ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮಿತವ್ಯಯದ ಕರೆ: ಇದು ಸರ್ಕಾರದ ವೈಫಲ್ಯಕ್ಕೆ ಪುರಾವೆಗಳು ಎಂದ ರಾಹುಲ್‌ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಜನಸಾಮಾನ್ಯರಿಗೆ ನೀಡಿರುವ 'ತ್ಯಾಗ'ದ ಕರೆಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಇವು ಬೋಧನೆಗಳಲ್ಲ, ಬದಲಿಗೆ ಸರ್ಕಾರದ ವೈಫಲ್ಯದ ಪುರಾವೆಗಳು ಎಂದು ಅವರು ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಅವರು ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿದೇಶಿ ವಿನಿಮಯ ಉಳಿಸಲು ಮತ್ತು ಇಂಧನ ಬಳಕೆ ತಗ್ಗಿಸಲು ಜನರಿಗೆ ನೀಡಿದ್ದ ಹಲವು ಸಲಹೆಗಳಿಗೆ ಪ್ರತಿಕ್ರಿಯೆಯಾಗಿ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

"ಚಿನ್ನ ಕೊಳ್ಳಬೇಡಿ, ವಿದೇಶಕ್ಕೆ ಹೋಗಬೇಡಿ, ಪೆಟ್ರೋಲ್ ಕಡಿಮೆ ಬಳಸಿ, ಗೊಬ್ಬರ ಮತ್ತು ಅಡುಗೆ ಎಣ್ಣೆ ಕಡಿತಗೊಳಿಸಿ ಎಂದು ಮೋದಿ ಅವರು ಜನರಲ್ಲಿ ತ್ಯಾಗ ಕೇಳುತ್ತಿದ್ದಾರೆ. ಇವು ಉಪದೇಶಗಳಲ್ಲ, ಕಳೆದ 12 ವರ್ಷಗಳ ಆಡಳಿತದ ವೈಫಲ್ಯಕ್ಕೆ ಸಿಕ್ಕಿರುವ ಸಾಕ್ಷಿಗಳು" ಎಂದು ರಾಹುಲ್ ಲೇವಡಿ ಮಾಡಿದ್ದಾರೆ.

Gold Purchase

ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರ

ಪ್ರತಿ ಬಾರಿಯೂ ಸಮಸ್ಯೆ ಎದುರಾದಾಗ ಸರ್ಕಾರವು ತನ್ನ ಮೇಲಿರುವ ಹೊಣೆಗಾರಿಕೆಯನ್ನು ಜನರ ಮೇಲೆ ವರ್ಗಾಯಿಸಿ, ತಾನು ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಅವರು ರಾಹುಲ್‌ ಆರೋಪಿಸಿದ್ದಾರೆ. ದೇಶದ ಜನತೆ ಏನನ್ನು ಕೊಳ್ಳಬೇಕು, ಎಲ್ಲಿಗೆ ಹೋಗಬೇಕು ಎಂಬುದನ್ನು ಸರ್ಕಾರ ನಿರ್ಧರಿಸುವಂತಹ ಪರಿಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಲಾಗಿದೆ. ದೇಶವನ್ನು ಮುನ್ನಡೆಸುವುದು ಈಗಿನ ಪ್ರಧಾನಿಯ ಕೈಯಲ್ಲಿ ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಭಾರತದ ವಿದೇಶಿ ವಿನಿಮಯ ಮೀಸಲು ಮೇಲೆ ಒತ್ತಡ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಹೈದರಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಜನರಿಗೆ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಈ ಮನವಿಯು ಈಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ದೊಡ್ಡ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ.

ಮಿತವ್ಯಯದ ಹಾದಿ ಹಿಡಿಯಲು ಪ್ರಧಾನಿ ಮೋದಿ ಮನವಿ

ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಡಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕಟ್ಟುನಿಟ್ಟಿನ ಮಿತವ್ಯಯ ಕ್ರಮಗಳನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ. ಭಾನುವಾರ ಹೈದರಾಬಾದ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಂಕಷ್ಟದ ಸಮಯದಲ್ಲಿ ರಾಷ್ಟ್ರದ ಕರ್ತವ್ಯಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಇಂಧನ ಮಿತ ಬಳಕೆ, ಚಿನ್ನ ಖರೀದಿಸದಂತೆ ನರೇಂದ್ರ ಮೋದಿ ಕರೆ: ಇದರ ಹಿಂದಿನ ಉದ್ದೇಶವೇನು?
ಇಂಧನ ಮಿತ ಬಳಕೆ, ಚಿನ್ನ ಖರೀದಿಸದಂತೆ ನರೇಂದ್ರ ಮೋದಿ ಕರೆ: ಇದರ ಹಿಂದಿನ ಉದ್ದೇಶವೇನು?

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಪೂರೈಕೆ ಸರಪಳಿಯ ಏರುಪೇರಿನಿಂದಾಗಿ ಭಾರತಕ್ಕೆ ಕಚ್ಚಾ ತೈಲದ ಆಮದು ಕಠಿಣವಾಗಿದೆ. ಭಾರತವು ತನ್ನ ಒಟ್ಟು ಬಳಕೆಯ ಶೇ 88ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ, ವಿದೇಶಿ ವಿನಿಮಯ ಮೀಸಲನ್ನು ಉಳಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಅತ್ಯಂತ ಮಿತವಾಗಿ ಬಳಸುವುದು ನಮ್ಮ ದೊಡ್ಡ ಸಂಕಲ್ಪವಾಗಲಿ. ಮೆಟ್ರೋ ಸೌಲಭ್ಯವಿರುವ ನಗರಗಳಲ್ಲಿ ಕೇವಲ ಮೆಟ್ರೋ ರೈಲುಗಳನ್ನೇ ಬಳಸಿ. ಅನಿವಾರ್ಯವಾದಾಗ ಮಾತ್ರ ಕಾರು ಬಳಸಿ, ಸಾಧ್ಯವಾದಷ್ಟು 'ಕಾರ್‌ಪೂಲಿಂಗ್' ರೂಢಿಸಿಕೊಳ್ಳಿ" ಎಂದು ಪ್ರಧಾನಿ ಹೇಳಿದರು. ಇನ್ನು ವಿದೇಶಿ ಹಣವು ದೇಶದಿಂದ ಹೊರಹೋಗುವುದನ್ನು ತಡೆಯಲು ವಿದೇಶಿ ಪ್ರವಾಸಗಳನ್ನು ಮುಂದೂಡುವಂತೆ ಮತ್ತು ಚಿನ್ನದ ಖರೀದಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಆಮದಾಗುವ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವ ಮೂಲಕ ದೇಶದ ಆಮದು ವೆಚ್ಚವನ್ನು ತಗ್ಗಿಸಲು ಸಹಕರಿಸುವಂತೆ ಅವರು ಕೋರಿದ್ದಾರೆ. ಈ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ, ನಾವು ಕರ್ತವ್ಯದ ಸಂಕಲ್ಪ ಮಾಡಬೇಕು ಮತ್ತು ಅದನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಪೂರೈಸಬೇಕು ಎಂದು ಮೋದಿ ಹೇಳಿದ್ದಾರೆ. ಪ್ರಧಾನಿಯವರ ಈ ಮನವಿಯು ಒಂದೆಡೆ ದೇಶದ ಆರ್ಥಿಕ ಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷಗಳ ತೀವ್ರ ಟೀಕೆಗೂ ಗುರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+