ಪಹಲ್ಗಾಮ್ ದಾಳಿಯಲ್ಲಿ ಪಾಕ್ ಪಾತ್ರಕ್ಕೆ ಸಾಕ್ಷ್ಯ ಕೇಳಿದ ಮಾಜಿ ಕ್ರಿಕೆಟಿಗ
ಶ್ರೀನಗರ ಏಪ್ರಿಲ್ 27: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 25 ಜನ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿ ದರ್ಪ ತೋರಿದ್ದಾರೆ. ಈ ಸೊಕ್ಕನ್ನು ಅಡಗಿಸಲು ಭಾರತೀಯ ಸೇನೆ ಮುಂದಾಗಿರುವ ಹೊತ್ತಲ್ಲಿ ಮಾಜಿ ಕ್ರಿಕೆಟಿಗನೊಬ್ಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಹಲ್ಗಾಮ್ ದಾಳಿ ಹಿಂದೆ ಯಾರ ಕೈವಾಡವಿದೆ ಅನ್ನೋದು ಇಡೀ ಜಗತ್ತಿಗೆ ಗೊತ್ತು. ಆದರೆ ಈ ರಾಷ್ಟ್ರದ ಮಾಜಿ ಕ್ರಿಕೆಟಿಗ ಇದಕ್ಕೆ ಸಾಕ್ಷಿ ಕೇಳುತ್ತಿದ್ದಾರೆ. ಹೌದು ಪಾಕಿಸ್ತಾನ ಪಹಲ್ಗಾಮ್ ದಾಳಿ ಹಿಂದಿದೆ ಎನ್ನುವುದಕ್ಕೆ ಸಾಕ್ಷಿ ಕೊಡಿ ಎಂದು ಮಾಜಿ ಕ್ರಿಕೆಟಿಗ ಪ್ರಶ್ನೆ ಮಾಡಿದ್ದಾರೆ.

ಈ ಸಾಕ್ಷಿಯನ್ನು ಪಾಕ್‌ನ ಪ್ರಧಾನಿ ಕೇಳಿಲ್ಲ. ಬದಲಿಗೆ ಪಾಕ್ ಮಾಜಿ ಕ್ರಿಕೆಟಿಗ ಶಹೀದ್ ಆಫ್ರಿದಿ ಕೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. 'ಪಹಲ್ಗಾಮ್ ದಾಳಿ ಹಿಂದೆ ಪಾಕ್ ಪಾತ್ರದ ಬಗ್ಗೆ ಮೊದಲು ಸಾಕ್ಷಿ ಕೊಡಿ. ಎಲ್ಲದಕ್ಕೂ ಪಾಕಿಸ್ತಾನವೇ ಕಾರಣವಲ್ಲ. ಪಾಕಿಸ್ತಾನ ವಿರುದ್ಧದ ಆರೋಪ ನಿರಾಧಾರವಾಗಿದೆ' ಎಂದಿದ್ದಾರೆ.
'ಜೊತೆಗೆ ಅಮಾಯಕರ ಸಾವಿಗೆ ನನ್ನ ನೋವಿದೆ. ನಮ್ಮಲ್ಲೂ ಈ ರೀತಿಯ ಸಾವು-ನೋವುಗಳು ಆಗುತ್ತಿರುತ್ತವೆ. ಇದನ್ನೆಲ್ಲಾ ತಪ್ಪಿಸಲು ಮಾತುಕತೆಯೊಂದೇ ಪರಿಹಾರ' ಎಂದು ಶಹೀದ್ ಆಫ್ರಿದಿ ಹೇಳಿದ್ದಾರೆ.
ಚಿಟ್ ಚಾಟ್‌ವೊಂದರಲ್ಲಿ ಶಾಹಿದ್ ಆಫ್ರಿದಿ ಅವರಿಗೆ ಪಹಲ್ಗಾಮ್ ದಾಳಿ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಆಗ ಪ್ರತಿಕ್ರಿಯೆ ನೀಡಿದ ಆಫ್ರಿದಿ, 'ನಾನೊಬ್ಬ ಕ್ರಿಕೆಟಿಗ. ಕ್ರೀಡಾ ರಾಜತಾಂತ್ರಿಕತೆಯಲ್ಲಿ ನಂಬಿಕೆ ಇದೆ. ಇದರಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ನೆರೆಯ ರಾಷ್ಟ್ರದವರು ಪರಸ್ಪರ ಕಾಳಜಿ ವಹಿಸಬೇಕು. ಆದರೆ ಈ ಘಟನೆ ನಡೆದಿದೆ. ನೀವು ನೇರವಾಗಿ ಪಾಕಿಸ್ತಾನ ಹೆಸರನ್ನು ತೆಗೆದುಕೊಂಡಿದ್ದೀರಿ. ಪಾಕಿಸ್ತಾನ ಇದರಲ್ಲಿ ಭಾಗಿಯಾಗಿದೆ ಎನ್ನುವುದಕ್ಕೆ ಕನಿಷ್ಠ ಪುರಾವೆಗಳನ್ನು ಕೊಡಿ. ಅದನ್ನು ಜಗತ್ತಿನ ಮುಂದಿಡಿ. ಪುರಾವೆಗಳಿಲ್ಲದೆ ಪಾಕಿಸ್ತಾನವನ್ನು ದೂರಬೇಡಿ' ಎಂದು ಶಾಹಿದ್ ಆಫ್ರಿದಿ ಹೇಳಿದ್ದಾರೆ.
ಪಾಕಿಸ್ತಾನದಲ್ಲೂ ಇಂಥಹ ಘಟನೆಗಳು ನಡೆಯುತ್ತವೆ. ಭಯೋತ್ಪಾದಕರು ಯಾವುದೇ ಧರ್ಮದವರನ್ನು ಬೆಂಬಲಿಸುವುದಿಲ್ಲ. ಇದನ್ನು ತಡೆಹಿಡಿಯಲು ಎರಡೂ ದೇಶಗಳ ಸಂಬಂಧಗಳು ಸುಧಾರಿಸಬೇಕು ಎಂದು ಆಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ನಂತರ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಪ್ರತಿಕಾರ ತೀರಿಸಿಕೊಳ್ಳಲೇಬೇಕು ಎಂದು ಭಾರತೀಯ ನಾಗರೀಕರು ಸೇನೇ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯ ಹೇರುತ್ತಿದ್ದಾರೆ. ಜೊತೆಗೆ ಭಾರತ ಮತ್ತು ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯಕ್ಕೆ ಬ್ರೇಕ್ ಹಾಕಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ.
ಇನ್ನೂ ಈ ಘಟನೆಯ ಬಳಿಕ ಸಿಂಧೂ ನದಿ ಜಲ ಒಪ್ಪಂದವನ್ನು ಕೊನೆಗೊಳಿಸಲಾಗಿದೆ. ಅಲ್ಲದೆ ಭಾರತ ಪಾಕಿಸ್ತಾನದೊಂದಿಗಿನ ಗಡಿಯನ್ನು ಮುಚ್ಚಲಾಗಿದೆ. ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ನಾಗರಿಕರನ್ನು ವಾಪಸ್ ಕಳುಹಿಸಲಾಗಿದ್ದು ಪಾಕಿಸ್ತಾನ ರಾಜತಾಂತ್ರಿಕ ವೀಸಾಗಳನ್ನು ಸಹ ರದ್ದುಗೊಳಿಸಲಾಗಿದೆ.
ಪ್ರವಾಸಿಗರನ್ನು ಕೊಂದ ಉಗ್ರರನ್ನು ಸದೆಬಡಿಯಲು ಭಾರತೀಯ ಸೇನೆ ಯೋಚನೆ ರೂಪಿಸುತ್ತಿದೆ. ಕಳೆದ ಬಾರಿ ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿತ್ತು. ಉಗ್ರರನ್ನು ಸದೆ ಬಡೆದು ಪ್ರತಿಕಾರ ತೀರಿಸಿಕೊಂಡಿತ್ತು. ಇದೀಗ ಅದೇ ರೀತಿ ಭಾರತ ಉಗ್ರರನ್ನು ಸದೆಬಡೆಯಬೇಕು ಎನ್ನುವ ಒತ್ತಾಯ ಹೆಚ್ಚಾಗಿದೆ. ಒಟ್ಟಿನಲ್ಲಿ ಭಾರತದ ಅಪಾಯಕ ಪ್ರವಾಸಿಗರನ್ನು ಬಲಿ ಪಡೆದ ಭಯೋತ್ಪಾದಕರಿಗೆ ಕೇಂದ್ರ ಸರ್ಕಾರ ತಕ್ಕ ಉತ್ತರ ಕೊಡುವುದಂತೂ ಗ್ಯಾರಂಟಿ ಎನ್ನಲಾಗುತ್ತಿದೆ.












Click it and Unblock the Notifications