಸಮಯವನ್ನು ನನಗೆ ತಿಳಿಸಿ," ಎಂದು ಏಪ್ರಿಲ್ 23ರಂದು ಖಾನ್ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಉದ್ಧವ್ ಠಾಕ್ರೆ ನಿವಾಸದ ಎದುರಿಗೆ ಹನುಮಾನ್ ಚಾಲೀಸ್ ಪಠಣ
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಮಾತೋಶ್ರೀ ನಿವಾಸದ ಹೊರಗೆ ಹನುಮಾನ್ ಚಾಲೀಸ್ ಪಠಿಸುವುದಾಗಿ ಅಮರಾವತಿ ಲೋಕಸಭಾ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಘೋಷಿಸಿದರು. ಆದರೆ, ಸಂಸದೆ ಹಾಗೂ ಶಾಸಕರಾದ ದಂಪತಿಗೆ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಇಬ್ಬರನ್ನೂ ಪೊಲೀಸರು ಬಂಧಿಸಿದರೆ, ಸ್ಥಳೀಯ ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು.

ಹಣದುಬ್ಬರ ಕಡಿವಾಣಕ್ಕೆ ಧರ್ಮದ ಅಜೆಂಡಾ ಸಹಕಾರಿಯೇ?
ಸಂಸದೆ ಆಗಿರುವ ನವನೀತ್ ರಾಣಾ ದೇಶದ ಹಣದುಬ್ಬರ, ನಿರುದ್ಯೋಗ ಮತ್ತು ಜನರ ಕಲ್ಯಾಣಕ್ಕೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಮಾತನಾಡಬೇಕಿತ್ತು. ಆದರೆ ಧರ್ಮದ ಅಜೆಂಡಾವನ್ನು ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ದೇಶದ ಪ್ರಗತಿಗೆ ಇದು ಸಹಾಯ ಮಾಡುತ್ತದೆಯೇ?, ಭಾರತದಲ್ಲಿ ಹಣದುಬ್ಬರ, ನಿರುದ್ಯೋಗ ಮತ್ತು ಹಸಿವನ್ನು ಕಡಿಮೆ ಮಾಡಿದರೆ, ನಾನೂ ಕೂಡ ಅಂತಹ ಚಟುವಟಿಕೆಗಳಲ್ಲಿ ಭಾಗವಹಿಸಲು ಬಯಸುತ್ತೇನೆ" ಎಂದು ಎನ್‌ಸಿಪಿಯ ಫಹ್ಮಿದಾ ಹಸನ್ ಖಾನ್ ಹೇಳಿದ್ದಾರೆ.

ಎನ್‌ಸಿಪಿ ನಾಯಕನ ಪತ್ರಕ್ಕೆ ಬಿಜೆಪಿ ಶಾಸಕರ ಪ್ರತಿಕ್ರಿಯೆ
ಎನ್‌ಸಿಪಿ ನಾಯಕ ಫಹ್ಮಿದಾ ಹಸನ್ ಖಾನ್ ಅವರಿಗೆ ಅನುಮತಿ ಕೇಳುವ ಹಕ್ಕಿದೆ. ಧಾರ್ಮಿಕ ಪ್ರಾರ್ಥನೆಗಳನ್ನು ಓದಬಹುದು. "ಹನುಮಾನ್ ಚಾಲೀಸಾ ಪಠಣದಲ್ಲಿ ಯಾವುದೇ ರಾಜಕೀಯವಿಲ್ಲ. ಇದು ಒಬ್ಬರ ಭಕ್ತಿಯ ವಿಷಯವಾಗಿದೆ," ಎಂದು ಮುಲುಂಡ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಿಹಿರ್ ಕೊಟೆಚಾ ಹೇಳಿದ್ದಾರೆ.
"ನಮಾಜ್ ಮಾಡುವವರು ಅಥವಾ ಹನುಮಾನ್ ಚಾಲೀಸಾ ಪಠಿಸಲು ಬಯಸುವವರು ತಮ್ಮಿಷ್ಟದಂತೆ ಮಾಡಬಹುದು. ಭಾರತದಲ್ಲಿ ಯಾವುದೇ ಧರ್ಮದ ಅನುಸರಣೆಯನ್ನು ತಡೆಯುವ ಸಂಸ್ಕೃತಿ ಇಲ್ಲ. ಆ ಪ್ರಾರ್ಥನೆಯು ಪ್ರದರ್ಶನಕ್ಕಾಗಿ ಅನುಸರಿಸಬಾರದು. ಅವರ ಮನೆಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿದೆ," ಎಂದು ಘಾಟ್‌ಕೋಪರ್ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಹೇಳಿದ್ದಾರೆ.

ನವನೀತ್ ರಾಣಾ ಮತ್ತು ರವಿ ರಾಣಾ ನ್ಯಾಯಾಂಗ ಬಂಧನ
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಎದುರಿಗೆ ಹನುಮಾನ್ ಚಾಲೀಸ್ ಪಠಣ ಮಾಡಬೇಕು ಎಂದು ಘೋಷಿಸಿದ್ದ ಸಂಸದೆ ನವನೀತ್ ರಾಣಾ ಮತ್ತು ರವಿ ರಾಣಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಸಂಸದ-ಶಾಸಕ ದಂಪತಿಯ ಅರ್ಜಿಯನ್ನು ಕೋರ್ಟ್ ಏಪ್ರಿಲ್ 29ರಂದು ವಿಚಾರಣೆ ನಡೆಸಲಿದೆ.












Click it and Unblock the Notifications