ಕರ್ನಾಟಕದಲ್ಲಿ ಉತ್ತಮ ಮಳೆ: ತಮಿಳುನಾಡಿಗೆ ವರದಾನ, ಸುವರ್ಣ ಅವಕಾಶ ಕೈಚಲ್ಲಿದ ಕರ್ನಾಟಕ ಸರ್ಕಾರ!
ಪ್ರಸಕ್ತ ಸಾಲಿನಲ್ಲಿ ಕರ್ನಾಟಕದಲ್ಲಿ ಉತ್ತಮ ಮಳೆ ಆಗುತ್ತಿದೆ. ಕಳೆದ ವರ್ಷ ಕರ್ನಾಟಕದಲ್ಲಿ ಉತ್ತಮ ಮಳೆಯಾಗದೆ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ಜಲ ವಿವಾದ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಮುಂಗಾರು ಹಾಗೂ ಹಿಂಗಾರು, ಚಂಡಮಾರುತ ಪ್ರಸರಣ, ವಾಯುಭಾರ ಕುಸಿತ ಹಾಗೂ ಸೈಕ್ಲೋನ್ ಪ್ರಭಾವದಿಂದಾಗಿ ನಿರಂತರವಾಗಿ ಮಳೆ ಆಗಿದೆ. ಇದರಿಂದ ಕಾವೇರಿ ಜಲಾನಯನ ಪ್ರದೇಶದ ಹಾರಂಗಿ, ಕೆಆರ್‌ಎಸ್, ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ಜೀವಕಳೆ ಮೂಡಿದ್ದು, ಪರೋಕ್ಷವಾಗಿ ತಮಿಳುನಾಡಿಗೆ ಲಾಭವಾಗಿದೆ.
ಕರ್ನಾಟಕದಲ್ಲಿ ಈ ಬಾರಿ ಉತ್ತಮ ಮಳೆ ಆಗಿರುವುದರಿಂದ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಈ ವರ್ಷ ಪರಿಹಾರವಾಗಿದೆ. ಕಳೆದ ವರ್ಷದಲ್ಲಿ ಉತ್ತಮ ಮಳೆ ಆಗದೆ ಎರಡೂ ರಾಜ್ಯಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದೀಗ ಎರಡೂ ರಾಜ್ಯಗಳ ರೈತರು ಉತ್ತಮ ಮಳೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಬಾರಿ ತಮಿಳುನಾಡಿಗೆ ಭರ್ಜರಿ ಲಾಭವಾಗಿದೆ. ತಮಿಳುನಾಡು ರಾಜ್ಯವು ಕರ್ನಾಟಕದ ಉತ್ತಮ ಮಳೆಯಿಂದಾಗಿ ಮೂರು ಬೆಳೆಗಳನ್ನು ತೆಗೆದಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಉತ್ತಮ ಮಳೆಯಾಗಿದ್ದು, ಇದನ್ನು ಕರ್ನಾಟಕಕ್ಕೆ ಬಳಸಿಕೊಳ್ಳದೆ ತಮಿಳುನಾಡಿಗೆ ಹೆಚ್ಚುವರಿಯಾಗಿ ಬಿಡುತ್ತಿರುವ ಬಗ್ಗೆ ಕನ್ನಡಿಗರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದರೆ, ಮೇಕೆದಾಟು ಯೋಜನೆಯನ್ನು ಜಾರಿ ಮಾಡುವುದಾಗಿ ಹೇಳಿತ್ತು. ಆದರೆ, ಮೇಕೆದಾಟು ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಹಗ್ಗ ಜಗ್ಗಾಟವಾಗಿಯೇ ಉಳಿದಿದೆ. ಮೇಕೆದಾಟು ಯೋಜನೆಯ ಮೂಲಕ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸುಮಾರು 4.75 ಟಿಎಂಸಿ ಅಡಿ ಕುಡಿಯುವ ನೀರು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇನ್ನು ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ ತಮಿಳುನಾಡಿಗೆ ವರ್ಷಕ್ಕೆ 177.25 ಟಿಎಂಸಿ ಅಡಿ ನೀರು ಹಂಚಿಕೆ ಆಗಬೇಕಾಗಿತ್ತು.
ಆದರೆ ಇದೀಗ ಉತ್ತಮ ಮಳೆ ಆಗಿರುವುದರಿಂದ ಜೂನ್‌ನಿಂದ ಇಲ್ಲಿಯವರೆಗೆ 273 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಈ ಮೂಲಕ ಹೆಚ್ಚುವರಿಯಾಗಿ 96 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಹರಿಸಿದಂತಾಗಿದೆ. ಈ ವರ್ಷ ತಮಿಳುನಾಡು ಹಾಗೂ ಕರ್ನಾಟಕದ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಎದುರಾಗಿಲ್ಲ. ಆದರೆ ಕರ್ನಾಟಕವು ಸುವರ್ಣ ಅವಕಾಶವೊಂದನ್ನು ಕಳೆದುಕೊಂಡಿದೆ. ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ / ಮೇಕೆದಾಟು ಯೋಜನೆ ರೂಪಿಸಿದ್ದರೆ, ಇದು ಕನ್ನಡಿಗರಿಗೆ ಲಾಭವಾಗುತ್ತಿತ್ತು.
ಈ ಬಾರಿ ಕಾವೇರಿ ನದಿ ಮೈದುಂಬಿ ಹರಿದಿದ್ದು, ಪ್ರಸಕ್ತ ವರ್ಷ ಮೊದಲ ಬಾರಿಗೆ ಜೂನ್‌ನಲ್ಲೇ ಡ್ಯಾಂ ಭರ್ತಿಯಾಗಿ ಇತಿಹಾಸ ಬರೆಯಿತು. ಬೆಂಗಳೂರಿಗೆ ವರ್ಷಕ್ಕೆ 31 ಟಿಎಂಸಿ ನೀರು ಕುಡಿಯುವ ನೀರಿಗೆ ಅವಶ್ಯಕತೆ ಇದೆ. ಡ್ಯಾಂ ಭರ್ತಿಯಿಂದ ಈ ಬಾರಿ ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ.
ಇನ್ನು ಕಾವೇರಿ ಜಲಾನಯನ ಪ್ರದೇಶದ ಹಾರಂಗಿ, ಕೆಆರ್‌ಎಸ್, ಕಬಿನಿ, ಹೇಮಾವತಿ ಜಲಾಶಯಗಳು ಅಕ್ಟೋಬರ್‌ನಲ್ಲಿ ಭರ್ತಿಯಾಗಿ, 115 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಅಲ್ಲದೇ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಾವೇರಿ ನೀರಾವರಿ ನಿಗಮದ 6,576 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಇನ್ನು ಸಣ್ಣ ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.












Click it and Unblock the Notifications