ಜ್ಞಾನವಾಪಿ ವಿವಾದ: ಶಿವಲಿಂಗ ಪೂಜೆ ಬಗ್ಗೆ ತೀರ್ಪು ನೀಡಲಿರುವ ವಾರಣಾಸಿ ಕೋರ್ಟ್
ವಾರಣಾಸಿ, ನ.08: ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಇದಕ್ಕೆ ಪೂಜೆ ಸಲ್ಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ವಾರಣಾಸಿಯ ತ್ವರಿತ ನ್ಯಾಯಾಲಯ ಮಂಗಳವಾರ ತೀರ್ಪು ನೀಡಲಿದೆ.
ಸ್ವಯಂಭೂ ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರನ ಪ್ರಾರ್ಥನೆಗೆ ತಕ್ಷಣದ ಅನುಮತಿ, ಸಂಪೂರ್ಣ ಜ್ಞಾನವಾಪಿ ಸಂಕೀರ್ಣವನ್ನು ಹಿಂದೂಗಳಿಗೆ ಹಸ್ತಾಂತರಿಸುವುದು ಮತ್ತು ಜ್ಞಾನವಾಪಿ ಸಂಕೀರ್ಣದ ಆವರಣದೊಳಗೆ ಮುಸ್ಲಿಮರ ಪ್ರವೇಶ ನಿಷೇಧಿಸುವುದು ಸೇರಿದಂತೆ ಮೂರು ಪ್ರಮುಖ ಬೇಡಿಕೆಗಳ ಮೇಲೆ ಸಿವಿಲ್ ನ್ಯಾಯಾಧೀಶ ಹಿರಿಯ ವಿಭಾಗ ತ್ವರಿತ ನ್ಯಾಯಾಲಯವು ತನ್ನ ತೀರ್ಪು ನೀಡಲಿದೆ.
ಪ್ರಸ್ತುತ ಜ್ಞಾನವಾಪಿ ಮಸೀದಿ ಆವರಣದಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇನ್ನು, ಅಕ್ಟೋಬರ್‌ನಲ್ಲಿ ನಡೆದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ವಾರಣಾಸಿ ನ್ಯಾಯಾಲಯವು ಶಿವಲಿಂಗದ ವೈಜ್ಞಾನಿಕ ತನಿಖೆಗೆ ಅನುಮತಿ ನೀಡಲು ನಿರಾಕರಿಸಿತ್ತು. ಹಿಂದೂ ಅರ್ಜಿದಾರರು ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ಶಿವಲಿಂಗ ಕಂಡು ಬಂದಿದೆ ಎಂದು ಹೇಳಿಕೊಳ್ಳುವ ರಚನೆಯ ಕಾರ್ಬನ್ ಡೇಟಿಂಗ್ ಅನ್ನು ಒತ್ತಾಯಿಸಿದ್ದರು.

ಜ್ಞಾನವಾಪಿಯಲ್ಲಿ ಸಿಕ್ಕಿರುವುದು ಶಿವಲಿಂಗವೂ, ಕಾರಂಜಿಯೋ?
ಮಸೀದಿ ಆವರಣದಲ್ಲಿ ಸಿಕ್ಕಿರುವ ರಚನೆಯು 'ಕಾರಂಜಿ' ಎಂದು ಮುಸ್ಲಿಂ ಅರ್ಜಿದಾರರು ವಾದಿಸಿದ್ದಾರೆ. ಬಳಿಕ ಹಿಂದೂ ಅರ್ಜಿದಾರರು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 22 ರಂದು ಅರ್ಜಿಯನ್ನು ಸಲ್ಲಿಸಿದ್ದು, ಶಿವಲಿಂಗದಂತಹ ರಚನೆಯ ಕಾರ್ಬನ್ ಡೇಟಿಂಗ್ ಮತ್ತು ಇತರ ವೈಜ್ಞಾನಿಕ ಪರೀಕ್ಷೆಗೊಳಪಡಿಸಲು ಒತ್ತಾಯಿಸಿದ್ದರು.
ಸೆಪ್ಟೆಂಬರ್ 29 ರಂದು ವಿಚಾರಣೆಯಲ್ಲಿ, ವಾರಣಾಸಿ ನ್ಯಾಯಾಲಯವು, "ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಸಮೀಕ್ಷೆಗೆ ಆದೇಶ ನೀಡುವುದು ಸರಿಯಲ್ಲ" ಎಂದಿತ್ತು.
ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದ ಶಿವಲಿಂಗದ ವೈಜ್ಞಾನಿಕ ತನಿಖೆಗೆ ಅನುಮತಿ ನಿರಾಕರಿಸಿದ ವಾರಣಾಸಿ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನ ಮೊರೆ ಹೋಗುವುದಾಗಿ ಹಿಂದೂ ಅರ್ಜಿದಾರರು ಹೇಳಿದ್ದಾರೆ.

ಶಿವಲಿಂಗದ ವೈಜ್ಞಾನಿಕ ತನಿಖೆಗೆ ಸುಪ್ರೀಂಗೆ ಅರ್ಜಿ
ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪರ ವಕೀಲ ವಿಷ್ಣು ಜೈನ್, "ಕಾರ್ಬನ್ ಡೇಟಿಂಗ್ ಕೋರುವ ನಮ್ಮ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಆದೇಶದ ವಿರುದ್ಧ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಅಲ್ಲಿ ಅದನ್ನು ಪ್ರಶ್ನಿಸುತ್ತೇವೆ. ನಾನು ಈಗಲೇ ದಿನಾಂಕವನ್ನು ಘೋಷಿಸಲು ಸಾಧ್ಯವಿಲ್ಲ, ಆದರೆ ನಾವು ಶೀಘ್ರದಲ್ಲೇ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇನೆ" ಎಂದಿದ್ದಾರೆ.
ಹಿಂದೂ ಪರ ವಾದಿಸುತ್ತಿರುವ ಮತ್ತೊಬ್ಬ ವಕೀಲ ಮದನ್ ಮೋಹನ್ ಯಾದವ್, "ಕಾರ್ಬನ್ ಡೇಟಿಂಗ್ ಕೋರಿಕೆಯ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದ್ದರೂ, ಹೈಕೋರ್ಟ್‌ಗೆ ಹೋಗುವ ಆಯ್ಕೆಯು ಲಭ್ಯವಿದೆ. ಹಿಂದೂ ಅರ್ಜಿದಾರರು ಹೈಕೋರ್ಟ್‌ನ ಮುಂದೆಯೂ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ" ಎಂದು ಹೇಳಿದ್ದಾರೆ.
ಕಾರ್ಬನ್ ಡೇಟಿಂಗ್ ಎನ್ನುವುದು ಪುರಾತತ್ತ್ವ ಶಾಸ್ತ್ರದ ವಸ್ತು ಅಥವಾ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ವಯಸ್ಸನ್ನು ಕಂಡುಹಿಡಿಯುವ ವೈಜ್ಞಾನಿಕ ಪ್ರಕ್ರಿಯೆಯಾಗಿದೆ.

ಶಿವಲಿಂಗಕ್ಕೆ ಧಕ್ಕೆಯಾದರೆ ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೂ ಧಕ್ಕೆ
ಸುಪ್ರೀಂ ಕೋರ್ಟ್‌ನ ಮೇ 17 ರ ಆದೇಶವನ್ನು ಉಲ್ಲೇಖಿಸಿದ ವಾರಣಾಸಿ ನ್ಯಾಯಾಲಯವು "ಶಿವಲಿಂಗವನ್ನು ಮಾದರಿಗಳನ್ನು ತೆಗೆದುಕೊಳ್ಳುವ ಮೂಲಕ ಹಾನಿಗೊಳಿಸಿದರೆ, ಅದು ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸುತ್ತದೆ" ಎಂದು ಹೇಳಿದೆ.
ಶಿವಲಿಂಗಕ್ಕೆ ಧಕ್ಕೆಯಾದರೆ ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗಬಹುದು ಎಂದು ವಾರಣಾಸಿ ನ್ಯಾಯಾಲಯ ಹೇಳಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಜ್ಞಾನವಾಪಿ ಮಸೀದಿ ಶೃಂಗಾರ್ ಗೌರಿ ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು.
ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಸಂಬಂಧಿಸಿದ ಪ್ರಕರಣವನ್ನು ಸಿವಿಲ್ ನ್ಯಾಯಾಧೀಶರಿಂದ ವಾರಣಾಸಿಯ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿ ಮೇ 20 ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ವೈಜ್ಞಾನಿಕ ತನಿಖೆಗೆ ನೀಡುವುದು ಸುಪ್ರೀಂ ಅದೇಶಕ್ಕೆ ವಿರುದ್ಧ
ಮುಸ್ಲಿಂ ಅರ್ಜಿದಾರರನ್ನು ಪ್ರತಿನಿಧಿಸುವ ಅಖ್ಲಾಕ್ ಅಹ್ಮದ್, ಹಿಂದೂ ಅರ್ಜಿದಾರರು ಮಾಡಿದ ಮನವಿಯನ್ನು ಪರಿಗಣಿಸುವಂತಿಲ್ಲ ಏಕೆಂದರೆ ಇದು ಒಂದು ರಚನೆಯನ್ನು ರಕ್ಷಿಸುವ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
"ಕಾರ್ಬನ್ ಡೇಟಿಂಗ್ ಕುರಿತ ಅರ್ಜಿಗೆ ನಾವು ಪ್ರತಿಕ್ರಿಯಿಸಿದ್ದೇವೆ. ಕಲ್ಲಿಗೆ ಇಂಗಾಲವನ್ನು ಹೀರಿಕೊಳ್ಳುವ ಸಾಮರ್ಥ್ಯವಿಲ್ಲ. ಹಿಂದೂಗಳ ಪ್ರಕಾರ, ಪ್ರಕ್ರಿಯೆಯು ವೈಜ್ಞಾನಿಕವಾಗಿರುತ್ತದೆ. ಹಾಗಿದ್ದರೂ, ವಸ್ತುವನ್ನು ಟ್ಯಾಂಪರಿಂಗ್ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.
ಮುಸ್ಲಿಂ ಪರವಾಗಿರುವ ಮತ್ತೊಬ್ಬ ವಕೀಲ ತೋಹಿದ್ ಖಾನ್, "ಕಾರ್ಬನ್ ಡೇಟಿಂಗ್ ಕೋರಿ ಸಲ್ಲಿಸಿದ ಅರ್ಜಿ ಸ್ವೀಕಾರಾರ್ಹವೇ ಅಥವಾ ತಿರಸ್ಕರಿಸಬೇಕೇ ಎಂಬುದರ ಕುರಿತು ನ್ಯಾಯಾಲಯ ತನ್ನ ತೀರ್ಪು ನೀಡಿದೆ. ರಚನೆಯು ಶಿವಲಿಂಗವಲ್ಲ ಕಾರಂಜಿಯಾಗಿದೆ" ಎಂದಿದ್ದಾರೆ.












Click it and Unblock the Notifications