ಭಾರತದಲ್ಲಿ ಇಂದಿನಿಂದ 'ಹೊಸ ನ್ಯಾಯ ವ್ಯವಸ್ಥೆ' ಜಾರಿ: ಬ್ರಿಟೀಷ್ ಕಾನೂನುಗಳಿಗೆ ಮುಕ್ತಿ
ಬೆಂಗಳೂರು, ಜುಲೈ 01: ಭಾರತದ ಆಡಳಿತ ವ್ಯವಸ್ಥೆಯಲ್ಲಿ ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದ್ದ ಬ್ರಿಟೀಷ್ ಕಾನೂನು ವ್ಯವಸ್ಥೆ ರದ್ದಾಗುವ ಜೊತೆಗೆ ಇಂದು 2024ರ ಜುಲೈ 01 ರಿಂದ ದೇಶದಲ್ಲಿ 'ಹೊಸ ಕಾನೂನು ವ್ಯವಸ್ಥೆ' ಜಾರಿಗೆ ಬರಲಿದೆ. ಈ ಮೂಲಕ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದ್ದ ಹಳೆಯ ಕಾನೂನು ಅನುಸರಣೆ ಅಂತ್ಯಗೊಳ್ಳಲಿದೆ.
ಹೌದು, ಕೇಂದ್ರ ಸರ್ಕಾರ ಕಾನೂನು ಸುಧಾರಣೆಯಲ್ಲಿ ಮೈಲುಗಲ್ಲು ಸಾಧಿಸುತ್ತಿದೆ. ಬ್ರಿಟಿಷರ ಕಾಲದಿಂದಲೂ ದೇಶದಲ್ಲಿ ಜಾರಿಯಲ್ಲಿದ್ದ ಕಾನೂನುಗಳಿಗೆ ಮುಕ್ತಿ ಹಾಡಿರುವ ಕೇಂದ್ರ ಸರ್ಕಾರ, ದೇಶಿಯ ಕಾನೂನುಗಳನ್ನು ರಚಿಸಿದೆ. ಇದರಿಂದಾಗಿ ಇದುವರೆಗಿನ ಬ್ರಿಟೀಷರು ಮಾಡಿಟ್ಟಿದ್ದ 'ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳು' ರದ್ದಾಗಲಿವೆ.

ಇದರ ಬೆನ್ನಲ್ಲೆ ಇಂದಿನಿಂದ ಈ ಮೂರು ಅಪರಾಧ ಕಾಯ್ದೆಗಳಾದ 'ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ'ಗಳು ಜಾರಿಗೆ ಬರಲಿವೆ. ಭಾರತೀಯರಿಗಾಗಿ ಈ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ ಎಂದು ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಅದರಂತೆ ಇಂದಿನಿಂದ ಅನುಷ್ಠಾನಕ್ಕೆ ತರಲಾಗುತ್ತಿದೆ.
ದೇಶದಲ್ಲಿನ ಈ ಹೊಸ ಅಪರಾಧ ಕಾಯ್ದೆಗಳ ಜಾರಿಯಿಂದ ಕಾನೂನು ವಲಯದಲ್ಲಿನ ಅತೀ ದೊಡ್ಡ ರೂಪಾಂತರಕ್ಕೆ ಕಾರಣವಾಗಲಿವೆ. ಇವುಗಳ ಮೂಲಕ ಆಧುನಿಕ ನ್ಯಾಯ ವ್ಯವಸ್ಥೆ ದೇಶದಲ್ಲಿ ಜಾರಿಗೊಳ್ಳುತ್ತಿದೆ. ಇದರಿಂದ ಪೊಲೀಸ್, ದೂರು, ತನಿಖೆ ಇನ್ನಿತರ ನಿಯಮಗಳು ಆಧುನಿಕಗೊಳ್ಳಲಿವೆ.

ಇನ್ನು ಮುಂದೆ ಈ ಹೊಸ ನ್ಯಾಯ ವ್ಯವಸ್ಥೆಯಲ್ಲಿ ಶೂನ್ಯ ಎಫ್‌ಐಆರ್, ಆನ್‌ಲೈನ್‌ನಲ್ಲಿಯೇ ದೂರು ನೀಡುವುದು, ಎಸ್‌ಎಂಎಸ್ ಮೂಲಕ ಸಮನ್ಸ್ ಜಾರಿ, ಅಪರಾಧ ಸ್ಥಳದಲ್ಲಿನ ಕಡ್ಡಾ ವಿಡಿಯೋ ಚಿತ್ರೀಕರಣ ಜೊತೆಗೆ ಅಗತ್ಯತೆ, ಕಾಲಕಾಲಕ್ಕೆ ಕಾನೂನಿನಲ್ಲಿ ಅಗತ್ಯ ಬದಲಾವಣೆ ಮಾಡಿ ಹೊಸ ಅಪರಾಧ ಕಾಯ್ದೆ ರೂಪಿಸಲಾಗಿದೆ.
ಪ್ರಯೋಜನಗಳು ಏನು?
* ಬ್ರಿಟಿಷರ ಕಾಯ್ದೆಗಳಲ್ಲಿ ಶಿಕ್ಷೆಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ನ್ಯಾಯಕ್ಕೆ ಒತ್ತು ನೀಡಲಾಗುವುದು.
* ಶೂನ್ಯ ಎಫ್‌ಐಆರ್, ಆನ್‌ಲೈನ್‌ನಲ್ಲಿಯೇ ದೂರು ನೀಡುವುದು, ಎಸ್‌ಎಂಎಸ್ ಮೂಲಕ ಸಮನ್ಸ್ ಜಾರಿ ಅನುಕೂಲ.
* ಅಪರಾಧ ನಡೆದ ಸ್ಥಳದಲ್ಲಿ ತನಿಖಾಧಿಕಾರಿಗಳು ಪೂರ್ಣ ವಿಡಿಯೋ ಮಾಡಬೇಕು. ವಿಚಾರಣೆ ಮುಗಿದ 45 ದಿನದಲ್ಲಿ ತೀರ್ಪು ನೀಡಬೇಕು.
* ಕೋರ್ಟ್‌ನಲ್ಲಿ ವಿಚಾರಣೆ ಪೂರ್ಣಗೊಂಡ ಬಳಿಕ ಎರಡು ತಿಂಗಳಲ್ಲಿ (60) ದಿನದಲ್ಲಿ ಆರೋಪಿ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಬೇಕು.
* ಇನ್ನು ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ದಾಖಲಿಸಿಕೊಳ್ಳಬೇಕು. ಈ ವೇಳೆ ಪೊಲೀಸ್ ಅಧಿಕಾರಿಯೇ ದಾಖಲಿಸಿಕೊಳ್ಳಬೇಕು.
* ಪೊಲೀಸರು ಬಂಧಿಸಿದಾಗ ಬಂಧಿತ ತನಿಗಿಷ್ಟದ ವ್ಯಕ್ತಿಗೆ ಮಾಹಿತಿ ನೀಡಲು ಈ ಹೊಸ ವ್ಯವಸ್ಥೆಯಲ್ಲಿ ಅವಕಾಶ.
* ಸಾಮೂಹಿಕ ಹತ್ಯೆ, ಸಾಮೂಹಿಕ ಅತ್ಯಾಚಾರ (ಗ್ಯಾಂಗ್ ರೇಪ್), ಸರಗಳ್ಳತನದಂತಹ ಪ್ರಕರಣಗಳನ್ನು ದಾಖಲಿಸಲು ಈವರೆಗೆ ನಿರ್ದಿಷ್ಟ ಸೆಕ್ಷನ್ ಇರಲಿಲ್ಲ. ಈ ಹೊಸ ವ್ಯವಸ್ಥೆಯಲ್ಲಿ ಅವು ಇರಲಿವೆ ಎಂದು ಕೇಂದ್ರ ತಿಳಿಸಿದೆ.












Click it and Unblock the Notifications