ಬಿಜೆಪಿ ನಾಯಕರ ರಹಸ್ಯ ಭೇಟಿ: ಗುಜರಾತ್ ರ‍್ಯಾಲಿಯಲ್ಲಿ ಕೇಜ್ರಿವಾಲ್ ಹೊಸ ಬಾಂಬ್
ಗಾಂಧಿನಗರ, ಅ 10: ಕರ್ನಾಟಕದಂತೆ ಗುಜರಾತ್‌ನಲ್ಲೂ ಚುನಾವಣಾ ವರ್ಷ. ಈಗಾಗಲೇ, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ಭರ್ಜರಿ ಪ್ರಚಾರವನ್ನು ಆರಂಭಿಸಿದೆ. ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಯಾಕೋ ಮಂಕಾದಂತೆ ಕಾಣಿಸುತ್ತಿದೆ.
ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತವರ ಪಕ್ಷ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಹೊಸ ಭಾಷ್ಯ ಬರೆಯುವ ಸಾಧ್ಯತೆಯಿಲ್ಲದಿಲ್ಲ. ಆಮ್ ಆದ್ಮಿ ಪಕ್ಷದಿಂದ ಅಧಿಕೃತ ಚುನಾವಣಾ ಪ್ರಣಾಳಿಕೆ ಬಿಡುಗಡೆಗೆ ಮುನ್ನವೇ ಹಲವು ಭರವಸೆಯನ್ನು ನೀಡಲಾಗುತ್ತಿದೆ.
ಇತ್ತ, ಖುದ್ದು ಪ್ರಧಾನಿಯವರೇ ಚುನಾವಣಾ ಆಖಾಡಕ್ಕೆ ಇಳಿದಿದ್ದು ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಈ ಮೂರು ದಿನ, 14,500 ಸಾವಿರ ಕೋಟಿ ರೂಪಾಯಿ ಮೊತ್ತದ ಹಲವು ಯೋಜನೆಗಳಿಗೆ ಚಾಲನೆಯನ್ನು ನೀಡುತ್ತಿದ್ದಾರೆ.
ಮೋದಿಯವರು ಮೆಹ್ಸಾನಾ ಜಿಲ್ಲೆಯಲ್ಲಿದ್ದರೆ, ದೆಹಲಿ ಸಿಎಂ ಕೇಜ್ರಿವಾಲ್ ವಲ್ಸದ್ ಜಿಲ್ಲೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ, ರಾಜ್ಯದ ಬಿಜೆಪಿ ನಾಯಕರಿಗೇ ಪಕ್ಷ ಗೆಲ್ಲುವುದು ಬೇಕಾಗಿಲ್ಲ ಎನ್ನುವ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.

ಗುಜರಾತ್ ನಿಂದ ಅಯೋಧ್ಯೆಗೆ ಸರಕಾರ ವತಿಯಿಂದಲೇ ಧಾರ್ಮಿಕ ಪ್ರವಾಸ
ಕೆಲವು ದಿನಗಳ ಹಿಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗುಜರಾತ್ ನಿಂದ ಅಯೋಧ್ಯೆಗೆ ಸರಕಾರ ವತಿಯಿಂದಲೇ ಧಾರ್ಮಿಕ ಪ್ರವಾಸ ಆಯೋಜಿಸುವುದಾಗಿ ಹೇಳುವ ಮೂಲಕ, ನೇರವಾಗಿ ಬಿಜೆಪಿಯ ಮತಬ್ಯಾಂಕಿಗೆ ಕೈಹಾಕುವ ಪ್ರಯತ್ನವನ್ನು ಮಾಡಿದ್ದರು. ಆಮ್ ಆದ್ಮಿ ಪಕ್ಷದ ಈ ಆಶ್ವಾಸನೆಗೆ ಜನರು ಯಾವ ರೀತಿ ಸ್ಪಂದಿಸಲಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ, ಕೇಜ್ರಿವಾಲ್ ಸಭೆಗೆ ಸಾರ್ವಜನಿಕರ ಸ್ಪಂದನೆ ಉತ್ತಮವಾಗಿರುವುದಂತೂ ಹೌದು.

ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್
ಭಾನುವಾರ (ಅ 9) ಗುಜರಾತಿನ ವಲ್ಸದ್ ಜಿಲ್ಲೆಯ ಧರ್ಮಪುರ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್, "ಗುಜರಾತ್ ಬಿಜೆಪಿ ಘಟಕದ ಹಲವು ನಾಯಕರು ನಮ್ಮ ರಹಸ್ಯ ಸಂಪರ್ಕದಲ್ಲಿದ್ದಾರೆ. ರಾಜ್ಯದ ಹಲವು ಬಿಜೆಪಿ ನಾಯಕರಿಗೆ ಅವರದ್ದೇ ಪಕ್ಷ ಅಧಿಕಾರಕ್ಕೆ ಬರುವುದು ಇಷ್ಟವಿಲ್ಲ. ಹಾಗಾಗಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಚಿತ"ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಬುಡಕಟ್ಟು ಸಮುದಾಯದ ಹೆಚ್ಚಾಗಿರುವ ವಲ್ಸದ್
ಬುಡಕಟ್ಟು ಸಮುದಾಯದವರು ಹೆಚ್ಚಾಗಿರುವ ವಲ್ಸದ್ ನಲ್ಲಿ ಸಭೆಯನ್ನು ಉದ್ದೇಶಿಸಿ, "ಹೇಗಾದರೂ ಮಾಡಿ ನಮ್ಮ ಪಕ್ಷವನ್ನು ಸೋಲಿಸಿ ಎಂದು ನಮ್ಮ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮನವಿ ಬಿಜೆಪಿ ನಾಯಕರು ಮನವಿ ಮಾಡುತ್ತಿದ್ದಾರೆ. ಆ ಎಲ್ಲಾ ನಾಯಕರಿಗೆ ನಾನು ಹೇಳುವುದಿಷ್ಟೇ, ನೀವು ರಹಸ್ಯವಾಗಿ ಅಲ್ಲೇ ಇದ್ದು ಕೊಂಡು ಆಮ್ ಆದ್ಮಿ ಪಕ್ಷದ ಪರ ಕೆಲಸ ಮಾಡಿ"ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ಸುಮಾರು ಮೂರು ದಶಕಗಳಿಂದ ಬಿಜೆಪಿ ಇಲ್ಲಿ ಅಧಿಕಾರದಲ್ಲಿದೆ
"ಸುಮಾರು ಮೂರು ದಶಕಗಳಿಂದ ಬಿಜೆಪಿ ಇಲ್ಲಿ ಅಧಿಕಾರದಲ್ಲಿದೆ, ಅವರ ದರ್ಪವನ್ನು ಮೆಟ್ಟಿ ನಿಲ್ಲಬೇಕಿದೆ. ಕೇಜ್ರಿವಾಲ್ ಒಳ್ಳೆಯವರು ಆದರೆ ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲ್ಲದು ಎಂದು ಯಾರಾದರೂ ಹೇಳಿದರೆ, ಅವರು ಬಿಜೆಪಿಯವರು ಎನ್ನುವುದು ಖಚಿತ. ಕಾಂಗ್ರೆಸ್ ಮುಖಂಡರು/ಕಾರ್ಯಕರ್ತರು ಕೂಡಾ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಬಹುದು"ಎಂದು ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ನಾಯಕರಿಗೆ ಮುಕ್ತ ಆಹ್ವಾನವನ್ನು ನೀಡಿದ್ದಾರೆ.












Click it and Unblock the Notifications