Toll Fee: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಶೇಕಡ 50ರಷ್ಟು ಇಳಿಕೆ; ಎಲ್ಲೆಲ್ಲಿ ಹಾಗೂ ಯಾರಿಗೆಲ್ಲಾ ಅನ್ವಯ?
Toll Fee: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಶುಲ್ಕವನ್ನು ಪರಿಷ್ಕರಣೆ ಮಾಡತ್ತಲಿರುತ್ತದೆ. ಸಾಕಷ್ಟು ಬಾರಿ ಏರಿಕೆ ಮಾಡಿದೆಯೇ ಹೊರತು ಕಡಿಮೆ ಮಾಡಿಲ್ಲ. ಈ ನಡುವೆಯೇ ಇದೀಗ ಹೆದ್ದಾರಿಗಳ ಟೋಲ್ ದರವನ್ನು ಶೇಕಡ 50ರಷ್ಟು ಕಡಿಮೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹಾಗಾದ್ರೆ ಎಲ್ಲೆಲ್ಲಿ ಹಾಗೂ ಯಾವ್ಯಾವ ವಾಹನಗಳಿಗೆ ಅನ್ವಯಿಸಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶದಲ್ಲಿ ಬಹುತೇಕ ಹೆದ್ದಾರಿಗಳ ಟೋಲ್ ಶುಲ್ಕವನ್ನು ಹೆಚ್ಚಳ ಆಗುತ್ತಲಿದ್ದು, ಇದರ ವಿರುದ್ಧ ಹಲವೆಡೆ ವಾಹನ ಸವಾರರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆಗಳು ನಡೆದಿವೆ. ಈ ನಡುವೆಯೇ ಇದೀಗ ಟೋಲ್ ದರ ಇಳಿಕೆ ಮಾಡಿ ಕೇಂದ್ರ ಸರ್ಕಾರ ಈ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದೆ.

ಸೇತುವೆ, ಸುರಂಗ, ಮೇಲ್ಸೇತುವೆ ಅಥವಾ ಎತ್ತರದ ಹೆದ್ದಾರಿಗಳಂತಹ ವಿಶೇಷ ರಚನೆಗಳನ್ನ ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರವನ್ನು ಶೇಕಡ 50ರಷ್ಟು ಕಡಿತ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದು ವಾಣಿಜ್ಯ ವಾಹನ ಮಾಲೀಕರಿಗೆ ಮಾತ್ರ ಅನ್ವಯ ಆಗಲಿದೆ ಎಂದು ತಿಳಿಸಿದೆ.
ಸದ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂತಹ ವಿಶೇಷ ಭಾಗಗಳಿಗೆ ಟೋಲ್ ದರ ಸಾಮಾನ್ಯ ಟೋಲ್‌ಗಳಿಗಿಂತಲೂ ಹೆಚ್ಚಳ ಆಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಪರಿಷ್ಕೃತ ಅಧಿಸೂಚನೆಯಲ್ಲಿ, 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳ ಪ್ರಕಾರ ಟೋಲ್ ಸಂಗ್ರಹ ಮಾಡಲಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2008ರ ನಿಯಮಗಳಿಗೆ ತಿದ್ದುಪಡಿ ಮಾಡಿ ಟೋಲ್ ಶುಲ್ಕವನ್ನು ಲೆಕ್ಕಾಚಾರ ಮಾಡಲು ಹೊಸ ವಿಧಾನಕ್ಕೆ ಕೈಹಾಕಿದೆ.
ಹೊಸ ನಿಯಮಗಳಿಂದ ವಾಣಿಜ್ಯ ವಾಹನಗಳಿಗೆ ಹೆಚ್ಚು ಪ್ರಯೋಜನ ಆಗಲಿದೆ. ಇದುವರೆಗೆ ಖಾಸಗಿ ವಾಹನ ಮಾಲೀಕರು ಪಾವತಿಸುವುದಕ್ಕಿಂತ ಶೇಕಡ 4-5 ಪಟ್ಟು ಹೆಚ್ಚು ಶುಲ್ಕವನ್ನು ವಾಣಿಜ್ಯ ವಾಹನಗಳಿಗೆ ಕಟ್ಟಬೇಕಾಗಿತ್ತು. ಇನ್ನು ಇದೀಗ ಬಂದಿರುವ ಹೊಸ ನಿಯಮ ಈಗಾಗಲೇ ಇರುವ ಟೋಲ್ ಪ್ಲಾಜಾಗಳಿಗೆ ಮುಂದಿನ ಪರಿಷ್ಕರಣೆ ದಿನಾಂಕದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಹೊಸ ಟೋಲ್ ಪ್ಲಾಜಾಗಳಿಗೆ ಇದರ ಕಾರ್ಯಾಚರಣೆಯ ಪ್ರಾರಂಭವಾದ ದಿನಾಂಕದಿಂದ ಅನ್ವಯ ಆಗಲಿದೆ. ರಿಯಾಯಿತಿದಾರರ ನಿರ್ವಹಣೆಯ ಶುಲ್ಕ ಪ್ಲಾಜಾಗಳಿಗೆ, ರಿಯಾಯಿತಿ ಒಪ್ಪಂದಗಳ ಸಮಯ ಮುಗಿದ ಬಳಿಕ ಇದು ಜಾರಿಗೆ ಬರುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ.
ಪ್ರತಿ ಜಿಲ್ಲೆಗಳಲ್ಲೂ ರಸ್ತೆ ಬಳಕೆ ಮಾಡಿದ್ದಕ್ಕೆ ಟೋಲ್ ಗೇಟ್‌ಗಳಲ್ಲಿ ಶುಲ್ಕ ಕಟ್ಟಬೇಕಾಗುತ್ತೆ. ಹೆದ್ದಾರಿ ನಿರ್ಮಾಣ ಮತ್ತು ನಿರ್ವಹಣೆಗೆ ಸರ್ಕಾರ ಟೋಲ್ ತೆರಿಗೆ ವಿಧಿಸುತ್ತೆ. ಆದರೆ, ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಪ್ರಕಾರ, ಕೆಲವರು ಟೋಲ್ ಕಟ್ಟಬೇಕಿಲ್ಲ.
ಹೊಸ ವಿನಾಯಿತಿ ನಿಯಮಗಳ ಪ್ರಕಾರ, ದೂರದ ಆಧಾರದ ಮೇಲೆ ಟೋಲ್ ಬದಲಾಗುತ್ತದೆ. ಟ್ರಕ್, ಬಸ್‌ಗಳಿಗೆ ಕಾರುಗಳಿಗಿಂತ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಟೋಲ್‌ಗೇಟ್‌ನ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಾಸ ಮಾಡುವವರಿಗೆ ಸ್ಥಳೀಯ ಪಾಸ್ ಸಿಗುತ್ತದೆ. ಇದನ್ನ ತಿಂಗಳಿಗೊಮ್ಮೆ ರೀಚಾರ್ಜ್ ಮಾಡಿಕೊಳ್ಳಬೇಕು. ಟೋಲ್ ಪ್ಲಾಜಾ ಹತ್ತಿರ ಇರುವವರು ಆಗಾಗ ಅದನ್ನ ದಾಟಿ ಹೋಗಬೇಕಾಗುತ್ತೆ. ಪ್ರತಿ ಬಾರಿಯೂ ಟೋಲ್ ಕಟ್ಟುವುದು ತುಂಬಾ ದುಬಾರಿಯಾಗುತ್ತದೆ. ಆದ್ದರಿಂದ ಬುತೇಕ ಸ್ಥಳೀಯರು ಮಾಸಿಕ ಪಾಸ್ ಪಡೆಯುತ್ತಾರೆ.
ವಾಹನ ಎಷ್ಟು ದೂರ ಸಂಚಾರ ಮಾಡುತ್ತದೆಯೂ ಅಷ್ಟಕ್ಕೆ ಮಾತ್ರ ಟೋಲ್ ಕಟ್ಟುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸಲು ಮುಂದಾಗಿದೆ. ಜಿಪಿಎಸ್, ಇಂಟರ್‌ನೆಟ್ ಬಳಸಿ ಈ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಿದೆ. ಇದರಿಂದ ಟೋಲ್ ವಸೂಲಿ ಪಾರದರ್ಶಕ ಆಗಿರುತ್ತದೆ. 2 ಕಿ.ಮೀ ವಾಹನ ಸಂಚರಿಸಿದರೆ, ಅಷ್ಟಕ್ಕೆ ಮಾತ್ರ ಟೋಲ್ ಶುಲ್ಕ ಆಗಿ ಕಟ್ ಆಗುತ್ತದೆ. 200 ಕಿ.ಮೀ ಸಂಚಾರ ಮಾಡಿದರೆ, ಅದಕ್ಕೆ ತಕ್ಕ ಟೋಲ್ ಕಟ್ ಆಗಲಿದೆ.
ಇನ್ನು ಫಾಸ್ಟ್‌ಟ್ಯಾಗ್ ಬಂದಮೇಲೆ ಟೋಲ್ ವಸೂಲಿ ಪಾರದರ್ಶಕ ಆಗಿದೆ. ಆದರೂ ಕೆಲವೆಡೆ ಪಾಸ್ಟ್ಯಾಗ್ ಅಲ್ಲಿ ಹಣ ಇದ್ದರೂ ಸಹ ಟೋಲ್‌ಗೇಟ್ ಸಿಬ್ಬಂದಿ ವಾಹಗಳನ್ನು ನಿಲ್ಲಿಸಿ ಸಮಯ ವ್ಯರ್ಥ ಮಾಡುತ್ತಾರೆ ಅಲ್ಲದೆ, ಹೆಚ್ಚುವರಿ ಹಣ ಕಟ್ಟಿಸಿಕೊಳ್ಳುತ್ತಾರೆ ಎನ್ನುವ ಆರೋಪಗಳಿವೆ.












Click it and Unblock the Notifications