ವಿಕ್ಸ್ ಮಾರಾಟದಿಂದ CEOವರೆಗೆ: ಲೈಫ್ ಟೈಮ್ ಲಿಬರ್ಟೇರಿಯನ್ ಪ್ರಶಸ್ತಿ'ಗೆ ಭಾಜನರಾದ ಗುರುಚರಣ್ ದಾಸ್ ನಿಮಗೆ ಗೊತ್ತಾ?
Gurcharan Das ಇದೀಗ ಕಾರ್ಪೊರೇಟ್ ಮತ್ತು ಸಾಹಿತ್ಯ ವಲಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ಹೆಸರು. ಭಾರತದ ಧೂಳು ತುಂಬಿದ ರಸ್ತೆಯ ಬೀದಿಗಳಲ್ಲಿ, ಸಣ್ಣ ಪುಟ್ಟ ಅಂಗಡಿಗಳಲ್ಲಿ 'ವಿಕ್ಸ್' ಮಾರಾಟ ಮಾಡುತ್ತಿದ್ದ ಯುವಕನೊಬ್ಬ, ಮುಂದೆ ಜಾಗತಿಕ ಮಟ್ಟದ ಎಮ್‌ಎನ್‌ಸಿ ಕಂಪನಿಯೊಂದರ ಸಿಇಒ ಆಗಿ ಬೆಳೆದ ಕಥೆ ನಿಜಕ್ಕೂ ಯುವಜನತೆಗೆ ಸ್ಫೂರ್ತಿ. ಜೀವನದ ಒಂದು ಒಳ್ಳೇಯ ಮಟ್ಟದಲ್ಲಿದ್ದಾಗ, ತಮ್ಮ 50ನೇ ವಯಸ್ಸಿನಲ್ಲಿ ಕಾರ್ಪೊರೇಟ್ ಯಶಸ್ಸನ್ನ ಸಂಪೂರ್ಣವಾಗಿ ಬಿಟ್ಟು, ಫುಲ್ ಟೈಮ್ ಲೇಖಕರಾಗಿ ಬದಲಾದ ಗುರುಚರಣ್ ದಾಸ್ ಅವರೀಗ ತಮ್ಮ 82ನೇ ವಯಸ್ಸಿನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ ನೋಡಿ.

ಹೌದು, ಗುರುಚರಣ್ ದಾಸ್ ಅವರು ಪ್ರತಿಷ್ಠಿತ 'ಲೈಫ್ ಟೈಮ್ ಲಿಬರ್ಟೇರಿಯನ್ ಪ್ರಶಸ್ತಿ' ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಬೀದಿ ಬದಿಯ ವಿಕ್ಸ್ ಮಾರಾಟದವರೆಗೆ
ಗುರುಚರಣ್ ಅವರ ಈ ಪಯಣ ಶುರುವಾಗಿದ್ದು ಅವರ 17ನೇ ವಯಸ್ಸಿನಲ್ಲಿ. ಆ ಸಂದರ್ಭದಲ್ಲಿ ಅವರಿಗೆ ಸಿಕ್ಕ ಸ್ಕಾಲರ್‌ಶಿಪ್ ಅವರನ್ನ ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಕೊಂಡೊಯ್ದಿತು. ಅಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ, ಪತ್ರಿಕೆಯೊಂದರಲ್ಲಿ ಬಂದಿರುವ ಜಾಹೀರಾತನ್ನ ನೋಡಿ ರಿಚರ್ಡ್‌ಸನ್ ಹಿಂದೂಸ್ತಾನ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದರು. ಈ ಕೆಲಸದ ಭಾಗವಾಗಿ ಅವರು ಭಾರತದ ಹಳ್ಳಿಗಳು, ಸಣ್ಣ ಪುಟ್ಟ ಮಾರುಕಟ್ಟೆಗಳಲ್ಲಿ 'ವಿಕ್ಸ್ ವೆಪೋರಬ್'ಮಾರಾಟ ಮಾಡಿದರು. ಪುಸ್ತಕಗಳಲ್ಲಿ ಕಲಿಯಲಾಗದ ವ್ಯವಹಾರದ ಪಾಠಗಳನ್ನ ಅವರು ಕಲಿತಿದ್ದು ಇದೇ ಬೀದಿ ಬದಿಯ ವ್ಯಾಪಾರ ಹಾಗೂ ಜನಸಾಮಾನ್ಯರ ಒಡನಾಟದಿಂದ.
ತಮ್ಮ ಮೊದಲ ಕೆಲಸದಲ್ಲಿ ತೋರಿದ ಶ್ರದ್ಧೆ, ಕಠಿಣ ಪರಿಶ್ರಮ ಹಾಗೂ ಮಾರುಕಟ್ಟೆಯ ಕುರಿತು ಮೂಡಿದ ಅರಿವು ಅವರನ್ನ ಕಾರ್ಪೊರೇಟ್ ಜಗತ್ತಿನ ತುತ್ತತುದಿಗೆ ಕರೆದುಕೊಂಡು ಹೋಯಿತು. ಸಂಸ್ಥೆಯಲ್ಲಿ ಹಂತ ಹಂತವಾಗಿ ಮೇಲೇರಿದ ಗುರುಚರಣ್ ದಾಸ್, ಅಂತಿಮವಾಗಿ ಪ್ರಸಿದ್ಧ ಪಿ ಅಂಡ್ ಜಿ ಕಂಪನಿಯ ಸಿಇಒ ಆಗಿ ನೇಮಕಗೊಂಡರು. ಇವರ ನಾಯಕತ್ವ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಲಿಲ್ಲ. ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ವಿಭಾಗದ ನಾಯಕತ್ವವನ್ನ ಯಶಸ್ವಿಯಾಗಿ ನಿಭಾಯಿಸಿದ ಅವರು, ನಂತರದ ದಿನಗಳಲ್ಲಿ ಪಿ ಅಂಡ್ ಜಿ ಗ್ಲೋಬಲ್ ಮಟ್ಟದ ಕಾರ್ಯತಂತ್ರ ರೂಪಿಸುವ ತಂಡದಲ್ಲೂ ಮಹತ್ವದ ಜವಾಬ್ದಾರಿ ನಿರ್ವಹಿಸಿದರು.
50ನೇ ವಯಸ್ಸಿನಲ್ಲಿ ಬರವಣಿಗೆಗಾಗಿ ಕಾರ್ಪೊರೇಟ್ ಬದುಕಿಗೆ ವಿದಾಯ
ವ್ಯಾಪಾರ ಮತ್ತು ಆಡಳಿತ ಅವರ ವೃತ್ತಿಯಾಗಿದ್ದರೂ, ಬರವಣಿಗೆ ಅವರ ಉಸಿರಾಗಿತ್ತು. ಸತತ 25 ವರ್ಷಗಳ ಕಾಲ ತಮ್ಮ ಬಿಡುವಿಲ್ಲದ ಕಾರ್ಪೊರೇಟ್ ವೃತ್ತಿಜೀವನದ ನಡುವೆಯೂ ವೀಕೆಂಡ್‌ನಲ್ಲಿ ಅವರು ತಪ್ಪದೆ ಬರವಣಿಗೆಯನ್ನ ಮುಂದುವರಿಸಿದ್ದರು. ಆದರೆ 50ನೇ ವಯಸ್ಸಿಗೆ ಕಾಲಿಡುತ್ತಿದ್ದಂತೆ, ತಮ್ಮ ಕಚೇರಿಯ ಐಷಾರಾಮಿ ಬದುಕು, ದೊಡ್ಡ ಹುದ್ದೆ ಎಲ್ಲವನ್ನೂ ತ್ಯಜಿಸಿ, ಪೂರ್ಣಪ್ರಮಾಣದ ಲೇಖಕರಾಗುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಇದು ಹಲವರಿಗೆ ಅಚ್ಚರಿ ಮೂಡಿಸಿದರೂ, ದಾಸ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು.
ಇಂಡಿಯಾ ಅನ್‌ಬೌಂಡ್ ಲೇಖಕನಿಗೆ ಒಲಿದ ಲೈಫ್ ಟೈಮ್ ಲಿಬರ್ಟೇರಿಯನ್ ಪ್ರಶಸ್ತಿ
ಲೇಖಕರಾಗಿ ಬದಲಾದ ನಂತರದ ಮೂರು ದಶಕಗಳಲ್ಲಿ ಅವರು ʼಇಂಡಿಯಾ ಅನ್‌ಬೌಂಡ್ʼ ಮತ್ತು 'ದಿ ಡಿಫಿಕಲ್ಟಿ ಆಫ್ ಬೀಯಿಂಗ್ ಗುಡ್'ನಂತಹ ಪ್ರಸಿದ್ಧ ಕೃತಿಗಳನ್ನ ರಚಿಸಿದ್ದಾರೆ. ಅವರ ಈ ಪುಸ್ತಕಗಳು ಮುಖ್ಯವಾಗಿ ಸ್ವಾತಂತ್ರ್ಯ, ಉದ್ಯಮಶೀಲತೆ ಹಾಗೂ ವೈಯಕ್ತಿಕ ಜವಾಬ್ದಾರಿಗಳ ಮಹತ್ವವನ್ನ ಸಮಾಜಕ್ಕೆ ಸಾರುತ್ತವೆ. ಈ ಸುದೀರ್ಘ ಸೇವೆಯನ್ನ ಗುರುತಿಸಿ, ಇದೀಗ ಅವರ 82ನೇ ವಯಸ್ಸಿನಲ್ಲಿ 'ಲೈಫ್ ಟೈಮ್ ಲಿಬರ್ಟೇರಿಯನ್ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.


Click it and Unblock the Notifications
