ಹಾರ್ದಿಕ್ ಪಟೇಲ್ ವಿರುದ್ಧ ಕೇಸು ದಾಖಲಿಸಿದ ಪೊಲೀಸರು
ಗಾಂಧಿನಗರ, ಡಿಸೆಂಬರ್ 01: ಅನುಮತಿ ಪಡೆಯದೆ ಚುನಾವಣಾ ಪ್ರಚಾರ ಸಮಾವೇಶ ನಡೆಸಿದ್ದಕ್ಕಾಗಿ ಪಾಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ವಿರುದ್ಧ ಗಾಂಧಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನ್ಸಾದಲ್ಲಿ ಆಯೋಜಿಸಿದ್ದ ಚುನಾವಣಾ ಸಮಾವೇಶದಿಂದ ಶಾಂತಿ ಭಂಗವಾಗಿದೆ, ಕಾನೂನು ಉಲ್ಲಂಘನೆಯಾಗಿದೆ ಎಂದು ಹಾರ್ದಿಕ್ ಹಾಗೂ ಆರು ಮಂದಿಯ ವಿರುದ್ಧ ಗಾಂಧಿನಗರ ಪೊಲೀಸರು ದೂರು ದಾಖಲಿಸಲಾಗಿದೆ.

ಹಾರ್ದಿಕ್ ಹೊರತಾಗಿ ಸಮಾವೇಶವನ್ನು ಸಂಘಟಿಸಿದ್ದ ಉಮಿಯಾ ಡೆಕೊರೇಟರ್ಸ್ ಮಾಲಕ ಧರ್ಮೇಶ್ ಪಟೇಲ್ ವಿರುದ್ಧ ಐಪಿಸಿ ಸೆಕ್ಷನ್ 188 ಅನ್ವಯ ಪ್ರಕರಣ ದಾಖಲಾಗಿದೆ. ಕಾನೂನು ಉಲ್ಲಂಘಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಾಂಧಿನಗರ ಎಸ್‍ಪಿ ವೀರೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ.
ಕಳೆದೆರಡು ವರ್ಷಗಳಿಂದ ಹಾರ್ದಿಕ್ ಪಟೇಲ್ ಅವರು ರಾಜ್ಯಾದ್ಯಂತ ಹಲವಾರು ಪ್ರತಿಭಟನಾ ಜಾಥಗಳನ್ನು ಆಯೋಜಿಸುತ್ತಿದ್ದಾರೆ. ಸರಕಾರದ ಅಥವಾ ಸ್ಥಳೀಯಾಡಳಿತಗಳ ಅನುಮತಿ ಪಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹುಟ್ಟೂರು ಮನ್ಸಾದಲ್ಲಿ ಬಿಜೆಪಿಯನ್ನು ನಡುಗಿಸುವಂಥ ಮಾಹಿತಿ ಬಹಿರಂಗ ಪಡಿಸುವುದಾಗಿ ಘೋಷಿಸಿದ್ದ ಹಾರ್ದಿಕ್ ಅವರು ಏನೂ ಹೇಳಿರಲಿಲ್ಲ.












Click it and Unblock the Notifications