ಮಧ್ಯಪ್ರದೇಶದಲ್ಲಿ ನ್ಯಾಯಧೀಶರಿಂದ ಲೈಂಗಿಕ ಕಿರುಕುಳ
ಗ್ವಾಲಿಯರ್, ಆ.4: ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವ ಸಂದರ್ಭದಲ್ಲೇ ಹೈಕೊರ್ಟ್ ನ್ಯಾಯಾಧೀಶರೊಬ್ಬರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದ್ದು, ಇಡೀ ನ್ಯಾಯಾಂಗ ವ್ಯವಸ್ಥೆಯೇ ತಲೆ ತಗ್ಗಿಸುವಂತೆ ಮಾಡಿದೆ.
ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಗ್ವಾಲಿಯರ್ ಹೆಚ್ಚುವರಿ ನ್ಯಾಯಾಧೀಶೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಹೈಕೋರ್ಟ್ ನ್ಯಾಯಾಧೀಶರು ತಮಗೆ ಐಟಂ ಹಾಡಿಗೆ ಡ್ಯಾನ್ಸ್ ಮಾಡುವಂತೆ ಸೂಚಿಸಿದ್ದರು ಮತ್ತು ಡ್ಯಾನ್ಸ್ ಮಾಡದಿದ್ದರಿಂದ ತಮ್ಮನ್ನು ಬೇರೆ ಕಡೆ ವರ್ಗಾವಣೆ ಮಾಡಿಸಲು ಪ್ರಭಾವ ಬೀರಿದ್ದಾರೆ ಎಂದು ಮಹಿಳಾ ನ್ಯಾಯಾಧೀಶೆ, ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮತ್ತು ಕೇಂದ್ರ ಕಾನೂನು ಸಚಿವರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.
ಅರೋಪ ಅಲ್ಲಗೆಳೆದ ಜಡ್ಜ್: ನ್ಯಾಯಾಧೀಶೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಿಲುಕಿರುವ ಮಧ್ಯಪ್ರದೇಶದ ಹೈಕೋರ್ಟ್‌ನ ನ್ಯಾಯಾಧೀಶರು 'ಆರೋಪ ಸಾಬೀತಾದರೆ ಮರಣದಂಡನೆಗೆ ಸಿದ್ಧ' ಎಂದು ಸೋಮವಾರ ಹೇಳಿದ್ದಾರೆ. ಈ ಸಂಬಂಧ ಮಧ್ಯಪ್ರದೇಶದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿರುವ ಅಪಾಧಿತ ನ್ಯಾಯಾಧೀಶರು, ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಕೋರಿದ್ದು, ಪ್ರಕರಣದ ತನಿಖೆಗೆ ಸಮಿತಿಯೊಂದನ್ನು ರಚಿಸಿ, ಆ ಸಮಿತಿಯ ವಿಚಾರಣೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

ಇದೀಗ ನೊಂದ ಮಹಿಳೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಆರ್.ಎಂ.ಲೋಧ, ನ್ಯಾಯಾಧೀಶರಾದ ಎಚ್.ಎಲ್.ದತ್ತು, ಟಿ.ಎಸ್.ಠಾಕೂರ್, ಅನಿಲ್.ಆರ್. ಧಾವೆ, ದೀಪಕ್ ಮಿರ್ಶ, ಅರ್ಜುನ್ ಮಿಶ್ರ ಹಾಗೂ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಿದ್ದಾರೆ. ತನಗೆ ನ್ಯಾಯಾಧೀಶರು ಲೈಂಗಿಕ ಕಿರುಕುಳ ನೀಡಿದ್ದು, ರಕ್ಷಣೆ ನೀಡಬೇಕೆಂದು ನೊಂದ ಮಹಿಳೆ ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿರುವ ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.












Click it and Unblock the Notifications