ದೆಹಲಿ ಪೊಲೀಸರಿಂದ ಎಫ್‌ಐಆರ್: ಎಷ್ಟೇ ಬೆದರಿಕೆ ಬಂದರೂ ಜಗ್ಗುವುದಿಲ್ಲ ಎಂದ ಗ್ರೆಟಾ
ನವದೆಹಲಿ, ಫೆಬ್ರವರಿ 4: ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿದ್ದ ಸ್ವೀಡನ್ ಮೂಲದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಇಂತಹ ಬೆದರಿಕೆಗಳಿಗೆ ತಾವು ಬಗ್ಗುವುದಿಲ್ಲ ಎಂದು ಗ್ರೆಟಾ ಹೇಳಿದ್ದಾರೆ.
'ನಾನು ಈಗಲೂ ರೈತರೊಂದಿಗೆ ನಿಲ್ಲುತ್ತೇನೆ ಮತ್ತು ಅವರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ. ಯಾವುದೇ ಪ್ರಮಾಣದ ದ್ವೇಷ, ಬೆದರಿಕೆ ಅಥವಾ ಮಾನವಹಕ್ಕುಗಳ ಉಲ್ಲಂಘನೆಯು ಅದನ್ನು ಎಂದಿಗೂ ಬದಲಿಸಲಾರದು' ಎಂದು ಗ್ರೆಟಾ ಟ್ವೀಟ್ ಮಾಡಿದ್ದಾರೆ.
ದೆಹಲಿ ಪೊಲೀಸರು ಗ್ರೆಟಾ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಟ್ವೀಟ್ ಮಾಡಲಾಗಿದೆ. ಗ್ರೆಟಾ ವಿರುದ್ಧ ವಿದೇಶಿ ಸಂಚು ಮತ್ತು ಗುಂಪುಗಳ ನಡುವೆ ವೈರತ್ವ ಬಿತ್ತುವ ಪ್ರಯತ್ನ ಆರೋಪಗಳಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ರೈತರ ಪ್ರತಿಭಟನೆ ಸಂಬಂಧ ಗ್ರೆಟಾ ಮಾಡಿದ್ದ ಟ್ವೀಟ್ ತೀವ್ರ ವಿವಾದ ಸೃಷ್ಟಿಸಿತ್ತು. ಪ್ರತಿಭಟನೆ ಬೆಂಬಲಿಸಿ ಗ್ರೆಟಾ ಹಂಚಿಕೊಂಡಿದ್ದ 'ಟೂಲ್ ಕಿಟ್'ನಲ್ಲಿ ಟ್ವಿಟ್ಟರ್‌ನಲ್ಲಿ ಅಭಿಯಾನ ನಡೆಸುವ ಸಂಬಂಧ ನೀಡಲಾಗಿದ್ದ ಸೂಚನೆಗಳು ಬಹಿರಂಗವಾಗಿದ್ದವು. ಹೀಗಾಗಿ ರೈತರ ಪ್ರತಿಭಟನೆಗೆ ವ್ಯಕ್ತವಾಗುತ್ತಿರುವ ಬೆಂಬಲದ ಹಿಂದೆ ಅನೇಕ ಶಕ್ತಿಗಳ ಕೈವಾಡವಿದೆ ಎಂಬ ಆರೋಪಕ್ಕೆ ಪೂರಕವಾಗಿ ಸರ್ಕಾರದ ಅನುಯಾಯಿಗಳಿಗೆ ಅಸ್ತ್ರ ದೊರಕಿತ್ತು. ಈ ಟ್ವೀಟ್ ಅನ್ನು ಗ್ರೆಟಾ ಬಳಿಕ ಡಿಲೀಟ್ ಮಾಡಿದ್ದರು.
ದೆಹಲಿ ಪೊಲೀಸರ ಸೈಬರ್ ಘಟಕದ ಅಧಿಕಾರಿಗಳು ಈ ಟ್ವೀಟ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಗ್ರೆಟಾ ಹೆಸರನ್ನು ಉಲ್ಲೇಖಿಸಿಲ್ಲ ಎನ್ನಲಾಗಿದೆ.












Click it and Unblock the Notifications