ಸ್ವತಂತ್ರ ಹಕ್ಕಿಯಾದ ಜಗನ್: ಚುನಾವಣೆ ಪರಿಣಾಮವೇನು?
ಹೈದರಾಬಾದ್, ಸೆ.25: ಅಂತೂ ಕಡಪ ಸಂಸದ ಜಗನ್ ಮೋಹನ್ ರೆಡ್ಡಿ ಸ್ವತಂತ್ರ ಹಕ್ಕಿಯಾಗಿದ್ದಾರೆ. ಸದ್ಯಕ್ಕೆ ಜಗನ್ ಸೋದರಿ ಶರ್ಮಿಳಾರ ಹೇಳಿಕೆಯನ್ನು ಗಮನಿಸಿದರೆ ಜಗನ್ ಬಿಡುಗಡೆ ಸೋನಿಯಾ ಎಫೆಕ್ಟ್ ಅಲ್ಲ ಅನ್ನಿಸುತ್ತಿದೆ. ಆದರೂ ಚುನಾವಣೆ ವೇಳೆಗೆ ಏನು ಬೇಕಾದರೂ ಆಗಬಹುದು.
ಏಕೆಂದರೆ ರಾಜಕೀಯವಾಗಿ, ಭೌಗೋಳಿಕವಾಗಿ ಈಗ ಆಂಧ್ರ ಪ್ರದೇಶ ಛಿದ್ರವಾಗಿರುವ ರಾಜ್ಯವಾಗಿದೆ. ದಿನಕ್ಕೊಂದು ತಿರುವುಗಳು ಪಡೆದುಕೊಳ್ಳುತ್ತಿದೆ. ಒಂದೆಡೆ ಸೋನಿಯಾ ಗಾಂಧಿ, ನಟ/ ಸಚಿವ ಚಿರಂಜೀವಿ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಟಿಆರ್ ಎಸ್ ಪಕ್ಷದ ಕೆ ಚಂದ್ರಶೇಖರ ರಾವ್ ಜತೆ 'ಕೈ'ಜೋಡಿಸುವುದು ಎಷ್ಟರಮಟ್ಟಿಗೆ ಪ್ರಯೋಜನಕಾರಿಯಾದೀತು ಎಂಬುದು ಸೋನಿಯಾ ಗಾಂಧಿಗೆ ಈ ಕ್ಷಣದ ವರೆಗೂ ಯಾರೂ ಬಿಡಿಸಿ ಹೇಳಿಲ್ಲ.

ಈ ಮಧ್ಯೆ ಸ್ವತಂತ್ರ ಜಗನ್ ಚುನಾವಣೆಯ ಮೇಲೆ ಸದ್ಯಕ್ಕೆ ಯಾವ ಪರಿಣಾಮ ಬೀರಬಹುದು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಒಂದು ಆಂಧ್ರ ರೌಂಡ್ ಹೊಡೆದಾಗ ಹಲವು ಕುತೂಹಲಕಾರಿ ಅಂಶಗಳು ಗೋಚರಿಸುತ್ತವೆ.
ಇದೊಂದು ರೀತಿಯ ಓದಾರ್ಪು ಯಾತ್ರೆ:
YSR Congress ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಒಟ್ಟಿಗೆ ನಡೆಯುವ ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟು, ತಮ್ಮ ಟ್ರೇಡ್ ಮಾರ್ಕ್ ಯಾತ್ರೆಯನ್ನು ಪುನರಾರಂಭಿಸಲು ಸಿದ್ಧತೆ ನಡೆಸಿದ್ದಾರೆ.
ಮೊಟ್ಟಮೊದಲಿಗೆ ತಮ್ಮ ಅಧಿಪತ್ಯದ ಸೀಮಾಂಧ್ರ ಭಾಗವನ್ನು ಕೇಂದ್ರೀಕರಿಸಿಕೊಂಡು ಜಗನ್ ರಾಜಕೀಯ ಯಾತ್ರೆ ಆರಂಭಿಸುತ್ತಿದ್ದಾರೆ. ಅಲ್ಲಿಂದ ಮುಂದಕ್ಕೆ ಕೋರ್ಟ್ ಪರ್ಮಿಶನ್ ತೆಗೆದುಕೊಂಡು ರಾಜಕೀಯ ಸೂಕ್ಷ್ಮತೆ ಹೊಂದಿರುವ ತೆಲಂಗಾಣ ಭಾಗದತ್ತ ಪಯಣ ಬೆಳೆಸಲಿದ್ದಾರೆ. ಆಂಧ್ರವನ್ನು ಇಬ್ಭಾಗ ಮಾಡಬಾರದು ಎಂಬುದು YSR Congress ಪಕ್ಷದ ನಿಲುವು.
ಮಹಾ ಸಮರಕ್ಕೆ ಇನ್ನು ಎಂಟೇ ತಿಂಗಳಿದ್ದು ಜಗನ್ ಒಂದು ಕ್ಷಣವೂ ವಿಶ್ರಮಿಸಲು ಸಿದ್ಧರಿಲ್ಲ ಎಂಬುದು ಸರ್ವವಿಧಿತ. ಹಾಗಿರುವಾಗ ಜಗನ್ ರಾಜಕೀಯ ನಡೆ ಅತ್ಯಂತ ಪ್ರಮಾಣಬದ್ಧವಾಗಿರಬೇಕಾಗುತ್ತದೆ. ಈಗಾಗಲೇ ಪ್ರತ್ಯೇಕ ತೆಲಂಗಾಣ ಬೇಡ ಎನ್ನುವ ಮೂಲಕ ತೆಲಂಗಾಣ ಭಾಗದಲ್ಲಿ YSR ಪಕ್ಷ ಹಿನ್ನಡೆ ಅನುಭವಿಸಿದೆ. ಅಸಲಿಗೆ ಜಗನ್ ಪಕ್ಷವನ್ನು ರಾಜಕೀಯವಾಗಿ ಮುಗಿಸಬೇಕೆಂದೇ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷವು ತೆಲಂಗಾಣವನ್ನು ಪ್ರತ್ಯೇಕಗೊಳಿಸಿದ್ದು.
ಆದರೂ ತೆಲಂಗಾಣ ಕೈಬಿಟ್ಟು ಸೀಮಾಂಧ್ರ ಐಕ್ಯತೆಗೆ ಓಗೊಟ್ಟ ಜಗನ್ ಬಗ್ಗೆ ತೆಲಂಗಾಣದಲ್ಲಿಯೂ ಅನುಕಂಪದ ಅಲೆಯಿದೆ ಎನ್ನಲಾಗಿದೆ. ಈ ಮಧ್ಯೆ, ಚುನಾವಣೆ ವೇಳೆಗೆ ಆಂಧ್ರ ಇಬ್ಭಾಗವಾಗುವುದು ದೂರದ ಮಾತು. ಹಾಗಾಗಿ, ಜಗನ್ ಪಕ್ಷವು 294 ವಿಧಾನಸಭಾ ಸ್ಥಾನಗಳ ಪೈಕಿ 150 ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಆದರೆ ತೆಲಂಗಾಣದ ಬಿಸಿಗಾಳಿಯಲ್ಲಿ ಮತ್ತು ತೆಲುಗು ದೇಶಂ ಪಕ್ಷದ ಬಿರುಗಾಳಿಯ ಮಧ್ಯೆ YSR ಪಕ್ಷ ಅಬ್ಬಬ್ಬಾ ಅಂದರೆ 80-90ರ ಗಡಿಯಲ್ಲಿ ನಿಂತುಬಿಡುವ ಲಕ್ಷಣಗಳಿವೆ.












Click it and Unblock the Notifications