2 ನೇ ಕೋವಿಡ್ ಲಸಿಕೆ, ಮುನ್ನೆಚ್ಚರಿಕೆ ಡೋಸ್ ನಡುವಿನ ಅಂತರ 9-12 ತಿಂಗಳಿರುವ ಸಾಧ್ಯತೆ
ನವದೆಹಲಿ, ಡಿಸೆಂಬರ್ 26: ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರದಂದು ದೇಶವನ್ನು ಉದ್ದೇಶಿಸಿ ಮಾತಾಡಿ, ಮುಂದಿನ ವರ್ಷದ ಜನವರಿಯಿಂದ ಭಾರತವು 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಮೊದಲ ಕೊರೊನಾವೈರಸ್ ಲಸಿಕೆ ಡೋಸ್‌ಗಳನ್ನು ಪ್ರಾರಂಭ ಮಾಡುತ್ತದೆ. ಹಾಗೆಯೇ ಆರೋಗ್ಯ,ಮುಂಚೂಣಿಯ ಕಾರ್ಯಕರ್ತರಿಗೆ ಮತ್ತು ಕೆಲವು ಆರೋಗ್ಯ ಸಮಸ್ಯೆ ಹೊಂದಿರುವ 60 ವರ್ಷಕ್ಕಿಂತ ಹಿರಿಯ ವ್ಯಕ್ತಿಗಳಿಗೆ ಬೂಸ್ಟರ್ ಡೋಸ್‌ಗಳನ್ನು ನೀಡಲು ಆರಂಭ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಆದರೆ, ಈ ಹೆಚ್ಚುವರಿ ಡೋಸ್ ನಡುವಿನ ಅಂತರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ, ಈ ಬಗ್ಗೆ ಇತ್ತೀಚಿನ ವರದಿ ಇಲ್ಲಿದೆ...
ಕೋವಿಡ್ ಲಸಿಕೆಯ ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕೆ ಡೋಸ್ ಎಂದು ಕರೆಯಲ್ಪಡುವ ಮೂರನೇ ಡೋಸ್ ನಡುವಿನ ಅಂತರವು ಒಂಬತ್ತರಿಂದ 12 ತಿಂಗಳವರೆಗೆ ಇರುತ್ತದೆ ಎಂದು ಭಾನುವಾರದಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿಯು ಮಾಡಿದೆ. ಪ್ರಸ್ತುತ ಭಾರತದ ಇನಾಕ್ಯುಲೇಷನ್ ಪ್ರೋಗ್ರಾಂ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನಲ್ಲಿ ಬಳಸಲಾಗುತ್ತಿರುವ ಲಸಿಕೆಗಳ ಅಂತರಗಳ ಕುರಿತು ಚರ್ಚೆ ನಡೆಸುತ್ತಿದೆ. ಈ ಬಗ್ಗೆ ಶೀಘ್ರವೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ವರದಿಯು ಉಲ್ಲೇಖ ಮಾಡಿದೆ.
ದೇಶದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್ ಏರಿಕೆ ಆಗುತ್ತಿರುವ ನಡುವೆಯೇ ಆರೋಗ್ಯ ರಕ್ಷಣೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಅನ್ನು ಹಾಕುವ ನಿರ್ಧಾರವನ್ನು ಪ್ರಧಾನಿ ಮೋದಿ ಕೈಗೊಂಡಿದ್ದಾರೆ. ಮುಂದಿನ ವರ್ಷ ಜನವರಿ 10 ರಿಂದ ವೈದ್ಯರ ಸಲಹೆಯ ಮೇರೆಗೆ 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮತ್ತು ಕೊಮೊರ್ಬಿಡಿಟಿ ಇರುವವರಿಗೆ ಮುನ್ನೆಚ್ಚರಿಕೆ ಡೋಸ್ ಲಭ್ಯವಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಏನಿದು ಮುನ್ನೆಚ್ಚರಿಕೆಯ ಡೋಸ್?
ಮುನ್ನೆಚ್ಚರಿಕೆಯ ಡೋಸ್ ಎಂಬುವುದು ಮೂರನೇ ಡೋಸ್ ಆಗಿದೆ. ಸಂಪೂರ್ಣವಾಗಿ ಲಸಿಕೆ ಹಾಕಿದವರಿಗೆ ಲಸಿಕೆಯ ಮೂರನೇ ಡೋಸ್ ಅನ್ನು ಹಾಕುವುದಕ್ಕೆ ಮುನ್ನೆಚ್ಚರಿಕೆಯ ಡೋಸ್ ಎಂದು ಕರೆಯಲಾಗುತ್ತದೆ. "ಎರಡನೆಯ ಮತ್ತು ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆಯ ಡೋಸ್ ನಡುವಿನ ಅಂತರವು ಒಂಬತ್ತರಿಂದ 12 ತಿಂಗಳುಗಳವರೆಗೆ ಇರುತ್ತದೆ. ಈ ಬಗ್ಗೆ ರೋಗನಿರೋಧಕ ವಿಭಾಗ ಮತ್ತು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಜಿಐ) ಚರ್ಚೆ ನಡೆಸುತ್ತಿದೆ," ಎಂದು ಮೂಲವೊಂದು ತಿಳಿಸಿದೆ. ಭಾರತದ ವಯಸ್ಕ ಜನಸಂಖ್ಯೆಯ ಶೇಕಡಾ 61 ಕ್ಕಿಂತ ಹೆಚ್ಚು ಜನರು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಅಂತೆಯೇ, ವಯಸ್ಕ ಜನಸಂಖ್ಯೆಯ ಸುಮಾರು 90 ಪ್ರತಿಶತದಷ್ಟು ಜನರು ಮೊದಲ ಡೋಸ್ ಅನ್ನು ಪಡೆದಿದ್ದಾರೆ. ಕಳೆದ 24 ಗಂಟೆಗಳಲ್ಲಿ 32,90,766 ಲಸಿಕೆ ಡೋಸ್‌ಗಳನ್ನು ಹಾಕಲಾಗಿದೆ. ಈ ಮೂಲಕ ದೇಶದಲ್ಲಿ ಈವರೆಗೆ ನೀಡಲಾದ ಕೋವಿಡ್ ಲಸಿಕೆ ಡೋಸ್‌ಗಳ ಸಂಖ್ಯೆಯು 141.37 ಕೋಟಿಯನ್ನು ಮೀರಿದೆ.
ಪ್ರಧಾನಿ ಮೋದಿಯ ಪ್ರಮುಖ ಘೋಷಣೆಗಳು
ಭಾರತದಲ್ಲಿ ಜನವರಿ 10ರಿಂದ ವೈದ್ಯಕೀಯ ಸಿಬ್ಬಂದಿಗೆ ಹಾಗೂ ಮೊದಲ ಶ್ರೇಣಿ ಕಾರ್ಮಿಕರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಹಾಗೆಯೇ ಭಾರತದಲ್ಲಿನ ವೈದ್ಯಕೀಯ ಸಿಬ್ಬಂದಿಗೆ ಕೊವಿಡ್-19 ಬೂಸ್ಟರ್ ಡೋಸ್ ಲಸಿಕೆಯನ್ನು ನೀಡಲು ಪ್ರಾರಂಭಿಸಲಾಗುವುದು. ಭಾರತದಲ್ಲಿ 15 ವರ್ಷದಿಂದ 18 ವರ್ಷದ ಮಕ್ಕಳಿಗೂ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗುವುದು. ಜನವರಿ 3ರಿಂದ 15 ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಕೊರೊನಾವೈರಸ್ ಲಸಿಕೆ ವಿತರಣೆಯನ್ನು ಆರಂಭಿಸಲಾಗುವುದು. ತೀವ್ರ ಅಸ್ವಸ್ಥತೆಯನ್ನು ಹೊಂದಿರುವ 60 ವರ್ಷ ಮೇಲ್ಪಟ್ಟ ವೃದ್ಧರು ವೈದ್ಯರ ಶಿಫಾರಸ್ಸಿನ ಮೇಲೆ ಕೊವಿಡ್-19 ಬೂಸ್ಟರ್ ಡೋಸ್ ಅನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ," ಎಂದು ಹೇಳಿದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications