Ram Navami at Ram Mandir: ಅಯೋಧ್ಯೆಯಲ್ಲಿ ರಾಮನವಮಿ: ಸೂರ್ಯರಶ್ಮಿ ಪ್ರಯೋಗ ಸಕ್ಸಸ್
ಅಯೋಧ್ಯೆ ಏಪ್ರಿಲ್ 15: ಅಯೋಧ್ಯೆಯಲ್ಲಿ ಮೊದಲ ಬಾರಿಗೆ ರಾಮನವಮಿ ಆಚರಣೆ ಮಾಡಲಾಗುತ್ತಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಸೂರ್ಯರಶ್ಮಿ ಪ್ರಯೋಗ ಕೂಡ ಯಶಸ್ವಿಯಾಗಿದ್ದು ರಾಮನವಮಿಯಂದು ಸೂರ್ಯ ರಶ್ಮಿ ಶ್ರೀರಾಮನ ಮೂರ್ತಿ ಸ್ಪರ್ಶ ಮಾಡಲಿದೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ಏಪ್ರಿಲ್ 17ರಂದು ರಾಮನವಮಿಯನ್ನು ಆಚರಿಸಲಾಗುತ್ತಿದೆ. ಈ ದಿನ ಬಾಲರಾಮನ ಮೂರ್ತಿಯ ಮೇಲೆ ಸೂರ್ಯರಶ್ಮಿಯ ಕಿರಣ ಬೀಳಲಿದೆ. ಇದರ ಪ್ರಯೋಗ ಈಗಾಗಲೇ ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ತಜ್ಞರ ಸಮ್ಮುಖದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ತಜ್ಞರು ಈ ತಂತ್ರಜ್ಞಾನ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಏಪ್ರಿಲ್ 17ರ ರಾಮನವಮಿಯಂದು ಸಹ ಬಾಲರಾಮನ ಮೂರ್ತಿಯ ಮೇಲೆ ಮೂರು ಕನ್ನಡಿಗಳ ಸಹಾಯದಿಂದ ಎರಡೂವರೆ ನಿಮಿಷಗಳ ಕಾಲ ಸೂರ್ಯರಶ್ಮಿ ಬೀಳಲಿದೆ. ಅದನ್ನು ದೂರದರ್ಶನ ನೇರ ಪ್ರಸಾರ ಮಾಡಲಿದ್ದು, ಜಗತ್ತಿನಾದ್ಯಂತ ಜನರು ಈ ತಂತ್ರಜ್ಞಾನ ಕೌತುಕವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದು ಟ್ರಸ್ಟ್ ಪ್ರಕಟಿಸಿದೆ.
ಅಯೋಧ್ಯೆಯಲ್ಲಿ ಮೊದಲ ಬಾರಿಗೆ ರಾಮನವಮಿ ಆಚರಣೆ:
ಅಯೋಧ್ಯೆಯಲ್ಲಿ ಮೊದಲ ಬಾರಿಗೆ ರಾಮನವಮಿ ಆಚರಿಸಲಾಗುತ್ತಿದೆ. ಹೀಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಏಪ್ರಿಲ್ 17ರಂದು ನೈವೇದ್ಯ ಹಾಗೂ ಪ್ರಸಾದವಾಗಿ ವಿತರಿಸಲು 1,11,111 ಕೆಜಿ ತೂಕದ ಲಾಡುಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದೆ. ಈ ಬಗ್ಗೆ ಮಾತನಾಡಿದ ಮಿರ್ಜಾಪುರದ ಹಂಸ್ ಬಾಬಾ ಟ್ರಸ್ಟ್‌ನ ಟ್ರಸ್ಟಿ ಅತುಲ್ ಕುಮಾರ್ ಸಕ್ಸೇನಾ, 'ಕಾಶಿ ವಿಶ್ವನಾಥ ಹಾಗೂ ತಿರುಪತಿ ತಿಮ್ಮಪ್ಪ ದೇಗುಲಯಗಳಿಗೆ ಲಾಡು ಪ್ರಸಾದ ಕಳುಹಿಸಲಾಗುತ್ತಿದೆ. ಅದರಂತೆ ಈಗ ಅಯೋಧ್ಯೆಗೂ ಕಳಿಸಲಾಗಿದೆ ಎಂದಿದ್ದಾರೆ.
ಈ ವರ್ಷ ಜನವರಿ 22 ರಂದು ನಡೆದ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ದಿನ ಹಂಸ್ ಬಾಬಾ ಆಶ್ರಮವು ನೈವೇದ್ಯಕ್ಕಾಗಿ 40,000ಕೆಜಿ ತೂಕದ ಲಾಡುಗಳನ್ನು ಕಳುಹಿಸಿತ್ತು.

ಅಯೋಧ್ಯೆಯಲ್ಲಿ ಜನ ದಟ್ಟಣೆ ನಿಯಂತ್ರಣಕ್ಕೆ ಟಿಟಿಡಿ ಉಪಾಯ:
ಅಯೋಧ್ಯೆಯಲ್ಲಿ ಜನಸಂದಣೆಯನ್ನು ನಿಯಂತ್ರಿಸಲು, ಸರತಿ ಸಾಲು, ನೀರಿನ ಘಟಕ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಬಗ್ಗೆ ರಾಮ ಮಂದಿರ ಟ್ರಸ್ಟ್‌ಗೆ ತಿರುಮಲ ತಿರುಪತಿ ದೇಗುಲದ (ಟಿಟಿಡಿ) ಎಂಜಿನಿಯರ್‌ಗಳ ತಂಡ ಸಲಹೆಗಳನ್ನು ನೀಡಿದೆ. ರಾಮ ಮಂದಿರ ಟ್ರಸ್ಟ್ ಆಹ್ವಾನದ ಮೇಲೆ ಕಳೆದ ಫೆ.16 ಮತ್ತು 17 ರಂದು ಟಿಟಿಡಿ ಎಂಜಿನಿಯರ್‌ಗಳ ತಂಡವೊಂದು ಅಯೋಧ್ಯೆಗೆ ಭೇಟಿ ನೀಡಿತು.
ದೇಗುಲದಲ್ಲಿ ಜನ ಸಂದಣಿ, ಸರತಿ ಸಾಲು, ನೀರಿನ ಘಟಕ, ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳ ಬಗ್ಗೆ ವರದಿಯನ್ನು ಸಲ್ಲಿಸಿತು. ಈ ಕುರಿತು ನಡೆದ ಸಭೆಯಲ್ಲಿ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಗೋಪಾಲಜಿ ಸೇರಿದಂತೆ ಇನ್ನಿತರರು ಇದ್ದರು ಎಂದು ಟಿಟಿಡಿ ಹೇಳಿದೆ.












Click it and Unblock the Notifications