ತ್ರಿವಳಿ ತಲಾಖ್ ಅಪರಾಧ, ಕೇಂದ್ರದಿಂದ ಸುಗ್ರೀವಾಜ್ಞೆ
ನವದೆಹಲಿ, ಸೆಪ್ಟೆಂಬರ್ 19 : ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಘೋಷಿಸುವ ಸುಗ್ರೀವಾಜ್ಞೆ ಜಾರಿಗೆ ತರಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಗೆ ಎರಡೂ ಸದನದಲ್ಲಿ ಒಪ್ಪಿಗೆ ಪಡೆಯಲು ಕೇಂದ್ರ ಸರ್ಕಾರ ವಿಫಲವಾಗಿತ್ತು.
ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಜಾರಿಗೆ ತರಲು ಒಪ್ಪಿಗೆ ನೀಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಅನುಮೋದನೆ ಸಿಕ್ಕಿತ್ತು.
ಆದರೆ, ತ್ರಿವಳಿ ತಲಾಖ್ ಮಸೂದೆಗೆ ತಿದ್ದುಪಡಿ ತಂದ ಸರ್ಕಾರ, ಜಾಮೀನು ಸಹಿತ ಅಪರಾಧ ಎಂದು ತಿದ್ದುಪಡಿ ಮಾಡಿತ್ತು. ತಿದ್ದುಪಡಿ ವಿಧೇಯಕಕ್ಕೆ ಎರಡೂ ಸದನದಲ್ಲಿ ಒಪ್ಪಿಗೆ ಪಡೆಯಲು ಸರ್ಕಾರ ವಿಫಲವಾಗಿತ್ತು.

ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ತಿದ್ದುಪಡಿ ವಿಧೇಯಕಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದವು. ಈ ಬಗ್ಗೆ ವರದಿ ನೀಡಲು ಜಂಟಿ ಸದನ ಸಮಿತಿ ರಚನೆ ಮಾಡಲು ಪಟ್ಟು ಹಿಡಿದಿದ್ದವು.
ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದರೆ ತ್ರಿವಳಿ ತಲಾಖ್ ಅಪರಾಧವಾಗಲಿದೆ. ತಲಾಖ್ ಎಂದು ಮೂರು ಬಾರಿ ಹೇಳಿ ಪತ್ನಿಗೆ ವಿಚ್ಛೇಧನ ನೀಡುವ ಮುಸ್ಲಿಂ ಪುರುಷನಿಗೆ ಮೂರು ವರ್ಷದ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ನೀಡಲಾಗಿದೆ.
ದೂರವಾಣಿ ಕರೆ, ಎಸ್‌ಎಂಎಸ್, ವಾಟ್ಸಪ್, ಈ ಮೇಲ್ ಮೂಲಕ ತಲಾಖ್ ನೀಡುವುದು ಕಾನೂನು ಬಾಹಿರವಾಗಲಿದೆ. ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಜಟಾಪಟಿ ನಡೆದಿತ್ತು.
ಎರಡು ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು, 'ಈಡೀ ದೇಶ ನಿಮ್ಮ ಜೊತೆ ಇದೆ. ನಿಮಗೆ ನ್ಯಾಯ ದೊರಕಿಸಿಕೊಡಲಿ ನಾವು ಬದ್ಧರಾಗಿದ್ದೇವೆ' ಎಂದು ಮುಸ್ಲಿಂ ಮಹಿಳೆಯರಿಗೆ ಭರವಸೆ ನೀಡಿದ್ದರು.












Click it and Unblock the Notifications