ಪಾಕ್ ಆಕ್ರಮಿತ ಕಾಶ್ಮೀರವನ್ನೂ ವಶಪಡಿಸಿಕೊಳ್ಳುತ್ತೇವೆ ಮಗ: ಅಫ್ರಿದಿಗೆ ಗಂಭೀರ್ ಎಚ್ಚರಿಕೆ
ನವದೆಹಲಿ, ಆಗಸ್ಟ್ 07: ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರೀದಿ ಅವರೊಂದಿಗೆ ಟ್ವಿಟ್ಟರ್ ವಾರ್ ಮುಂದುವರೆಸಿದ್ದು, ಇಂದು ಪಿಓಕೆ ಬಗ್ಗೆ ಅಫ್ರಿದಿಗೆ ಎಚ್ಚರಿಕೆ ನೀಡಿದ್ದಾರೆ ಗಂಭಿರ್.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದು ಮಾಡಿದ ಭಾರತ ಸರ್ಕಾರದ ನಿರ್ಧಾರವನ್ನು ಟ್ವಿಟ್ಟರ್‌ನಲ್ಲಿ ಟೀಕಿಸಿದ್ದ ಶಾಹಿದ್ ಅಫ್ರಿದಿ, 'ಕಾಶ್ಮೀರಕ್ಕೆ ಅದರ ಹಕ್ಕು ಸಿಗಬೇಕು, ಅಪ್ರಚೋದಿತ ಆಕ್ರಮಣಶೀಲತೆ ಮತ್ತು ಅಪರಾಧಗಳು ಕಾಶ್ಮೀರದಲ್ಲಿ ಹೆಚ್ಚಾಗುತ್ತಿವೆ' ಎಂದು ಹೇಳಿದ್ದರು.
ಕಾಶ್ಮೀರದ ವಿಚಾರದಲ್ಲಿ ವಿಶ್ವಸಂಸ್ಥೆ ಕಣ್ಣು ಮುಚ್ಚಿಕೊಂಡು ಕೂತಿದೆ. ಕಾಶ್ಮೀರದಲ್ಲಿ ಮಾನವೀಯತೆಯ ಮೇಲೆ ದಾಳಿ ಆಗುತ್ತಿದೆ. ಅಮೆರಿಕದ ಅಧ್ಯಕ್ಷರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಅಫ್ರಿದಿ ಒತ್ತಾಯಿಸಿದ್ದರು.

ಅಫ್ರಿದಿ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಗೌತಮ್ ಗಂಭಿರ್, 'ಮಾನವೀಯತೆಯ ಪ್ರಚೋದಿತ ಆಕ್ರಮಣಶೀಲತೆ ಮತ್ತು ಅಪರಾಧಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೆಚ್ಚಾಗಿವೆಯೇ ಹೊರತು, ಕಾಶ್ಮೀರದಲ್ಲ' ಎಂದು ಹೇಳಿದ್ದಾರೆ.
ಟ್ವೀಟ್‌ನಲ್ಲಿ ಅಫ್ರಿದಿ ಅವರ ಕಾಲೆಳೆದಿರುವ ಗೌತಮ್ ಗಂಭಿರ್, 'ಚಿಂತೆ ಬೇಡ ಮಗಾ ಪಾಕ್ ಆಕ್ರಮಿತ ಕಾಶ್ಮೀರದ ವಿಷಯವನ್ನು ಆದಷ್ಟು ಬೇಗ ಪರಿಹರಿಸುತ್ತೇವೆ' ಎಂದು ಹೇಳಿದ್ದಾರೆ.
ಕ್ರಿಕೆಟ್ ಆಡುವಾಗಲೂ ತಮ್ಮ ಆಕ್ರಮಣಶೀಲತೆಗೆ ಹೆಸರಾಗಿದ್ದ ಗೌತಮ್ ಗಂಭೀರ್, ಟ್ವಿಟ್ಟರ್‌ನಲ್ಲೂ ಸಹ ವ್ಯಂಗ್ಯದ, ಕಾಲೆಳೆಯುವ, ಆಕ್ರೋಶದ ಟ್ವೀಟ್‌ಗಳ ಮೂಲಕವೇ ಪರಿಚಿತರು. ಇದೇ ಟ್ವೀಟ್‌ಗಳಿಂದಲೇ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ದೊರಕಿದೆ ಎಂದೂ ಹೇಳಲಾಗುತ್ತಿದೆ.
ಗೌತಮ್ ಗಂಭೀರ್ ಮತ್ತು ಶಾಹಿದ್ ಅಫ್ರಿದಿ ಅವರು ಕಾಶ್ಮೀರದ ವಿಷಯಕ್ಕೆ ಈ ಹಿಂದೆಯೂ ಟ್ವಿಟ್ಟರ್‌ನಲ್ಲಿ ಜಗಳವಾಡಿದ್ದಾರೆ.












Click it and Unblock the Notifications