Goldy Brar: ಸಿಧು ಮೂಸೆವಾಲಾ ಕೊಲೆ ಆರೋಪಿ ಗೋಲ್ಡಿ ಬ್ರಾರ್ ಹತ್ಯೆ?
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಶಂಕಿತ ಗೋಲ್ಡಿ ಬ್ರಾರ್‌ನನ್ನು ಯುಎಸ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ನ್ಯೂಸ್ 18 ವರದಿ ಪ್ರಕಾರ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಶಂಕಿತ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಹೇಳಿದೆ.

ಅಮೇರಿಕನ್ ಸುದ್ದಿ ವಾಹಿನಿಯ ವರದಿಗಳ ಪ್ರಕಾರ, ಈ ಘಟನೆಯು ಮಂಗಳವಾರ ಸಂಜೆ 5:25 ಕ್ಕೆ ಸ್ಥಳೀಯ ಸಮಯ ಫೇರ್ಮಾಂಟ್ ಮತ್ತು ಹಾಲ್ಟ್ ಅವೆನ್ಯೂದಲ್ಲಿ ಸಂಭವಿಸಿದೆ ಎನ್ನಲಾಗಿದೆ. ಗೋಲ್ಡಿ ಬ್ರಾರ್ ಅವರು ಸಹಚರರೊಂದಿಗೆ ತಮ್ಮ ನಿವಾಸದ ಹೊರಗೆ ನಿಂತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಆಗಮಿಸಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಒಬ್ಬರು ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿರೋಧಿಗಳಿಂದ ಕೃತ್ಯ
ಗೋಲ್ಡಿ ಬ್ರಾರ್ ಗುಂಪಿನ ಎದುರಾಳಿಗಳಾದ ಅರ್ಶ್ ದಲ್ಲಾ ಮತ್ತು ಲಕ್ಭಿರ್ ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ. ಹಳೇ ದ್ವೇಷದ ಕಾರಣದಿಂದ ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಅಥವಾ ಇತರ ಯಾವುದೇ ಗ್ಯಾಂಗ್‌ಸ್ಟರ್ ಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಯಾರು ಈ ಗೋಲ್ಡಿ ಬ್ರಾರ್?
ಗೋಲ್ಡಿ ಬ್ರಾರ್, 1994 ರಲ್ಲಿ ಪಂಜಾಬ್‌ನ ಮುಕ್ತಸರ್ ಸಾಹಿಬ್‌ನಲ್ಲಿ ಜನಿಸಿದರು, ಪೊಲೀಸ್ ಹಿನ್ನೆಲೆಯ ಕುಟುಂಬದಿಂದ ಬಂದವನಾಗಿದ್ದಾನೆ. ಉತ್ತಮ ಮನೆತನದಲ್ಲಿ ಹುಟ್ಟಿದರೂ ಗೋಲ್ಡಿ ಬ್ರಾರ್ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಕಾನೂನು ವಿರೋಧಿ ಮಾರ್ಗವನ್ನು. ಸತ್ವಿಂದರ್ಜಿತ್ ಸಿಂಗ್ ಎಂದೂ ಕರೆಯಲಾಗುತ್ತಿದ್ದ ಗೋಲ್ಡಿ ಬ್ರಾರ್ ಬಿಎ ಪಧವೀಧರರಾಗಿದ್ದು, ಕೆನಡಾದಲ್ಲಿ ವಾಸ ಮಾಡುತ್ತಿದ್ದರು. ಅಲ್ಲಿಂದಲೇ ಪಂಜಾಬ್‌ನಲ್ಲಿ ತಮ್ಮ ವ್ಯವಹಾರಗಳನ್ನು ನಿಯಂತ್ರಿಸುತ್ತಿದ್ದ.
ಗೋಲ್ಡಿ ಬ್ರಾರ್ ಅವರ ಸೋದರ ಸಂಬಂಧಿ ಗುರ್ಲಾಲ್ ಬ್ರಾರ್ ಅವರನ್ನು ಕಳೆದ ವರ್ಷ ಚಂಡೀಗಢದ ನೈಟ್‌ಕ್ಲಬ್‌ನ ಹೊರಗೆ ಹತ್ಯೆ ಮಾಡಲಾಗಿತ್ತು. ಯುವ ಕಾಂಗ್ರೆಸ್ ನಾಯಕ ಗುರ್ಲಾಲ್ ಪಹಲ್ವಾನ್ ಹತ್ಯೆಗೆ ಪ್ರತೀಕಾರವಾಗಿ ಬಿಷ್ಣೋಯ್ ಅವರ ಆಪ್ತ ಸಹಾಯಕ ಗುರ್ಲಾಲ್ ಅವರನ್ನು ಬಿಷ್ಣೋಯ್ ಗ್ಯಾಂಗ್ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಲಾಗಿತ್ತು. ಈ ಘಟನೆಗಳ ನಂತರ ಗೋಲ್ಡಿ 2021 ರಲ್ಲಿ ಕೆನಡಾಕ್ಕೆ ಓಡಿಹೋದ ಎಂದು ವರದಿಯಾಗಿದೆ. 2017 ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಹೋಗಿದ್ದ.
ಗೋಲ್ಡಿ ಬ್ರಾರ್ ಸಾವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ, ಸದ್ಯಕ್ಕೆ ಅಲ್ಲಿನ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಭಾರತೀಯ ಮಾಧ್ಯಮಗಳು ವರದಿ ಮಾಡಿವೆ.












Click it and Unblock the Notifications