ಪಂಚ ರಾಜ್ಯ ಚುನಾವಣಾ ಫಲಿತಾಂಶ: ಎಚ್ಚರಿಕೆಯಿಂದಿರಿ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ, ಡಿಸೆಂಬರ್ 2: 5 ರಾಜ್ಯಗಳ ಚುನಾವಣಾ ಫಲಿತಾಂಶ ಭಾನುವಾರ ಪ್ರಕಟವಾಗಲಿದೆ. ಗೆಲ್ಲುವ ಶಾಸಕರನ್ನು ಅನ್ಯ ಪಕ್ಷಗಳ ನಾಯಕರು ಸೆಳೆಯುವ ಸಂಭವವಿರುವುದರಿಂದ ಈ ಎಲ್ಲ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.
ತೆಲಂಗಾಣದಲ್ಲಿ ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎನ್ನಲಾಗಿದ್ದು, ಹಾಲಿ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಗೆಲ್ಲಬಹುದಾದ ಶಾಸಕರಿಗೆ ದೂರವಾಣಿ ಕರೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹೀಗಾಗಿ ಖುದ್ದಾಗಿ ತೆಲಂಗಾಣಕ್ಕೆ ಹೋಗುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಕೆ ಚಂದ್ರಶೇಖರ್ ರಾವ್ ಅವರಿಗೆ ಕರೆ ಸ್ವೀಕರಿಸಿರುವ ಶಾಸಕರೊಬ್ಬರು ನಮ್ಮನ್ನು ತಮ್ಮಡೆಗೆ ಬರುವಂತೆ ಕರೆಯಲಾಗುತ್ತಿದೆ ಎಂದು ಹೇಳಿದ್ದಾರೆ. ಇದು ಎಲ್ಲ ರಾಜ್ಯಗಳಲ್ಲೂ ನಡೆಬಹುದಾಗಿದ್ದು, ಈ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲ ನಾಯಕರು ಎಚ್ಚರಿಕೆಯಿಂದಿರಬೇಕು. ಚುನಾವಣಾ ರಾಜ್ಯಗಳ ವೀಕ್ಷಕರಿಗೆ ಮತ ಎಣಿಕೆಯ ಮೇಲೆ ನಿಗಾ ಇಡುವಂತೆ ಸೂಚಿಸಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಒಂದು ದಿನ ಮುಂಚಿತವಾಗಿ ಕರ್ನಾಟಕ ಉಪಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ಶನಿವಾರ ಹೈದರಾಬಾದ್‌ಗೆ ಆಗಮಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರು ಈಗಾಗಲೇ ಮಧ್ಯಪ್ರದೇಶದ ಭೋಪಾಲ್‌ನಲ್ಲಿದ್ದಾರೆ.
ಎಕ್ಸಿಟ್ ಪೋಲ್ ಭವಿಷ್ಯವಾಣಿಗಳ ಪ್ರಕಾರ, ಬಿಜೆಪಿ ಮಧ್ಯಪ್ರದೇಶದಲ್ಲಿ 47 ಶೇಕಡಾ ಮತ ಹಂಚಿಕೆ ಮತ್ತು 140-162 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ. 41 ರಷ್ಟು ಮತ ಹಂಚಿಕೆಯೊಂದಿಗೆ ಕಾಂಗ್ರೆಸ್ 60-90 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಇತರರು ಶೇಕಡಾ 12 ಮತಗಳನ್ನು ಮತ್ತು 0-3 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
ಛತ್ತೀಸ್‌ಗಢದಲ್ಲಿ ಮೂರು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್‌ಗೆ ಸ್ಪಷ್ಟವಾದ ಜಯವನ್ನು ಭವಿಷ್ಯ ನುಡಿದಿವೆ. ಇತರರು ಪಕ್ಷವು ಗೆಲ್ಲುವ ಸಮೀಪವಿದೆಯಷ್ಟೇ ಎಂದು ಹೇಳಿದ್ದಾರೆ. ಏತನ್ಮಧ್ಯೆ ತೆಲಂಗಾಣದಲ್ಲಿ ಗುರುವಾರ ನಡೆದ ಎಕ್ಸಿಟ್ ಪೋಲ್‌ಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಸಿದ್ಧವಾಗಿದೆ. ರಾಜ್ಯದಲ್ಲಿ 10 ವರ್ಷಗಳ ಆಡಳಿತದ ನಂತರ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಬಹುಮತದಿಂದ ಕಡಿಮೆಯಾಗಲಿದೆ ಎಂದು ಭವಿಷ್ಯ ನುಡಿದಿದೆ.
ರಾಜಸ್ಥಾನದಲ್ಲಿ ಗುರುವಾರ ನಡೆದ ಎಕ್ಸಿಟ್ ಪೋಲ್‌ಗಳು ರಾಜ್ಯದಲ್ಲಿ ಕಠಿಣ ಸ್ಪರ್ಧೆ ಇದೆ ಎಂದು ತಿಳಿಸಿವೆ. ಆಡಳಿತರೂಢ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಸುಮಾರು ಮೂರು ದಶಕಗಳ ಸಂಪ್ರದಾಯವನ್ನು ಹೊಂದಿರುವ ರಾಜ್ಯದಲ್ಲಿ ವಿಜೇತರ ಭವಿಷ್ಯದಲ್ಲಿ ವ್ಯತ್ಯಾಸಗಳಿವೆ. ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಯನ್ನು ಡಿಸೆಂಬರ್ 4ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ.
ಇದಕ್ಕೂ ಮುನ್ನ ಮಿಜೋರಾಂ ಚುನಾವಣೆಯ ಮತ ಎಣಿಕೆ ಡಿಸೆಂಬರ್ 3 ರಂದು ನಡೆಯಬೇಕಿತ್ತು. ಮತ ಎಣಿಕೆ ದಿನವನ್ನು ಬದಲಾಯಿಸುವಂತೆ ರಾಜ್ಯದ ವಿವಿಧೆಡೆಯಿಂದ ಹಲವಾರು ಆಗ್ರಹಗಳು ಬಂದಿದ್ದರಿಂದ ದಿನಾಂಕವನ್ನು ಬದಲಿಸಲಾಗಿದೆ ಎಂದು ಚುನಾವಣಾ ಸಂಸ್ಥೆ ತಿಳಿಸಿದೆ. 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ನಡೆದ ಚುನಾವಣೆಯಲ್ಲಿ, ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ಝಡ್‌ಪಿಎಂ), ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸ್ಪರ್ಧೆಯನ್ನು ಎದುರಿಸಿತು.












Click it and Unblock the Notifications