ಇನ್ನುಮುಂದೆ 10 ನಿಮಿಷಕ್ಕೆ ಸಿಗಲ್ಲ ಡೆಲಿವರಿ, ಬಹಿರಂಗ ಘೋಷಣೆಗೆ ಕಾರ್ಮಿಕರ ಆಗ್ರಹ! Gig workers
ಆಧುನಿಕ ಕಾಲದಲ್ಲಿ ಎಲ್ಲವೂ ಸ್ಮಾರ್ಟ್ ಆಗಿದ್ದು, ಮನೆಗೆ ಬರುವ ದಿನಸಿ ಮತ್ತು ಫುಡ್ ಡೆಲಿವರಿ ಕೂಡ ಸ್ಮಾರ್ಟ್ ಆಂಡ್ ಸ್ಮಾರ್ಟ್ ಆಗಿದೆ. ಆರ್ಡರ್ ಮಾಡಿದ ಕೇವಲ 10 ನಿಮಿಷಕ್ಕೆ ಫುಡ್ ಡೆಲಿವರಿ ಸಿಗುತ್ತೆ, ದಿನಸಿ ವಸ್ತುಗಳು ಮನೆಗೆ ನೇರವಾಗಿ ಬರುತ್ತದೆ ಅನ್ನೋ ಕಾರಣಕ್ಕೆ ಜನರು ಕೂಡ ಆನ್‌ಲೈನ್ ಮೂಲಕವೇ ಆರ್ಡರ್ ಮಾಡಲು ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಆದರೆ, ಈ ರೀತಿ 10 ನಿಮಿಷದ ಡೆಲಿವರಿ ಟಾರ್ಗೆಟ್ ಪರಿಣಾಮ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ. ಅಲ್ಲದೆ ಡೆಲಿವರಿ ಮಾಡುವ ಕಾರ್ಮಿಕರ ಜೀವ ಅಪಾಯಕ್ಕೆ ಸಿಲುಕಿತ್ತಿದೆ ಎಂಬ ಆರೋಪಗಳ ನಡುವೆ ಇದೀಗ ಮಹತ್ವದ ನಿರ್ಧಾರ ಹೊರಬಿದ್ದಿದೆ.
ಆನ್‌ಲೈನ್ ಮೂಲಕ ಆಹಾರ, ದಿನಸಿ ಸೇರಿದಂತೆ ಹಲವು ವಸ್ತುಗಳನ್ನು ಡೆಲಿವರಿ ಮಾಡುವ ಹಲವು ಸಂಸ್ಥೆಗಳು ಈಗಾಗಲೇ 10 ನಿಮಿಷದ ಡೆಲಿವರಿ ಟಾರ್ಗೆಟ್ ಕೈಬಿಟ್ಟಿವೆ. ಕಾರ್ಮಿಕರ ಹಿತರಕ್ಷಣೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸೂಚನೆ ನಂತರ ಹೀಗೆ 10 ನಿಮಿಷದ ಡೆಲಿವರಿ ಕಾನ್ಸೆಪ್ಟ್ ಕೈಬಿಡಲಾಗಿದೆ. ಹೀಗಿದ್ದರೂ ಆ ವಿಚಾರವನ್ನು ಬಹಿರಂಗವಾಗಿ ಘೋಷಿಸಿ ಸಾರ್ವಜನಿಕವಾಗಿ ಖಂಡಿಸುವಂತೆ ಕಾರ್ಮಿಕರು ಆಗ್ರಹಿಸಿದ್ದಾರೆ. ಉತ್ಪನ್ನಗಳನ್ನ ತ್ವರಿತವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ದೀರ್ಘ ಕಾರ್ಯಾಚರಣೆ ಮಾನಸಿಕ ಪರಿಣಾಮ ಬೀರಿದೆ, ಎಂದು ಗಿಗ್ ಕಾರ್ಮಿಕರು ಆರೋಪಿಸಿದ್ದಾರೆ.

ಸದ್ದೇ ಇಲ್ಲದೆ ಕೈಬಿಟ್ಟಿದ್ದು ಏಕೆ?
ಮತ್ತೊಂದು ಕಡೆ ಈ ವಿಚಾರವಾಗಿ ನಡೆದಿರುವ ಸಮೀಕ್ಷೆ ಒಂದರ ಪ್ರಕಾರ, ಬೆಂಗಳೂರಿನ ಶೇಕಡಾ 61 ರಷ್ಟು ಗ್ರಾಹಕರು ಸರ್ಕಾರದ ಕ್ರಮ ಬೆಂಬಲಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಿದ್ದ 16,245 ಜನರಲ್ಲಿ, ಶೇಕಡಾ 31 ರಷ್ಟು ಜನ 10 ನಿಮಿಷಗಳ ವಿತರಣೆಯನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಈ ಪೈಕಿ ಔಷಧ ಅಗತ್ಯತೆ ಇರುವವರು ಕೂಡ ಇಷ್ಟು ಬೇಗ, ಎಂದರೆ 10 ನಿಮಿಷದ ಡೆಲಿವರಿ ಅಗತ್ಯತೆ ಇಲ್ಲ ಎಂದಿದ್ದಾರೆ. ಈ ಹಿನ್ನೆಲೆ ಬ್ಲಿಂಕಿಟ್ ಸೇರಿದಂತೆ ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ಕೊಡುವ ಎಲ್ಲಾ ಸಂಸ್ಥೆಗಳು 10 ನಿಮಿಷದ ಡೆಲಿವರಿ ನಿರ್ಧಾರ ಕೈಬಿಟ್ಟ ವಿಚಾರವನ್ನ ಈಗ ಬಹಿರಂಗವಾಗಿ ಘೋಷಿಸಬೇಕು ಎಂದು ಗಿಗ್ ಕಾರ್ಮಿಕರು ಆಗ್ರಹಿಸಿದ್ದಾರೆ. ಹೀಗೆ ಬಹಿರಂಗ ಘೋಷಣೆ ಮಾತ್ರ ಡೆಲಿವರಿ ಮಾಡುವವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂಬುದು ಕಾರ್ಮಿಕರ ಅಭಿಪ್ರಾಯ.
ಜಂಟಿ ಪೊಲೀಸ್ ಆಯುಕ್ತರು ಹೇಳುವುದೇನು?
10 ನಿಮಿಷದ ಡೆಲಿವರಿ ನಿರ್ಧಾರ ಕೈಬಿಟ್ಟಿದ್ದರೂ ವಸ್ತುಗಳನ್ನು ಡೆಲಿವರಿ ಕೊಡುವ ಸಂಸ್ಥೆಗಳ ಟ್ಯಾಗ್ ಲೈನ್ ಅದೇ ಆಗಿದೆ. ಹೀಗಿದ್ದಾಗ ಹೆಚ್ಚಿನ ಡೆಲಿವರಿ ಕಾರ್ಮಿಕರು ಗ್ರಾಹಕರಿಂದ ಉತ್ತಮವಾದ ರೇಟಿಂಗ್ ಪಡೆಯಲು ಆತುರಪಡುತ್ತಾರೆ. ಇದರಿಂದ ದೊಡ್ಡ ಸಮಸ್ಯೆ ಎದುರಾಗುತ್ತಿದ್ದು, ರೆಸ್ಟೋರೆಂಟ್‌ಗಳಿಂದ ವಿಳಂಬ ಹಾಗೂ ಪಿಕಪ್ ಸಮಯವನ್ನು ಪರಿಗಣಿಸದ ಆಹಾರ ವಿತರಣಾ ವೇದಿಕೆಗಳಲ್ಲಿ ಸಮಸ್ಯೆ ಹೆಚ್ಚಾಗಿ ಇರುತ್ತದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ ಡೆಲಿವರಿ ಮಾಡುವ ನೌಕರರು.
ಮತ್ತೊಂದು ಕಡೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸೂಚನೆ ಹಿನ್ನೆಲೆ 10 ನಿಮಿಷದ ಡೆಲಿವರಿ ನಿಯಮ ನಿಂತಿರುವ ಕುರಿತು, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರದ ಸೂಚನೆ ಸರಿಯಾದ ಕ್ರಮ ಎಂದಿರುವ ಅವರು, ಇದು ವಿತರಣಾ ಕಾರ್ಮಿಕರಿಂದ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಿಸುತ್ತದೆ ಎಂದಿದ್ದಾರೆ. ಹಲವು ಬಾರಿ ಡೆಲಿವರಿ ಮಾಡುವ ಕಾರ್ಮಿಕರು ಸಂಚಾರ ನಿಯಮ ಉಲ್ಲಂಘನೆ ಮಾಡಿದಾಗ ತ್ವರಿತ ಸರಬರಾಜು ಕಾರಣವನ್ನೇ ಹೇಳುತ್ತಾರೆ. ಹೀಗಾಗಿ 10 ನಿಮಿಷದ ಡೆಲಿವರಿ ನಿರ್ಧಾರ ಕೈಬಿಟ್ಟಿದ್ದನ್ನು ಸ್ವಾಗತಿಸಿದ್ದಾರೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು.












Click it and Unblock the Notifications