ಗೋದ್ರೋತ್ತರ ಗಲಭೆ: ನಾಲ್ಕು ಪ್ರಕರಣಗಳಲ್ಲಿ 35 ಜನರನ್ನು ಖುಲಾಸೆಗೊಳಿಸಿದ ಗುಜರಾತ್ ನ್ಯಾಯಾಲಯ
ಅಹ್ಮದಾಬಾದ್, ಜೂನ್ 17: 2002ರ ಗೋಧ್ರಾ ನಂತರದ ಗಲಭೆಗೆ ಸಂಬಂಧಿಸಿದ 35 ಜನರನ್ನು ಗುಜರಾತ್‌ನ ವಿಚಾರಣಾ ನ್ಯಾಯಾಲಯವು ಖುಲಾಸೆಗೊಳಿದೆ. ಅವರಲ್ಲಿ ಅನೇಕ ವೈದ್ಯರು, ಪ್ರಾಧ್ಯಾಪಕರು, ಶಿಕ್ಷಕರು ಮತ್ತು ಉದ್ಯಮಿಗಳು ಸೇರಿದ್ದಾರೆ. 'ಹುಸಿ ಸೆಕ್ಯೂಲರ್ ಮಾಧ್ಯಮಗಳ ಅನಗತ್ಯ ಆರೋಪಗಳಿಂದಾಗಿ ಸುದೀರ್ಘ ವಿಚಾರಣೆಯನ್ನು ಎದುರಿಸಬೇಕಾಯಿತು' ಎಂದು ಕೋರ್ಟ್ ಹೇಳಿದೆ.
'ಗೋಧ್ರಾ ಗಲಭೆಗಳು ಸ್ವಯಂಪ್ರೇರಿತವಾಗಿದೆ. ಹುಸಿ-ಸೆಕ್ಯುಲರ್ ವ್ಯಕ್ತಿಗಳು ಹೇಳಿದಂತೆ ಪೂರ್ವ ನಿಯೋಜಿತವಲ್ಲ' ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

'ಆರೋಪಗಳನ್ನು ಸಾಬೀತುಪಡಿಸದ ಕಾರಣ ಪ್ರಾಸಿಕ್ಯೂಷನ್ ಯಶಸ್ವಿಯಾಗಲು ಸಾಧ್ಯವಾಗಿಲ್ಲ' ಎಂದು ನ್ಯಾಯಾದೀಶರು ತೀರ್ಮಾನಿಸಿದ್ದಾರೆ. 'ಪ್ರತಿ ಬಾರಿ ಕೋಮು ಸಂಘರ್ಷ ಉಂಟಾದರೆ, ಬಹುಸಂಖ್ಯಾತರನ್ನು ದೂಷಿಸಲಾಗುತ್ತದೆ. ಸಾಂಪ್ರದಾಯಿಕ ಸಹಿಷ್ಣುತೆಯ ಚಿಲುಮೆ ಬತ್ತಿ ಹೋಗುತ್ತದೆ' ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಪಂಚಮಹಲ್ ಜಿಲ್ಲೆಯ ಹಲೋಲ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಷ್ ಬಾಲಕೃಷ್ಣ ತ್ರಿವೇದಿ ಈ ತೀರ್ಪನ್ನು ನೀಡಿದ್ದಾರೆ. ಒಟ್ಟು ನಾಲ್ಕು ಪ್ರಕರಣಗಳಲ್ಲಿ 35 ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ವಿಚಾರಣೆ ಪ್ರಾರಂಭಗೊಂಡಿತು. 52 ಆರೋಪಿಗಳ ಪೈಕಿ 17 ಮಂದಿ ವಿಚಾರಣೆಯ ಸಮಯದಲ್ಲಿ ಮರಣ ಹೊಂದಿದರು ಎಂದು ತಿಳಿದುಬಂದಿದೆ.
ಆರೋಪಿಗಳ ಮೇಲೆ ಕೊಲೆ, ಗಲಭೆ, ಬೆಂಕಿ ಹಚ್ಚುವಿಕೆ, ಕಾನೂನುಬಾಹಿರ ಸಭೆ, ಶಸ್ತ್ರಾಸ್ತ್ರ ಕಾಯಿದೆ ಪ್ರಕರಣಗಳಿದ್ದವು. ರುಹುಲ್ ಅಮೀನ್ ಪಾಡ್ವಾ, ಹರುನ್ ಅಬ್ದುಲ್ಸತ್ತಾರ್ ತಾಸಿಯಾ ಮತ್ತು ಯೂಸುಫ್ ಇಬ್ರಾಹಿಂ ಶೇಖ್ ಎಂಬ ಮೂವರನ್ನು ಕೊಂದ ಆರೋಪಗಳನ್ನು ಹೊರಿಸಲಾಗಿತ್ತು.
'ಪ್ರಸ್ತುತ ಪ್ರಕರಣದಲ್ಲಿ ಪ್ರಾಸಿಕ್ಯೂಟರ್ ಅನಗತ್ಯವಾಗಿ 130 ಸಾಕ್ಷಿಗಳನ್ನು ಕರೆಯುವ ಮೂಲಕ ಪ್ರಕರಣದ ವಿಚಾರಣೆಯನ್ನು ವಿಸ್ತರಿಸಿದ್ದಾರೆ. ನಮ್ಮ ದೇಶದಲ್ಲಿ ಸತ್ಯದ ಗುಣಮಟ್ಟವು ತುಂಬಾ ಕಳಪೆಯಾಗಿದೆ. ಈ ಪ್ರಕರಣದಲ್ಲಿ ಬಹುತೇಕ ಎಲ್ಲಾ ಸಾಕ್ಷಿಗಳ ಸಾಕ್ಷ್ಯಗಳು ಸಂಪೂರ್ಣವಾಗಿ ವಿಶ್ವಾಸಾರ್ಹವಲ್ಲ ಎಂಬುದಾಗಿ ತಿಳಿದುಬಂದಿದೆ' ಎಂದು ತೀರ್ಪು ಹೇಳಿದೆ.
'ಭಾರತದಲ್ಲಿ ಕೋಮು ಗಲಭೆಗಳು ಹಳೆಯ ಕಾಲದಿಂದಲೇ ಆರಂಭಗೊಂಡಿವೆ. ಸಾಮಾನ್ಯವಾಗಿ ಕ್ಷುಲ್ಲಕ ವಿವಾದಗಳಿಂದ ಭುಗಿಲೆದ್ದಿವೆ. ಅಸಹಿಷ್ಣುತೆ, ಪ್ರಾರ್ಥನೆ ಸಮಯಗಳಲ್ಲಿ ಸಂಘರ್ಷ, ಪೂಜಾ ಸ್ಥಳಗಳ ವಿವಾದ, ಅಂತರ್ವಿವಾಹ, ಪವಿತ್ರ ಸ್ಥಳಗಳ ಅಪವಿತ್ರತೆ ಸೇರಿದಂತೆ ಹಲವು ಕ್ಷುಲ್ಲಕ ಕಾರಣಗಳಿಂದ ಕೋಮುಗಲಭೆಗಳು ಏರ್ಪಟ್ಟಿವೆ' ಎಂದು ಹೆಚ್ಚುವರಿ ನ್ಯಾಯಾಧೀಶ ಹರ್ಷ್ ಬಾಲಕೃಷ್ಣ ತ್ರಿವೇದಿ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications