Sharad Yadav: ಮಾಜಿ ಕೇಂದ್ರ ಸಚಿವ ಶರದ್ ಯಾದವ್ (75) ನಿಧನ
ನವದೆಹಲಿ, ಜ. 12: ಮಾಜಿ ಕೇಂದ್ರ ಸಚಿವ ಮತ್ತು ಆರ್‌ಜೆಡಿ ನಾಯಕ ಶರದ್ ಯಾದವ್ ಅವರು ಜನವರಿ 12 ರಂದು ಗುರುವಾರ ತಮ್ಮ 75 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಟ್ವಿಟರ್‌ನಲ್ಲಿ "ಪಾಪಾ ನಹೀ ರಹೇ (ಪಾಪಾ ಇನ್ನಿಲ್ಲ)" ಎಂದು ಸುದ್ದಿಯನ್ನು ಖಚಿತಪಡಿಸಿದ್ದಾರೆ.
पापा नहीं रहे 😭
— Subhashini Sharad Yadav (@Subhashini_12b) January 12, 2023
ಮಾಜಿ ಸಚಿವ ಶರದ್ ಯಾದವ್ ಆರೋಗ್ಯ ಹದಗೆಟ್ಟಿದ್ದ ಕಾರಣ ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶರದ್ ಯಾದವ್ ಅವರನ್ನು "ಪ್ರಜ್ಞಾಹೀನ ಮತ್ತು ಸ್ಪಂದನೆಯಿಲ್ಲ ಸ್ಥಿತಿಯಲ್ಲಿ" ತುರ್ತು ವಿಭಾಗಕ್ಕೆ ಕರೆತರಲಾಯಿತು. ಈ ವೇಳೆ ಅವರಿಗೆ ಯಾವುದೇ ನಾಡಿಮಿಡಿತ ಅಥವಾ ರೆಕಾರ್ಡ್ ಮಾಡಬಹುದಾದ ರಕ್ತದೊತ್ತಡ ಇರಲಿಲ್ಲ. ಉತ್ತಮ ವೈದ್ಯರ ಪ್ರಯತ್ನಗಳಿಂದಲೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ರಾತ್ರಿ 10:19 ಕ್ಕೆ ಅವರು ನಿಧನರಾದರು ಎಂದು ಆಸ್ಪತ್ರೆ ಹೇಳಿಕೆ ನೀಡಿದೆ.
ಶರದ್ ಯಾದವ್ ಅವರು 1999 ಮತ್ತು 2004 ರ ನಡುವೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ಹೊಂದಿದ್ದರು. 2003 ರಲ್ಲಿ, ಯಾದವ್ ಅವರು ನಿತೀಶ್ ಕುಮಾರ್ ಅವರನ್ನು ಒಳಗೊಂಡಿರುವ ಜನತಾ ದಳ ಯುನೈಟೆಡ್ (ಜೆಡಿಯು) ನ ಅಧ್ಯಕ್ಷರಾದರು. 2004ರ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ನಿತೀಶ್ ಕುಮಾರ್ ಅವರಿಗೆ ರಾಜ್ಯಸಭಾ ಸ್ಥಾನ ಪಡೆಯಲು ನೆರವಾದರು.
2009 ರಲ್ಲಿ, ಶರದ್ ಯಾದವ್ ಮತ್ತೆ ಮಾಧೇಪುರದಿಂದ ಲೋಕಸಭೆಗೆ ಆಯ್ಕೆಯಾದರು. ಆದರೆ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಯು ಸೋಲಿನ ನಂತರ, ನಿತೀಶ್ ಕುಮಾರ್ ಅವರೊಂದಿಗಿನ ಯಾದವ್ ಅವರ ಸಂಬಂಧವು ಹದಗೆಟ್ಟಿತು.
ಬಿಹಾರದ ಆಡಳಿತಾರೂಢ ಜನತಾದಳ ಯುನೈಟೆಡ್‌ನ ಸ್ಥಾಪಕ ಮತ್ತು ಸದಸ್ಯರಾಗಿದ್ದ ಇವರು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಮೈತ್ರಿಕೂಟದ ಜೊತೆಗೆ ಮೈತ್ರಿ ಮುರಿದು ಬಿಜೆಪಿಯೊಂದಿಗೆ ಕೈಜೋಡಿಸಿದ ನಂತರ ಪಕ್ಷವನ್ನು ತ್ಯಜಿಸಿದರು.
2018 ರಲ್ಲಿ, ಅವರು ತಮ್ಮ ಸ್ವಂತ ಪಕ್ಷವಾದ ಲೋಕತಾಂತ್ರಿಕ್ ಜನತಾ ದಳವನ್ನು ಪ್ರಾರಂಭಿಸಿದರು, ಆದರೆ ಎರಡು ವರ್ಷಗಳ ನಂತರ ಅದನ್ನು ಲಾಲು ಯಾದವ್ ಅವರ ರಾಷ್ಟ್ರೀಯ ಜನತಾ ದಳದೊಂದಿಗೆ ವಿಲೀನಗೊಳಿಸಿದರು.
ಶರದ್ ಯಾವದ್ ನಿಧನಕ್ಕೆ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸಂತಾಪ ವ್ಯಕ್ತಪಡಿಸಿದ್ದಾರೆ.
"ಆರ್‌ಜೆಡಿಯ ಹಿರಿಯ ನಾಯಕ, ಮಹಾನ್ ಸಮಾಜವಾದಿ ನಾಯಕ ಮತ್ತು ನನ್ನ ಆಪ್ತರಾದ ಶರದ್ ಯಾದವ್ ಜಿ ಅವರ ಅಕಾಲಿಕ ನಿಧನದ ಸುದ್ದಿಯಿಂದ ದುಃಖಿತನಾಗಿದ್ದೇನೆ. ನನಗೆ ಏನೂ ಮಾತಾಡಲು ಸಾಧ್ಯವಾಗುತ್ತಿಲ್ಲ. ತಾಯಿ ಮತ್ತು ಸಹೋದರ ಶಾಂತನು ಅವರೊಂದಿಗೆ ಮಾತನಾಡಿದ್ದೇನೆ. ಈ ಸಮಯದಲ್ಲಿ ಇಡೀ ಸಮಾಜವಾದಿ ಕುಟುಂಬವೇ ದುಖಿಃತ ಕುಟುಂಬದೊಂದಿಗಿದೆ" ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications