1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯಸ್ಸು ನಿಗದಿಪಡಿಸಿದ ಕೇಂದ್ರ ಸರ್ಕಾರ: ರಾಜ್ಯಗಳಿಗೆ ನೀಡಿದ ಸೂಚನೆ ಏನು? ಎಷ್ಟು ವಯಸ್ಸು?
1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯಸ್ಸು ನಿಗದಿಪಡಿಸಿರುವ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರವೊಂದನ್ನು ರವಾನಿಸಿದೆ. ಮಗುವಿನ ಕನಿಷ್ಠ ವಯಸ್ಸು ನಮೂದಿಸಿರುವ ಕೇಂದ್ರ ಸರ್ಕಾರವು ರಾಜ್ಯಗಳು ಸೂಚನೆಯನ್ನು ಕಡ್ಡಾಯವಾಗಿ ಪರಿಗಣಿಸಬೇಕೆಂದು ತಿಳಿಸಿದೆ.
ಬೆಂಗಳೂರು, ಫೆಬ್ರವರಿ 22: 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯಸ್ಸು ನಿಗದಿಪಡಿಸಿರುವ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರವೊಂದನ್ನು ರವಾನಿಸಿದೆ. ಮಗುವಿನ ಕನಿಷ್ಠ ವಯಸ್ಸು ನಮೂದಿಸಿರುವ ಕೇಂದ್ರ ಸರ್ಕಾರವು ರಾಜ್ಯಗಳು ಸೂಚನೆಯನ್ನು ಕಡ್ಡಾಯವಾಗಿ ಪರಿಗಣಿಸಬೇಕೆಂದು ತಿಳಿಸಿದೆ.
ಫೆಬ್ರವರಿ 9 ರಂದು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿರುವ ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಗ್ರೇಡ್ 1 ತರಗತಿಗಳಿಗೆ ಪ್ರವೇಶಿಸುವ ಮಕ್ಕಳ ಕನಿಷ್ಠ ವಯಸ್ಸನ್ನು ಖಾತರಿಪಡಿಸಿಕೊಳ್ಳುವಂತೆ ಆದೇಶಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ, 'ಫೌಂಡೇಶನಲ್ ಹಂತ'ವು ಮೂರರಿಂದ ಎಂಟು ವರ್ಷದೊಳಗಿನ ಮಕ್ಕಳಿಗೆ ಐದು ವರ್ಷಗಳ ಕಲಿಕೆಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಮೂರು ವರ್ಷಗಳ ಪ್ರಿಸ್ಕೂಲ್ ಶಿಕ್ಷಣ ಮತ್ತು ಎರಡು ವರ್ಷಗಳ ಆರಂಭಿಕ ಪ್ರಾಥಮಿಕ ದರ್ಜೆ-I ಮತ್ತು ಗ್ರೇಡ್-II ತರಗತಿಗಳು ಸೇರಿವೆ.
'ಈ ನೀತಿಯು ಪ್ರಿಸ್ಕೂಲ್‌ನಿಂದ ಗ್ರೇಡ್- II ವರೆಗಿನ ಮಕ್ಕಳ ತಡೆರಹಿತ ಕಲಿಕೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಅಂಗನವಾಡಿಗಳು ಅಥವಾ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ, ಖಾಸಗಿ ಮತ್ತು ಎನ್‌ಜಿಒ ನಡೆಸುವ ಪ್ರಿಸ್ಕೂಲ್ ಕೇಂದ್ರಗಳಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಮೂರು ವರ್ಷಗಳ ಗುಣಮಟ್ಟದ ಪ್ರಿಸ್ಕೂಲ್ ಶಿಕ್ಷಣದ ಪ್ರವೇಶವನ್ನು ಖಾತ್ರಿಪಡಿಸುವ ಮೂಲಕ ಮಾತ್ರ ಇದನ್ನು ಮಾಡಬಹುದು' ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ, 1ನೇ ತರಗತಿಗೆ ಆರು ವರ್ಷಗಳನ್ನು ಕನಿಷ್ಠ ಪ್ರವೇಶ ವಯಸ್ಸು ಎಂದು ಖಚಿತಪಡಿಸಿಕೊಳ್ಳುವಂತೆ ಕೋರಿದೆ. ಆರು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಪ್ರವೇಶ ನೀಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ.

ತಮ್ಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡು ವರ್ಷಗಳ ಡಿಪ್ಲೊಮಾ ಇನ್ ಪ್ರಿಸ್ಕೂಲ್ ಎಜುಕೇಶನ್ (ಡಿಪಿಎಸ್‌ಇ) ಕೋರ್ಸ್ ಅನ್ನು ವಿನ್ಯಾಸಗೊಳಿಸಲು ಮತ್ತು ನಡೆಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರಗಳಿಗೆ ಹೇಳಲಾಗಿದೆ. ಇದನ್ನು ಸ್ಟೇಟ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎಸ್‌ಸಿಇಆರ್‌ಟಿ) ವಿನ್ಯಾಸಗೊಳಿಸುವ ನಿರೀಕ್ಷೆಯಿದೆ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮೂಲಕ ಜಾರಿಗೊಳಿಸಲಾಗುತ್ತದೆ.
ಕಳೆದ ವರ್ಷ, 1 ನೇ ತರಗತಿಯ ಪ್ರವೇಶದ ಕನಿಷ್ಠ ವಯಸ್ಸನ್ನು ಆರು ವರ್ಷಕ್ಕೆ ಇರಿಸುವ ಕೇಂದ್ರದ ನಿಲುವನ್ನು ಪೋಷಕರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಮನವಿಯಲ್ಲಿ ವಿರೋಧಿಸಿದ್ದರು. ಅಂತಿಮವಾಗಿ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಅದನ್ನು ವಜಾಗೊಳಿಸಿತು.
ಮಾರ್ಚ್ 2022 ರಲ್ಲಿ ಲೋಕಸಭೆಯಲ್ಲಿ ಕೇಂದ್ರವು ಒದಗಿಸಿದ ಪ್ರತಿಕ್ರಿಯೆಯ ಪ್ರಕಾರ, 1 ನೇ ತರಗತಿಗೆ ಪ್ರವೇಶಕ್ಕೆ ಬಂದಾಗ ರಾಜ್ಯಗಳ ನಡುವಿನ ವಯಸ್ಸಿನ ಮಾನದಂಡಗಳಲ್ಲಿ ವ್ಯಾಪಕ ವ್ಯತ್ಯಾಸಗಳಿವೆ. 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಕ್ಕಳಿಗೆ ಆರು ವರ್ಷ ಪೂರೈಸಿಲ್ಲದಿದ್ದರೂ, 1 ನೇ ತರಗತಿ ಪ್ರವೇಶವನ್ನು ಅನುಮತಿಸುತ್ತವೆ.

ಉದಾಹರಣೆಗೆ, ಅಸ್ಸಾಂ, ಗುಜರಾತ್, ಪುದುಚೇರಿ, ತೆಲಂಗಾಣ ಮತ್ತು ಲಡಾಖ್‌ನಲ್ಲಿ, ಐದು ವರ್ಷ ತುಂಬಿದ ಮಕ್ಕಳು 1 ನೇ ತರಗತಿಗೆ ಪ್ರವೇಶ ಪಡೆಯಬಹುದು. ಆಂಧ್ರ ಪ್ರದೇಶ, ದೆಹಲಿ, ರಾಜಸ್ಥಾನ, ಉತ್ತರಾಖಂಡ, ಹರಿಯಾಣ, ಗೋವಾ, ಜಾರ್ಖಂಡ್, ಕರ್ನಾಟಕ ಮತ್ತು ಕೇರಳದಲ್ಲಿ ಕನಿಷ್ಠ ವಯಸ್ಸು ಐದು ಆಗಿರಬೇಕು.












Click it and Unblock the Notifications