ಹಾದಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ: ಮೋದಿ
ನವದೆಹಲಿ, ಅಕ್ಟೋಬರ್ 26: ಗ್ರಾಹಕರನ್ನು ದಾರಿ ತಪ್ಪಿಸುವ ಜಾಹೀರಾತುಗಳಿಂದ ರಕ್ಷಿಸಲು ಹೊಸ ಗ್ರಾಹಕ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಗ್ರಾಹಕ ರಕ್ಷಣಾ ಸಮ್ಮೇಳನದಲ್ಲಿ ಮಾತನಾಡಿದ ಅವರು, "'ನವ ಭಾರತದ ನಿರ್ಮಾಣ'ದಲ್ಲಿ ಗ್ರಾಹಕರ ರಕ್ಷಣೆಯೂ ನಮ್ಮ ಆದ್ಯತೆಯಾಗಿದೆ. ಗ್ರಾಹಕ ಸಬಲೀಕರಣದ ನಿಟ್ಟಿನಲ್ಲಿ ನಾವು ಗ್ರಾಹಕ ರಕ್ಷಣಾ ಕಾಯ್ದೆಗಳನ್ನು ಬದಲಾವಣೆ ಮಾಡಲಿದ್ದೇವೆ," ಎಂದು ಹೇಳಿದರು.

"ದಾರಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮಗಳನ್ನು ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗಿದೆ. ಇಂಥಹ ಜಾಹೀರಾತುಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗುವುದು," ಎಂದು ಅವರು ತಿಳಿಸಿದರು.
ಗ್ರಾಹಕರ ರಕ್ಷಣೆಗೆ ಸಂಬಂಧಿಸಿ 2015ರಲ್ಲಿ ವಿಶ್ವಸಂಸ್ಥೆ ನಿಗದಿಪಡಿಸಿದ್ದ ಮಾರ್ಗಸೂಚಿಗೆ ಅನುಗುಣವಾಗಿ ಸರ್ಕಾರ ಹೊಸ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಸದ್ಯಕ್ಕೆ ಜಾರಿಯಲ್ಲಿರುವ 1986ರ ಗ್ರಾಹಕ ರಕ್ಷಣಾ ಕಾಯ್ದೆಯನ್ನು ಪರಿಷ್ಕರಿಸಿ ಈ ಹೊಸ ಕಾಯ್ದೆ ರೂಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
24 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಅವರು ಹೊಸ ಜಿಎಸ್‌ಟಿ ಜಾರಿಯಿಂದಾಗಿ ದೇಶದಲ್ಲಿ ಹೊಸ ಉದ್ಯಮ ಸಂಸ್ಕೃತಿ ಸೃಷ್ಟಿಯಾಗಿದೆ ಎಂದು ಹೇಳಿದರು
"ಜಿಎಸ್‌ಟಿ ನಿಯಮದಿಂದಾಗಿ ಉತ್ಪಾದಕರಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಬೆಲೆ ಇಳಿಕೆಯಾಗಿ ಮಧ್ಯಮ ವರ್ಗ ಮತ್ತು ಬಡ ಜನರಿಗೆ ಪ್ರಯೋಜನವಾಗಲಿದೆ," ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ತಿಳಿಸಿದರು.












Click it and Unblock the Notifications