Gujarat Election Results 2022: ವಡ್ಗಾಮ್ ಉಳಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಜಿಗ್ನೇಶ್ ಮೇವಾನಿ
ಅಹಮದಾಬಾದ್, ಡಿ. 08: ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿ ಹೀನಾಯ ಸೋಲು ಅನುಭವಿಸಿದೆ. ಆದರೆ, ಗುಜರಾತ್ ವಡ್ಗಾಮ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ದಲಿತ ನಾಯಕ ಜಿಗ್ನೇಶ್ ಮೇವಾನಿ ಮತ್ತೆ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಆರಂಭದಲ್ಲಿ ಹಿನ್ನಡೆ ಅನುಭವಿಸಿದ ಅವರು ಕೊನೆಯ ಹಂತದಲ್ಲಿ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿದರು. ದಲಿತ ಹಕ್ಕುಗಳ ಹೋರಾಟಗಾರ ಮತ್ತು ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಆಗಿರುವ ಜಿಗ್ನೇಶ್ ಮೇವಾನಿ ಅವರು ತಮ್ಮ ವಡ್ಗಾಮ್ ಸ್ಥಾನವನ್ನು ಮತ್ತೆ ಉಳಿಸಿಕೊಂಡಿದ್ದಾರೆ.
ಗುಜರಾತ್‌ನ ಪ್ರಮುಖ ದಲಿತ ನಾಯಕರಲ್ಲಿ ಜಿಗ್ನೇಶ್ ಮೇವಾನಿ ಕೂಡ ಒಬ್ಬರು.
2017 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ, ಜಿಗ್ನೇಶ್ ಮೇವಾನಿ ಅವರು ಸ್ವತಂತ್ರ ಅಬ್ಯರ್ಥಿಯಾಗಿ ವಡ್ಗಾಮ್ ಕ್ಷೇತ್ರದಿಂದ ಕಣಕ್ಕಿಳಿದು ಭರ್ಜರಿ ಜಯ ಗಳಿಸಿದ್ದರು. ಆ ವೇಳೆ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್ ಜಿಗ್ನೇಶ್‌ಗೆ ಬೆಂಬಲ ನೀಡಿತ್ತು.

ಈ ಬಾರಿ ಜಿಗ್ನೇಶ್ ಮೇವಾನಿ ವಡ್ಗಾಮ್‌ನಿಂದ ಎಎಪಿಯ ದಲ್ಪತ್‌ಭಾಯ್ ದಹ್ಯಾಭಾಯಿ ಭಾಟಿಯಾ ಮತ್ತು ಬಿಜೆಪಿಯ ಮಣಿಭಾಯ್ ಜೇತಾಭಾಯಿ ವಘೇಲಾ ವಿರುದ್ಧ ಸ್ಪರ್ಧಿಸಿದ್ದರು.
ವಡ್ಗಾಮ್ ಕ್ಷೇತ್ರದಲ್ಲಿ 2017ರಲ್ಲಿ ಶೇಕಡಾ 72ರಷ್ಟು ಮತದಾನವಾಗಿತ್ತು. ಆದರೆ, 2022 ರಲ್ಲಿ ಶೇಕಡಾ 66.21 ರಷ್ಟು ಮತದನವಾಗಿ, ಸುಮಾರು ಶೇಕಡಾ 6ರಷ್ಟು ಕುಸಿತವನ್ನು ಕಂಡಿತ್ತು.
41 ವರ್ಷದ ಜಿಗ್ನೇಶ್ ಮೇವಾನಿ, ದಲಿತ ಹಕ್ಕುಗಳಿಗಾಗಿ ಹೋರಾಡುವ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಸಂಚಾಲಕರಾಗಿದ್ದಾರೆ. ವಕೀಲರಾಗಿ, ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಜಿಗ್ನೇಶ್ ದಲಿತರಿಗೆ ಭೂಮಿ ದೊರಕಿಸಿಕೊಡಲು ಹೋರಾಡುತ್ತಿದ್ದರು. ಇದೇ ವೇಳೆ ಊನಾದಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಅವರು ನಡೆಸಿದ ಬೃಹತ್ ಹೋರಾಟ ದೇಶದ ಗಮನ ಸೆಳೆದಿತ್ತು.

ವಡ್ಗಾಮ್ ಪರಿಶಿಷ್ಟ ಜಾತಿಗಳಿಗೆ (SCs) ಮೀಸಲಾದ ಸ್ಥಾನವಾಗಿದ್ದು, ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಮುಸ್ಲಿಂ ಮತದಾರರು, ಸುಮಾರು 90,000 ಎಂದು ಅಂದಾಜಿಸಲಾಗಿದೆ. ವಡ್ಗಾಮ್‌ನ 2.94 ಲಕ್ಷ ಮತದಾರರಲ್ಲಿ ಮೂರನೇ ಒಂದು ಭಾಗದಷ್ಟು ಮುಸ್ಲಿಂ ಮತದಾರರಿದ್ದಾರೆ. ಸುಮಾರು 44,000 ದಲಿತ ಮತದಾರರು ಮತ್ತು 15,000 ರಜಪೂತರು ಇದ್ದಾರೆ. ಉಳಿದವರು ಹೆಚ್ಚಾಗಿ ಹಿಂದುಳಿದ ವರ್ಗದವರಾಗಿದ್ದಾರೆ.
ಈ ಚುನಾವಣೆಯಲ್ಲಿ ಮೇವಾನಿ 61,703 ಮತಗಳನ್ನು ಪಡೆದರೆ, ಮಣಿಭಾಯ್ 57,625 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮತ ಎಣಿಕೆಯ ಉದ್ದಕ್ಕೂ, ಮೇವಾನಿ ಮತ್ತು ಮಣಿಭಾಯ್ ಇಬ್ಬರ ನಡುವೆ ತೀವ್ರ ಪೈಪೋಟಿಯಿತ್ತು. ಮೇವಾನಿ 4,078 ಮತಗಳಿಂದ ತಮ್ಮ ವಡ್ಗಾವ್ ಸ್ಥಾನ ಉಳಿಸಿಕೊಂಡಿದ್ದಾರೆ.
ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿ 182 ಸ್ಥಾನಗಳಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಪಕ್ಷಕ್ಕೆ ಮಾತ್ರವಲ್ಲ, ರಾಜ್ಯಕ್ಕೂ ಐತಿಹಾಸಿಕ ದಾಖಲೆಯಾಗಿದೆ. ಇದಕ್ಕೂ ಮೊದಲು 985 ರಲ್ಲಿ ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದು ದಾಖಲೆಯನ್ನು ಮಾಡಿತ್ತು.












Click it and Unblock the Notifications