Road Accident: ಅಪಘಾತ ಆದವರಿಗೆ ಸಿಗಲಿದೆ ₹1.5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ, ಏನಿದು ಹೊಸ ಯೋಜನೆ?
ಪ್ರತಿನಿತ್ಯವೂ ರಸ್ತೆ ಅಪಘಾತಗಳು ಸಂಭವಿಸಿ ನೂರಾರು ಮಂದಿ ಸರಿಯಾದ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ದೇಶದಾದ್ಯಂತ ಅನ್ವಯವಾಗುವಂತೆ ಹೊಸ ಯೋಜನೆಯನ್ನು ಜಾರಿ ಮಾಡಿದೆ. ರಸ್ತೆ ಅಪಘಾತದ ಸಂತ್ರಸ್ತರಿಗಾಗಿಗೆ ಸರ್ಕಾರವು ರಾಷ್ಟ್ರವ್ಯಾಪಿ ನಗದು ರಹಿತ (ಕ್ಯಾಶ್‌ಲೆಸ್) ಚಿಕಿತ್ಸಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಗಾಯಾಳುಗಳಿಗೆ ಸುಮಾರು 1.5 ಲಕ್ಷ ರೂ.ಗಳವರೆಗೆ ಚಿಕಿತ್ಸೆ ಸೌಲಭ್ಯ ಸಿಗಲಿದೆ.
ಅಪಘಾತ ನಡೆದ ಏಳು ದಿನಗಳವರೆಗೆ ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಪ್ರತಿ ವ್ಯಕ್ತಿಗೆ 1.5 ಲಕ್ಷ ರೂಪಾಯಿಗಳವರೆಗೆ ವಿಮಾ ರಕ್ಷಣೆಯನ್ನು ನೀಡುತ್ತದೆ. ಅದರಂತೆ ದೇಶದಾದ್ಯಂತ ಯಾವುದೇ ರಸ್ತೆಯಲ್ಲಿ ಮೋಟಾರು ವಾಹನದಿಂದ ಸಂಭವಿಸುವ ರಸ್ತೆ ಅಪಘಾತದಲ್ಲಿ ಗಾಯಗೊಂಡ ಯಾವುದೇ ವ್ಯಕ್ತಿ, ಯಾವುದೇ ವರ್ಗ ಅಥವಾ ವರ್ಗವನ್ನು ಲೆಕ್ಕಿಸದೆ ಈ ನಗದು ರಹಿತ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಅಪಘಾತವಾದ ದಿನಾಂಕದಿಂದ ಗರಿಷ್ಠ ಏಳು ದಿನಗಳವರೆಗೆ ಸಂತ್ರಸ್ತರು ಯಾವುದೇ ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ಈ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು ಎಂದು ಅಧಿಸೂಚನೆಯಲ್ಲಿ ನಿರ್ದಿಷ್ಟವಾಗಿ ತಿಳಿಸಿದೆ. ಈ ಯೋಜನೆಯಡಿಯಲ್ಲಿ ಗೊತ್ತುಪಡಿಸದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಹಿಂದೆ 2024ರಲ್ಲಿ ರಸ್ತೆ ಅಪಘಾತದ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆಗಾಗಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಶುರುಮಾಡಿತ್ತು, ಈಗ ದೇಶದಾದ್ಯಂತ ವಿಸ್ತರಿಸಿದೆ.
ಪ್ರಕ್ರಿಯೆ ಹೇಗೆ?
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. ಪೊಲೀಸ್, ಆಸ್ಪತ್ರೆಗಳು ಮತ್ತು ರಾಜ್ಯ ಆರೋಗ್ಯ ಸಂಸ್ಥೆಗಳ ಸಹಯೋಗದೊಂದಿಗೆ ಈ ಪ್ರಾಧಿಕಾರ ಕಾರ್ಯನಿರ್ವಹಿಸಲಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ರಾಜ್ಯ ರಸ್ತೆ ಸುರಕ್ಷತಾ ಮಂಡಳಿಯು ಆಯಾ ವ್ಯಾಪ್ತಿಯಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ.

ಆಸ್ಪತ್ರೆಗಳ ನೋಂದಣಿ, ಗಾಯಾಳುಗಳ ಚಿಕಿತ್ಸೆ, ಆಸ್ಪತ್ರೆಗಳಿಗೆ ಹಣ ಪಾವತಿ ಪ್ರಕ್ರಿಯೆಗಳು ಸೇರಿದಂತೆ ಇತರ ಉದ್ದೇಶಕ್ಕಾಗಿ ಮೀಸಲಾದ ಪೋರ್ಟಲ್ ಮೂಲಕ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಸಮನ್ವಯ ಸಾಧಿಸಲಿದೆ. ಈ ಯೋಜನೆ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ಸ್ಟೀರಿಂಗ್ ಸಮಿತಿ ರಚಿಸುವುದಾಗಿ ಅಧಿಸೂಚನೆಯಲ್ಲಿ ತಿಳಿಸಿದೆ.
ಈ ಯೋಜನೆಯಡಿ ಇನ್ನು ದೇಶದಾದ್ಯಂತ ಎಲ್ಲಿಯೇ ಅಪಘಾತ ಸಂಭವಿಸಿದರೆ, ತಕ್ಷಣವೇ ಗಾಯಾಳುಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಒಂದು ವಾರದವರೆಗೆ ಚಿಕಿತ್ಸೆ ಪಡೆಯಲು ಅವಕಾಶವಿದ್ದು, ಇದಕ್ಕೆ ನಗದು ರಹಿತವಾಗಿ 1.5 ಲಕ್ಷ ರೂಪಾಯಿವರೆಗೆ ಚಿಕಿತ್ಸೆ ಭರಿಸಬಹುದಾಗಿದೆ. ಅಪಘಾತದಲ್ಲಿ ಗಾಯಗೊಂಡ, ಗಂಭೀರ ಸ್ಥಿತಿ ತಲುಪಿದ ಸಂದರ್ಭದಲ್ಲಿ ಈ ಯೋಜನೆಯ ಅನುಕೂಲ ಪಡೆಯಬಹುದು. ಯಾವುದೇ ವ್ಯಕ್ತಿಯು ಈ ಯೋಜನೆಯ ಅನುಸಾರವಾಗಿ ನಗದು ರಹಿತ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟವಾಗಿ ತಿಳಿಸಿದೆ.












Click it and Unblock the Notifications