20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: 4ನೇ ಕಂತಿನ ಪ್ರಮುಖ ಘೋಷಣೆಗಳು
ನವದೆಹಲಿ, ಮೇ 13: ಕೋವಿಡ್-19 ವಿರುದ್ಧ ಹೋರಾಟ ನಡೆಸಲು 'ಆತ್ಮ ನಿರ್ಭರ್ ಭಾರತ' ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯರಿಗೆ 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದರು.
ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಮೊದಲ ಭಾಗದಲ್ಲಿ ಎಂ.ಎಸ್.ಎಂ.ಇ, ಇ.ಪಿ.ಎಫ್, ಎನ್.ಬಿ.ಎಫ್.ಸಿ, ಎಚ್.ಎಫ್.ಸಿ, ಎಂ.ಎಫ್.ಐ, ಡಿಸ್ಕಾಂಗಳಿಗೆ ವಿಶೇಷ ಕೊಡುಗೆ ಗಳನ್ನು ಮೇ 13 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನೌನ್ಸ್ ಮಾಡಿದ್ದರು.
ವಲಸೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಸಣ್ಣ ರೈತರ ಮೇಲೆ ಕೇಂದ್ರೀಕೃತವಾಗಿದ್ದ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಎರಡನೇ ಕಂತಿನ ವಿವರಗಳನ್ನು ಮೇ 14 ರಂದು ನಿರ್ಮಲಾ ಸೀತಾರಾಮನ್ ನೀಡಿದ್ದರು.
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಕೃಷಿ ಕ್ಷೇತ್ರಕ್ಕೆ ಮಹತ್ವದ ಘೋಷಣೆ.!
ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳಿಗೆ ಆದ್ಯತೆ ನೀಡಿ ಆರ್ಥಿಕ ಪ್ಯಾಕೇಜ್ ನ ಮೂರನೇ ಭಾಗವನ್ನು ಮೇ 15 ರಂದು ನಡೆದ ಸುದ್ಧಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ವಿವರಿಸಿದ್ದರು.
ಇಂದು ಸಂಜೆ 4 ಗಂಟೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಕಲ್ಲಿದ್ದಲು, ಖನಿಜ ಸಂಪತ್ತು, ರಕ್ಷಣಾ ಉತ್ಪಾದನೆ, ಬಾಹ್ಯಾಕಾಶ, ಪರಮಾಣು ಶಕ್ತಿ, ವಿಮಾನ ನಿಲ್ದಾಣಗಳು, ವಾಯುಪ್ರದೇಶ ನಿರ್ವಹಣೆ ಮತ್ತು ಎಂ.ಆರ್.ಓ ಸೇರಿದಂತೆ 8 ಕ್ಷೇತ್ರಗಳ ಸುಧಾರಣೆ ಬಗ್ಗೆ ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದ್ದಾರೆ.

50 ಸಾವಿರ ಕೋಟಿ ರೂಪಾಯಿ
* ಕಲ್ಲಿದ್ದಲು ಕ್ಷೇತ್ರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ 50 ಸಾವಿರ ಕೋಟಿ ರೂಪಾಯಿ ಅನುದಾನ.
* ಕಲ್ಲಿದ್ದಲು ಆಮದು ಕಡಿಮೆ ಮಾಡಿ, ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಲು ಕ್ರಮ.
* ಕಲ್ಲಿದ್ದಲು ವಲಯವನ್ನು ಖಾಸಗೀಕರಣ ಮಾಡಿದ ಕೇಂದ್ರ ಸರ್ಕಾರ.
* ಖಾಸಗಿ ವಲಯದಲ್ಲಿ ಸ್ಪರ್ಧಾತ್ಮಕತೆ, ಪಾರದರ್ಶಕತೆ ಹೆಚ್ಚಿಸಲು ಕ್ರಮ.
* ಕಲ್ಲಿದ್ದಲು ವಲಯದಲ್ಲಿ ವೈವಿಧ್ಯಮಯ ಅವಕಾಶ: ಪ್ರವೇಶ ಮಾನದಂಡ ಉದಾರೀಕರಣ.
* 50 ಗಣಿಗಳ ಬ್ಲಾಕ್ ಗಳನ್ನು ತಕ್ಷಣ ಮಾರಾಟಕ್ಕೆ ಕ್ರಮ. ಯಾವುದೇ ಅರ್ಹತಾ ಷರತ್ತುಗಳಿಲ್ಲ. ಸೀಲಿಂಗ್ ನೊಂದಿಗೆ ಮುಂಗಡ ಪಾವತಿ ಕಡ್ಡಾಯ.
* ಕಲ್ಲಿದ್ದಲು ಅನಿಲೀಕರಣ/ದ್ರವೀಕರಣವನ್ನು ಆದಾಯದ ಪಾಲಿನಲ್ಲಿ ರಿಯಾಯಿತಿ ಮೂಲಕ ಪ್ರೋತ್ಸಾಹ.
* ಪರಿಸರಕ್ಕೆ ಉಂಟಾಗುವ ಹಾನಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಆದ್ಯತೆ.
* ಅನಿಲ ಆಧಾರಿತ ಆರ್ಥಿಕತೆಗೆ ಬದಲಾಯಿಸಲು ಈ ಕ್ರಮಗಳು ಸಹಕಾರಿ.

ಖಾಸಗಿ ಹೂಡಿಕೆ
* ಖನಿಜ ವಲಯದಲ್ಲಿ ಖಾಸಗಿ ಹೂಡಿಕೆ ಹೆಚ್ಚಳ ಮಾಡಲು ಕ್ರಮ.
* ಖನಿಜ ಉತ್ಪಾದನೆಯನ್ನು ಹೆಚ್ಚಿಸಲು ಖಾಸಗಿ ಭಾಗಿತ್ವಕ್ಕೆ ಅವಕಾಶ
* ಉದ್ಯೋಗ ಸೃಷ್ಟಿ ಮತ್ತು ಖನಿಜ ಪರಿಶೋಧನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ತರಲು ರಚನಾತ್ಮಕ ಸುಧಾರಣೆ.
* 500 ಖನಿಜ ಗಣಿಗಳನ್ನು ಮುಕ್ತ ಮತ್ತು ಪಾರದರ್ಶಕ ಹರಾಜಿಗೆ ಕ್ರಮ.
* ಅತಿ ಹೆಚ್ಚಾಗಿ ಲಭ್ಯವಿರುವ ಮತ್ತು ಬಳಕೆಯಾಗದ ಖನಿಜಗಳ ಬಳಕೆ ಹಾಗೂ ಮಾರಾಟಕ್ಕೆ ಆದ್ಯತೆ.

ರಕ್ಷಣಾ ಸಾಮಗ್ರಿ ಭಾರತದಲ್ಲೇ ಉತ್ಪಾದನೆ
* ಮೇಕ್ ಇನ್ ಇಂಡಿಯಾ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣ
* ಭಾರತದಲ್ಲಿಯೇ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸಲು ಕೇಂದ್ರ ಸರ್ಕಾರದ ಕ್ರಮ
* ರಕ್ಷಣಾ ವಲಯದ ಉತ್ಪನ್ನ ಆಮದು ಕಡಿಮೆ ಮಾಡಲು ಮತ್ತು ಭಾರತದಲ್ಲಿಯೇ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸಲು ಆದ್ಯತೆ.
* ಭಾರತದಲ್ಲಿಯೇ ರಕ್ಷಣಾ ಸಾಮಗ್ರಿ ಖರೀದಿಗೆ ಬಜೆಟ್ ನಲ್ಲಿ ಅವಕಾಶ.
* ಶಸ್ತ್ರಾಸ್ತ್ರ ಕೈಗಾರಿಕೆ ಮಂಡಳಿಯಲ್ಲಿ ಸ್ವಾಯತ್ತತೆ, ಹೊಣೆಗಾರಿಕೆ, ದಕ್ಷತೆಗೆ ಒತ್ತು.
* ರಕ್ಷಣಾ ವಲಯದ ಕಂಪನಿಗಳು ಷೇರು ಮಾರುಕಟ್ಟೆ ಪ್ರವೇಶಿಸಲು ಕ್ರಮ.
* ರಕ್ಷಣಾ ವಲಯದಲ್ಲಿ ಎಫ್.ಡಿ.ಐ ಮಿತಿಯನ್ನು 49% ರಿಂದ 74% ಕ್ಕೆ ಹೆಚ್ಚಳ.
* ಕಾಲಮಿತಿಯಲ್ಲಿ ರಕ್ಷಣಾ ಸಾಮಗ್ರಿಗಳನ್ನು ಕೊಳ್ಳಲು ಕೇಂದ್ರ ಸರ್ಕಾರ ಆದ್ಯತೆ

ವಿಶ್ವದರ್ಜೆ ವಿಮಾನ ನಿಲ್ದಾಣ
* ಪಿಪಿಪಿ ಮೂಲಕ ವಿಶ್ವದರ್ಜೆ ವಿಮಾನ ನಿಲ್ದಾಣಗಳ ಸ್ಥಾಪನೆ
* ವಿಮಾನ ನಿಲ್ದಾಣಗಳಲ್ಲಿ ಮತ್ತಷ್ಟು ಸುಧಾರಣಾ ಕ್ರಮ
* 12 ವಿಮಾನ ನಿಲ್ದಾಣಗಳನ್ನು ಪಿಪಿಪಿ ಆಧಾರದ ಮೇಲೆ ಹರಾಜು. ಇದರಿಂದ ಏರ್ ಪೋರ್ಟ್ ಗಳ ನಿರ್ವಹಣಾ ವೆಚ್ಚ ಕಡಿಮೆ.
* ವಿಮಾನ ಬಿಡಿಭಾಗ ರಿಪೇರಿ ಮತ್ತು ಏರ್ ಫ್ರೇಮ್ ನಿರ್ವಹಣೆಗೆ 800 ಕೋಟಿ ರೂಪಾಯಿಂದ ಮುಂದಿನ 3 ವರ್ಷಗಳಲ್ಲಿ 2000 ಕೋಟಿ ರೂಪಾಯಿಗೆ ಏರಿಕೆಯಾಗಲಿದೆ.
* ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ 2300 ಕೋಟಿ ರೂಪಾಯಿ ಮುಂಗಡ ಹಣ ಸಿಗಲಿದೆ.

ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣ
* ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಿದ್ಯುತ್ ಇಲಾಖೆಗಳು/ಘಟಕಗಳ ಖಾಸಗೀಕರಣಕ್ಕೆ ಕ್ರಮ.
* ಡಿಸ್ಕಾಂಗಳ ಅಸಮರ್ಥತೆಯಿಂದ ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ.
* ಡಿಸ್ಕಾಂಗಳು ನಿಗದಿತ ವಿದ್ಯುತ್ ಪೂರೈಸದಿದ್ರೆ, ಲೋಡ್ ಶೆಡ್ಡಿಂಗ್ ಮಾಡಿದ್ರೆ ದಂಡ ವಿಧಿಸಲಾಗುವುದು
* ವಿದ್ಯುತ್ ಸಬ್ಸಿಡಿಯನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲು ಕ್ರಮ. ಇದಕ್ಕಾಗಿ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ ಗಳನ್ನು ಅಳವಡಿಸಲು ಒತ್ತು.

ಸಾಮಾಜಿಕ ಮೂಲಸೌಕರ್ಯಕ್ಕೆ 8100 ಕೋಟಿ
* ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಭಾಗಿತ್ವಕ್ಕೆ ಉತ್ತೇಜನ
* ಇಸ್ರೋ ಸೌಲಭ್ಯ ಪಡೆಯಲು ಖಾಸಗಿಯವರಿಗೆ ಅವಕಾಶ
* ಪರಮಾಣು ಇಂಧನ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ
* ವೈದ್ಯಕೀಯ ಐಸೊಟೋಪ್ ಗಳ ಉತ್ಪಾದನೆಗಾಗಿ ಸರ್ಕಾರ ಪಿಪಿಪಿ ಮೋಡ್ ನಲ್ಲಿ ಸಂಶೋಧನಾ ರಿಯಾಕ್ಟರ್ ಸ್ಥಾಪಿಸಲಿದ್ದು, ಇದು ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.
* ಸಾಮಾಜಿಕ ಮೂಲಸೌಕರ್ಯ ವಲಯಕ್ಕೆ 8100 ಕೋಟಿ ರೂಪಾಯಿ.