ಗುಜರಾತ್ ಚುನಾವಣೆ; ಸರ್ಕಾರಿ ಶಾಲೆಗೆ ಮೋದಿ ಭೇಟಿ, ನಮ್ಮ ಸಾಧನೆ ಎಂದ ಆಪ್!
ನವದೆಹಲಿ, ಅ.20: ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಪ್ ನೇರ ಹಾನಾಹಣಿಗೆ ಇಳಿದಿರುವಂತೆ ಕಾಣಿಸುತ್ತಿದೆ. ಕಾಂಗ್ರೆಸ್ ಸದ್ದಿಲ್ಲದಂತೆ ಇರುವುದು ಆಪ್‌ಗೆ ಮತ್ತಷ್ಟು ಶಕ್ತಿ ನೀಡಿದೆ. ಬಿಜೆಪಿಯ ಎಲ್ಲಾ ಪ್ರಚಾರಗಳಿಗೂ ಆಪ್ ಒಂದಲ್ಲ ಒಂದು ಟೀಕೆ ಮಾಡುತ್ತಲೇ ತಮ್ಮ ಕೆಲಸವನ್ನು ಜನರ ಮುಂದಿಡುತ್ತಿದೆ.
ಚುನಾವನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಸರಕಾರಿ ಶಾಲೆಗೆ ಭೇಟಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಇದನ್ನೂ ಕೂಡ ಆಮ್ ಆದ್ಮಿ ಪಕ್ಷ ಇದು ನಮ್ಮ ಸಾಧನೆಯೇ ಎಂದು ಬೆನ್ನು ತಟ್ಟಿಕೊಂಡಿದೆ.
ಗುಜರಾತ್‌ನ ಸಾರ್ವಜನಿಕ ಶಾಲಾ ವ್ಯವಸ್ಥೆಯನ್ನು ಆಧುನೀಕರಿಸುವ ಗುಜರಾತ್ ಸರ್ಕಾರದ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಕಾರ್ಯಕ್ರಮದ ಭಾಗವಾಗಿ ಪ್ರಧಾನಿ ಶಾಲೆಗೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳೊಂದಿಗೆ ಮೋದಿ ಇರುವ ಚಿತ್ರವನ್ನು ಮತ್ತು ಮನೀಶ್ ಸಿಸೋಡಿಯಾ ಮಕ್ಕಳೊಂದಿಗೆ ಇರುವ ಚಿತ್ರವನ್ನು ಕೋಲಾಜ್ ಮಾಡಿ ಅರವಿಂದ್ ಕೇಜ್ರಿವಾಲ್ ಹಂಚಿಕೊಂಡಿದ್ದಾರೆ.

ಇದು ನಮ್ಮ ಪಕ್ಷದ ದೊಡ್ಡ ಸಾಧನೆ; ಕೇಜ್ರಿವಾಲ್
"ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ಇಂದು ದೇಶದ ಎಲ್ಲಾ ಪಕ್ಷಗಳು ಮತ್ತು ನಾಯಕರು ಶಿಕ್ಷಣ ಮತ್ತು ಶಾಲೆಗಳ ಬಗ್ಗೆ ಮಾತನಾಡಲು ಶುರು ಮಾಡಿರುವುದು ನನಗೆ ತುಂಬಾ ಸಂತೋಷವಾಗಿದೆ. ಇದು ನಮ್ಮ ದೊಡ್ಡ ಸಾಧನೆ. ಚುನಾವಣೆಯ ಸಮಯದಲ್ಲಿ ಮಾತ್ರ ಶಿಕ್ಷಣವನ್ನು ನೆನಪಿಸಿಕೊಳ್ಳಬಾರದು ಎಂದು ನಾನು ತಿಳಿದುಕೊಂಡಿದ್ದೇನೆ. ಎಲ್ಲಾ ಸರ್ಕಾರಗಳು ಒಟ್ಟಾದರೆ ಕೇವಲ 5 ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಗಳನ್ನು ಉತ್ತಮಗೊಳಿಸಬಹುದು" ಎಂದು ಟ್ವೀಟ್ ಮಾಡಿದ್ದಾರೆ.

ಹೊಸ ಶಿಕ್ಚಣ ನೀತಿ ಬಗ್ಗೆ ಪ್ರಧಾನಿ ಉಲ್ಲೇಖ
ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮದ ಚಿತ್ರಗಳಲ್ಲಿ ಪಾಠವು ನಡೆಯುತ್ತಿರುವ ತರಗತಿಯಲ್ಲಿ ಪ್ರಧಾನಿ ನರೇಂದರ ಮೋದಿ ವಿದ್ಯಾರ್ಥಿಗಳೊಂದಿಗೆ ಮಾದರಿ ತರಗತಿಯಲ್ಲಿ ಕುಳಿತಿರುವುದನ್ನು ಕಾಣಬಹುದು. ನಂತರ, ಗುಜರಾತ್‌ನಾದ್ಯಂತದ ಸರ್ಕಾರಿ ಶಾಲಾ ಶಿಕ್ಷಕರ ಸಭೆಯನ್ನುದ್ದೇಶಿಸಿ ಮೋದಿ ಮಾಡಿದ ಭಾಷಣದಲ್ಲಿ, "ಹೊಸ ಶಿಕ್ಷಣ ನೀತಿಯು ದೇಶವನ್ನು ಇಂಗ್ಲಿಷ್ ಭಾಷೆಯ ಗುಲಾಮ ಮನಸ್ಥಿತಿಯಿಂದ ಹೊರತರುತ್ತದೆ" ಎಂದು ಹೇಳಿದ್ದಾರೆ.
ಈ ವೇಳೆ "ಹಿಂದೆ, ಇಂಗ್ಲಿಷ್ ಭಾಷೆಯ ಜ್ಞಾನವನ್ನು ಬೌದ್ಧಿಕತೆಯ ಗುರುತು ಎಂದು ಪರಿಗಣಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇಂಗ್ಲಿಷ್ ಭಾಷೆ ಕೇವಲ ಸಂವಹನ ಮಾಧ್ಯಮವಾಗಿದೆ. ಹಿಂದಿಯಲ್ಲಿ ಆರಾಮದಾಯಕವಾಗಿ ಮಾತನಾಡುವ ಜನರು ಇಂಗ್ಲೀಷ್ ಭಾಷೆಯ ಹಿಂದೆ ಬೀಳುವ ಅಗತ್ಯವಿಲ್ಲ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಒಟ್ಟಿಗೆ ಕೆಲಸ ಮಾಡೋಣ!
ದೇಶದಾದ್ಯಂತ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಎಎಪಿಯ ಪರಿಣತಿಯನ್ನು ಪ್ರಧಾನಿ ಬಳಸಿಕೊಳ್ಳಬೇಕು ಎಂದು ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.
"ಪ್ರಧಾನಿ ಸರ್, ನಾವು ದೆಹಲಿಯ ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡಿದ್ದೇವೆ. 5 ವರ್ಷಗಳಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಶಾಲೆಗಳು ಅದ್ಭುತವಾಗಿವೆ. ದೇಶಾದ್ಯಂತ ಎಲ್ಲಾ ಶಾಲೆಗಳನ್ನು 5 ವರ್ಷಗಳಲ್ಲಿ ಮೇಲ್ದರ್ಜೆಗೇರಿಸುತ್ತವೆ. ನಮಗೆ ಇದರ ಅನುಭವವಿದೆ. ದಯವಿಟ್ಟು ನಮ್ಮನ್ನು ಇದಕ್ಕಾಗಿ ಸಂಪೂರ್ಣವಾಗಿ ಬಳಸಿಕೊಳ್ಳಿ. ದೇಶಕ್ಕಾಗಿ ಒಟ್ಟಿಗೆ ಕೆಲಸ ಮಾಡೋಣ " ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ವಿರುದ್ಧ ಗಟ್ಟಿಯಾಗಿ ನಿಂತಿದೆ ಕೇಜ್ರಿವಾಲ್ ಪಕ್ಷ!
ಇನ್ನು "ಚುನಾವಣೆ ಸಮಯದಲ್ಲಿ ಮಾತ್ರ ಶಿಕ್ಷಣ ನೆನಪಾಗುವುದಿಲ್ಲ ಎಂದು ನಾನು ಅಂದುಕೊಂಡಿದ್ದೇನೆ. ಎಲ್ಲಾ ಸರ್ಕಾರಗಳು ಒಟ್ಟಾಗಿ ಸೇರಿದರೆ ಕೇವಲ 5 ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಗಳನ್ನು ಉತ್ತಮಗೊಳಿಸಬಹುದು" ಎಂದು ಕೇಜ್ರಿವಾಲ್ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ದೆಹಲಿ ಸರ್ಕಾರದ ಮದ್ಯ ನೀತಿಗೆ ಸಂಬಂಧಿಸಿದಂತೆ ದೆಹಲಿ ಶಿಕ್ಷಣ ಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದೆ. ಗುಜರಾತ್‌ನ ವಿಧಾನಸಭಾ ಚುನಾವಣೆಯ ಬಗ್ಗೆ ಆತಂಕದಲ್ಲಿರುವ ಬಿಜೆಪಿ ತನಿಖಾ ಸಂಸ್ಥೆಗಳನ್ನು ಛೂ ಬಿಡುತ್ತಿದೆ ಎಂದು ಎಎಪಿ ಆರೋಪಿಸಿದೆ.
ದೆಹಲಿಯ ವಿಧಾನಸಭಾ ಚುನಾವಣೆ ಮತ್ತು ಇತ್ತೀಚಿನ ಪಂಜಾಬ್ ಚುನಾವಣೆಯಲ್ಲಿ ಬಿಜೆಪಿ ಎಎಪಿಗಿಂತ ಕಳಪೆ ಸ್ಥಾನದಲ್ಲಿದೆ. ಎಎಪಿ ತನ್ನ ದೆಹಲಿ ಆಡಳಿತ ಮಾದರಿಯನ್ನು ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮಾಡಿರುವ ಕೆಲಸಗಳನ್ನು ಚುನಾವಣಾ ಪ್ರಚಾರಗಳಲ್ಲಿ ತಿಳಿಸುತ್ತಿದೆ. ಇದು ಪಂಜಾಬ್‌ನಲ್ಲಿ ಭರ್ಜರಿ ಗೆಲುವಿಗೆ ಕಾರಣವಾಗಿದೆ.











Click it and Unblock the Notifications