ಗುಜರಾತ್‌ನಲ್ಲಿ ಹೆಚ್ಚಾಗುತ್ತಿದೆ ಬಡತನ: ಬಿಪಿಎಲ್ ಕಾರ್ಡ್ ಕುಟುಂಬಗಳ ಸಂಖ್ಯೆ ಹೆಚ್ಚಳ : ವರದಿ
ಗುಜರಾತ್‌ನ ಜನಸಂಖ್ಯೆಯ ಮೂರನೇ ಒಂದು ಭಾಗ ಅಥವಾ 31 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬಡತನ ರೇಖೆಯ (ಬಿಪಿಎಲ್) ಕೆಳಗೆ ವಾಸಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ತಿಂಗಳಿಗೆ 816 ರೂಪಾಯಿಗಳಿಗಿಂತ ಕಡಿಮೆ ಮತ್ತು ನಗರ ಪ್ರದೇಶಗಳಲ್ಲಿ 1000 ರೂಪಾಯಿಗಳಿಗಿಂತ ಕಡಿಮೆ ಅಥವಾ ದಿನಕ್ಕೆ ಗ್ರಾಮೀಣ ಪ್ರದೇಶದಲ್ಲಿ 26 ರೂಪಾಯಿ, ನಗರ ಪ್ರದೇಶದಲ್ಲಿ 32 ರೂಪಾಯಿಗಿಂತ ಕಡಿಮೆ ಆದಾರ ಹೊಂದಿದ್ದರೆ ಅವರನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ಎಂದು ನಿರ್ಧರಿಸಲಾಗುತ್ತದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಸೆಪ್ಟೆಂಬರ್ 14 ರಂದು, ಕಾಂಗ್ರೆಸ್ ಶಾಸಕ ತುಷಾರ್ ಚೌಧರಿ ಅವರ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಬಚುಭಾಯಿ ಮಗನ್‌ಭಾಯ್ ಖಬಾದ್ ಗುಜರಾತ್‌ನಲ್ಲಿ 31,61,310 ಬಿಪಿಎಲ್ ಕುಟುಂಬಗಳನ್ನು ಹೊಂದಿವೆ ಎಂದು ಮಾಹಿತಿ ನೀಡಿದರು. ಇವುಗಳಲ್ಲಿ 16,28,744 ಕುಟುಂಬಗಳು ಅತ್ಯಂತ ಬಡವರ ವರ್ಗಕ್ಕೆ ಸೇರಿದ್ದರೆ, 15,32,566 ಬಡ ಕುಟುಂಬಕ್ಕೆ ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದಲ್ಲದೆ, 2020-21 ರಲ್ಲಿ, 1,047 ಕುಟುಂಬಗಳು ಬಿಪಿಎಲ್ ವರ್ಗಕ್ಕೆ ಸೇರ್ಪಡೆಯಾಗಿವೆ ಕೇವಲ 14 ಕುಟುಂಬಗಳು ಮಾತ್ರ ಬಿಪಿಎಲ್ ವರ್ಗದಿಂದ ಹೊರಬಂದಿವೆ. 2021-22ರಲ್ಲಿ ಹೊಸ ಬಿಪಿಎಲ್ ಕುಟುಂಬಗಳ ಸಂಖ್ಯೆ 1,751 ಆಗಿದ್ದು, ಎರಡು ಕುಟುಂಬಗಳು ಮಾತ್ರ ಈ ವರ್ಗದಿಂದ ದೂರ ಸರಿದಿದೆ. 2022-23 ರಲ್ಲಿ ಹೊಸದಾಗಿ ಬಿಪಿಎಲ್ ವರ್ಗಕ್ಕೆ 303 ಕುಟುಂಬಗಳಲ್ಲಿ ಸೇರ್ಪಡೆಯಾಗಿವೆ. ಒಂದು ಕುಟುಂಬ ಮಾತ್ರ ಬಿಪಿಎಲ್ ವರ್ಗದಿಂದ ಹೊರಬಂದಿದೆ ಎಂದು ವಿವರ ನೀಡಿದ್ದಾರೆ.
ಜನಸಂಖ್ಯೆಯ ಮೂರನೇ ಒಂದು ಭಾಗ ಬಡತನ ರೇಖೆಗಿಂತ ಕೆಳಗೆ
ಅಹಮದಾಬಾದ್ ಮೂಲದ ಅರ್ಥಶಾಸ್ತ್ರಜ್ಞ ಹೇಮಂತ್ ಕುಮಾರ್ ಷಾ ಅವರ ಹೇಳಿಕೆ ಪ್ರಕಾರ, ಒಂದು ಕುಟುಂಬಕ್ಕೆ ಸರಾಸರಿ ಆರು ಸದಸ್ಯರನ್ನು ಹೊಂದಿರುವ 31.64 ಲಕ್ಷ ಬಡ ಕುಟುಂಬಗಳನ್ನು ನಾವು ಪರಿಗಣಿಸಿದರೆ, ಬಿಪಿಎಲ್ ಕಾರ್ಡ್ ಹೊಂದಿರುವ ಜನಸಂಖ್ಯೆ 1 ಕೋಟಿ 89 ಲಕ್ಷಗಳು, ಅಂದರೆ ಗುಜರಾತ್‌ನ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದ ಜನ ಬಡತನ ರೇಖೆಗಿಂತ ಕೆಳಗಡೆ ಇದ್ದಾರೆ ಎಂದು ವಿವರಿಸಿದ್ದಾರೆ.
ಜನಸಂಖ್ಯೆಯ 38.09 ಪ್ರತಿಶತ ಮಂದಿಗೆ ಅಪೌಷ್ಠಿಕತೆ
2023ರ ಜುಲೈನಲ್ಲಿ ನೀತಿ ಆಯೋಗವು ಬಿಡುಗಡೆ ಮಾಡಿದ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕ (ಎಂಪಿಐ) ವರದಿಯ ಪ್ರಕಾರ, ರಾಜ್ಯದಲ್ಲಿನ ಜನಸಂಖ್ಯೆಯ 38.09 ಪ್ರತಿಶತದಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿರುವುದರಿಂದ ಗುಜರಾತ್ ಪೌಷ್ಟಿಕಾಂಶದ ವಿಚಾರದಲ್ಲಿ ಇನ್ನೂ ಸುಧಾರಿಸಬೇಕಿದೆ ಎಂದು ಹೇಳಿತ್ತು. ಗ್ರಾಮೀಣ ಗುಜರಾತ್ ಜನಸಂಖ್ಯೆಯ ಅರ್ಧದಷ್ಟು ಜನರು ಪೌಷ್ಟಿಕಾಂಶದಿಂದ ವಂಚಿತರಾಗಿದ್ದಾರೆ (ಶೇ. 44.45), ಆದರೆ ನಗರ ಪ್ರದೇಶಗಳ ಅಂಕಿಅಂಶವು ಶೇಕಡಾ 28.97 ರಷ್ಟಿದೆ ಎಂದು ವರದಿಯಲ್ಲಿ ಹೇಳಿತ್ತು.












Click it and Unblock the Notifications