ಕಣ್ಣೀರು ಮರೆಮಾಚಿ ಸೇನಾ ಸಮವಸ್ತ್ರ ಧರಿಸಿದ ದಿಟ್ಟ ಮಹಿಳೆ ಯಶ್ವಿನಿ ಢಾಕಾ
ತನ್ನ ತಂದೆ 26 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಕಂಡ ಆಕೆಗೆ ಕಡು ಹಸಿರು ಬಣ್ಣದ ಸಮವಸ್ತ್ರ ಎಂದರೆ ಎಲ್ಲಿಲ್ಲದ ಪ್ರೀತಿ. ತಂದೆ ನಯಬ್ ಸುಬೇದಾರ್ ಹುದ್ದೆಯಿಂದ ನಿವೃತ್ತರಾದ ನಂತರ, ಐಟಿಯಲ್ಲಿ ಎಂ ಟೆಕ್ ಪದವಿ ಪಡೆದು ಮೀರತ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರಾಗಿದ್ದವರು. ಎಲ್ಲವೂ ಸರಿಯಾಗಿ ಸಾಗುತ್ತಿದೆ ಅಂದುಕೊಳ್ಳುವಾಗಲೇ ಜೀವನಕ್ಕೆ ಬರಸಿಡಿಲು ಹೊಡೆದದ್ದು. ತನ್ನ ಸರ್ವಸ್ವವೇ ಆಗಿದ್ದ ಪತಿ ಹೆಲಿಕ್ಯಾಪ್ಟರ್ ದುರಂತದಲ್ಲಿ ಹುತಾತ್ಮರಾಗುತ್ತಾರೆ. ಬದುಕಿನಲ್ಲಿ ಒಮ್ಮೆಲೇ ಕತ್ತಲು ಆವರಿಸಿ ಬಿಡುತ್ತದೆ. ಆದರೆ ಎಲ್ಲಾ ಕಷ್ಟ ಕೋಟಲೆಗಳನ್ನು ಮೀರಿ ತನ್ನ ಭಾವನೆಗಳನ್ನು ಅದುಮಿಟ್ಟುಕೊಂಡು ತನ್ನ ತಂದೆ ಮತ್ತು ಪತಿಯ ಹಾದಿಯಲ್ಲಿ ಮುಂದುವರೆದು ಇದೀಗ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿರುವ ದಿಟ್ಟ ಮಹಿಳೆ ಇವರು.
ನಾವಿಲ್ಲಿ ಹೇಳುತ್ತಿರುವುದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ತಮ್ಮ ಪತಿಯನ್ನೂ ಕಳೆದುಕೊಂಡು ನಂತರ ಭಾರತೀಯ ಸೇನೆಗೆ ಸೇರಿದ ಯಶ್ವಿನಿ ಢಾಕಾ ಬಗ್ಗೆ.

ಪತಿಯನ್ನು ಕಳೆದುಕೊಂಡ ನೋವು:
2017 ರಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಆಗಿದ್ದ ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್ ಅವರನ್ನು ವಿವಾಹವಾದಾಗಿನಿಂದ ಸಶಸ್ತ್ರ ಪಡೆಗಳೊಂದಿಗಿನ ಯಶ್ವಿನಿ ಸಂಬಂಧ ಮುಂದುವರೆಯಿತು. ಆದರೆ ಡಿಸೆಂಬರ್ 8, 2021 ರಂದು ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್ ಅವರು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು, ಆಗಿನ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲರೂ ಹುತಾತ್ಮರಾದರು.
ನೋವು ಸಣ್ಣದಾಗಿರಲಿಲ್ಲ ಆದರೂ ಹಿಮ್ಮೆಟ್ಟಲಿಲ್ಲ:
ಇದಾದ ನಂತರ ಸಶಸ್ತ್ರ ಪಡೆಗಳ ಭ್ರಾತೃತ್ವದ ಬೆಂಬಲದೊಂದಿಗೆ, ಅವರು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ (OTA) ಶಾರ್ಟ್ ಸರ್ವಿಸ್ ಕಮಿಷನ್ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದರು. ಇಲ್ಲಿಂದ ಯಶ್ವಿನಿಯಿಂದ ಅಧಿಕಾರಿ ಕೆಡೆಟ್ ಯಶ್ವಿನಿ ಢಾಕಾವರೆಗಿನ ಅವರ ಪ್ರಯಾಣ ಆರಂಭವಾಯಿತು. 'ವೀರ್ ನಾರಿ' ಆಗಿ, ಅವರು ತಮ್ಮ ಬ್ಯಾಚ್‌ಮೇಟ್‌ಗಳಿಗಿಂತ ವಯಸ್ಸಿನಲ್ಲಿ ಹಿರಿಯವರಾಗಿದ್ದು, ಹೊಸ ಜೀವನಶೈಲಿ ಮತ್ತು ಕಠಿಣ ದೈಹಿಕ ತರಬೇತಿಗೆ ಹೊಂದಿಕೊಳ್ಳುವುದು ಸೇರಿದಂತೆ ವಿಶಿಷ್ಟ ಸವಾಲುಗಳನ್ನು ಎದುರಿಸಿದರು.
ಸವಾಲುಗಳನ್ನು ಎದುರಿಸಿ ಗೆದ್ದ ವೀರ್ ನಾರಿ:
ನೋಡ ನೋಡುತ್ತಿದ್ದ ಹಾಗೆ ಯಶ್ವಿನಿ ತನ್ನನ್ನು ತಾನು ಪರಿವರ್ತಿಸಿಕೊಂಡರು. ದುಸ್ತರವೆಂದು ತೋರುವ ಸವಾಲುಗಳನ್ನು ಎದುರಿಸಿ ಜಯಿಸಿದರು. ತನ್ನ ಈ ಕಾರ್ಯವನ್ನು ತನ್ನ ಪ್ರೀತಿಯ ಪತಿ ಮೇಲಿನಿಂದಲೇ ನೋಡಿ ತನ್ನನ್ನು ಹರಸುತ್ತಿರುತ್ತಾನೆ ಎನ್ನುವ ನಂಬಿಕೆಯಿಂದ ಹೆಜ್ಜೆ ಇಟ್ಟವರು ಯಶ್ವಿನಿ.
ಸೇನೆಗೆ ಸೇರುವ ಮೊದಲು, ಅವರು ಮೀರತ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರಾಗಿದ್ದರು. ಐಟಿಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದರು. ಡಿಸೆಂಬರ್ 2021 ರಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಅವರ ಪತಿ, ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್ ದುರಂತವಾಗಿ ಸಾವನ್ನಪ್ಪಿದಾಗ ಯಶ್ವಿನಿ ಜೀವನದ ದಿಕ್ಕೇ ಬದಲಾಯಿತು.
ತನ್ನ ದುಃಖವನ್ನು ನುಂಗಿಕೊಂಡು 26 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಿಕೊಂಡು ತನ್ನ ದಿವಂಗತ ಪತಿಯ ಪರಂಪರೆಯನ್ನು ಗೌರವಿಸಲು ನಿರ್ಧರಿಸಿದರು. ಒಟಿಎ (ಚೆನ್ನೈ)ಯಲ್ಲಿ ಶಾರ್ಟ್ ಸರ್ವೀಸಸ್ ಕಮಿಷನ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದರು. ಸೇವಾ ಆಯ್ಕೆ ಮಂಡಳಿ (SSB) ಸಂದರ್ಶನದಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದರು. ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಯಲ್ಲಿ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿ ಲೆಫ್ಟಿನೆಂಟ್ ಆಗಿ ಪದವಿ ಪಡೆದರು.
ಇವರ ಕಥೆ ನಮ್ಮ ದೇಶದ ಪ್ರತಿಯೊಬ್ಬರಿಗೂ ಒಂದು ಪ್ರಬಲ ಸಂದೇಶವಾಗಿದೆ.














Click it and Unblock the Notifications