ಆಗ್ರಾ ಬಳಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ: ತಪ್ಪಿತು ಭಾರೀ ಅನಾಹುತ
ನವದೆಹಲಿ, ಅಕ್ಟೋಬರ್ 26: ಆಗ್ರಹ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ರೈಲಿನ ಬೋಗಿಯೊಳಗೆ ಅಗ್ನಿ ಅವಘಡ ಸಂಭವಿಸಿದೆ. ರೈಲ್ವೆ ಕ್ರಾಸಿಂಗ್ ಒಂದರಲ್ಲಿ ನಿಯೋಜನೆಗೊಂಡಿದ್ದ ಮಾಜಿ ಸೇನಾಧಿಕಾರಿಯು ಆದ ಗೇಟ್‌ಮ್ಯಾನ್ ಯಶಪಾಲ್ ಸಿಂಗ್ ಅವರ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ಬುಧವಾರ ತಪ್ಪಿದಂತಾಗಿದೆ.
ಹೌದು, ಇಲ್ಲಿನ ಭಂಡೈ ನಿಲ್ದಾಣದ ಹತ್ತು ಕಿಮೀ ಸಮೀಪದಲ್ಲಿ ಬಳಿಯ ರೈಲ್ವೇ ಕ್ರಾಸಿಂಗ್ ಬಳಿ 'ಪಟಾಲ್ ಕೋಟ್ ಎಕ್ಸ್‌ಪ್ರೆಸ್' ಬರುತ್ತಿದ್ದಂತೆ ಅದರ ಬೋಗಿಗಳಲ್ಲಿ ಕಾಣಿಸಿದ ಹೊಗೆಯನ್ನು ಗೇಟ್‌ಬ್ಯಾನ್ ಸಿಂಗ್ ಅವರು ಪತ್ತೆ ಮಾಡಿ ಕೂಡಲೇ ಹಿರಿಯ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ಹೊಗೆ ಒಂದೆರಡು ಬೋಗಿಗಳ ತುಂಬೆಲ್ಲ ಆವರಿಸಿ ಬೆಂಕಿ ವಿಸ್ತರಿಸಲು ಆರಂಭಿಸಿತ್ತು ಎಂದು ಪಿಟಿಐ ವರದಿ ಮಾಡಿದೆ.

ಈ ಎಕ್ಸ್‌ಪ್ರೆಸ್ ರೈಲು ಬುಧವಾರ ಮಧ್ಯಾಹ್ನ 3.35ಕ್ಕೆ ಕ್ರಾಸಿಂಗ್ ಮೂಲಕ ಹಾದು ಹೋದಾಗ, ಗೇಟ್‌ಮ್ಯಾನ್ ಸಿಂಗ್ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ನ ಹಿಂಬದಿಯ 4ನೇ ಕೋಚ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದರು. ಆದರೆ ಇದು ರೈಲಿನಲ್ಲಿ ಪ್ರಯಾಣಿಸಿತ್ತಿದ್ದ ಪ್ರಯಾಣಿಕರಿಗೆ ಗೊತ್ತಾ ಆಗಿರಲಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಮಧ್ಯಪ್ರದೇಶ-ಪಂಜಾಬ್ ಎಕ್ಸ್‌ಪ್ರೆಸ್ ರೈಲು
ಕೂಡಲೇ ಯಶ್‌ಪಾಲ್ ಅವರು ತಕ್ಷಣವೇ ಭಂಡೈ ನಿಲ್ದಾಣದ ಉಪ ಸ್ಟೇಷನ್ ಸೂಪರಿಂಟೆಂಡೆಂಟ್ ಹರಿದಾಸ್ ಅವರನ್ನು ಸಂಪರ್ಕಿಸಿ ಸುದ್ದಿ ಮುಟ್ಟಿಸಿದರು. ರೈಲು ನಿಯಂತ್ರಕರು ತಕ್ಷಣವೇ ಎಲ್ಲ ರೈಲುಗಳ ವಿದ್ಯುತ್ ಸರಬರಾಜು ನಿಲ್ಲಿಸುವಂತೆ ಮತ್ತು ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಸೂಚಿಸಿದ್ದಾರೆ.
ಪಟಾಲ್‌ಕೋಟ್ ಎಕ್ಸ್‌ಪ್ರೆಸ್ ರೈಲು ಮಧ್ಯಪ್ರದೇಶದಿಂದ ಪಂಜಾಬ್‌ನ ಫಿರ್ಜಪುರ್ ಕಂಟೋನ್ಮೆಂಟ್ ನಿಲ್ದಾಣಕ್ಕೆ ತೆರಳುತ್ತಿತ್ತು. ಈ ವೇಳೆ ಮಧ್ಯಾಹ್ನ 3.37ರ ಹೊತ್ತಿಗೆ ಭಂಡೈ ನಿಲ್ದಾಣವನ್ನು ದಾಟಿತ್ತು. 10 ನಿಮಿಷಗಳಲ್ಲಿ, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಮತ್ತು ಸ್ಪಾರ್ಟ್ (ಸ್ವಯಂ ಚಾಲಿತ ಅಪಘಾತ ಪರಿಹಾರ ರೈಲು) ಸ್ಥಳಕ್ಕೆ ತಲುಪಿತು ಎನ್ನಲಾಗಿದೆ.

ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗಾಗಲೇ ಬೆಂಕಿಯ ಕೆನ್ನಾಲಿಗೆಗೆ ಎರಡು ಕೋಚ್‌ಗಳ ಆಹುತಿಯಾಗ ತೊಡಗಿದ್ದವು. ಇಷ್ಟೊತ್ತಿಗಾಗಲೇ ಎಲ್ಲ ಪ್ರಯಾಣಿಕರನ್ನು ರೈಲಿನಿಂದ ಹೊರಕ್ಕೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಸಂಜೆ 5.10 ಗಂಟೆ ಹೊತ್ತಿಗೆ ಬೆಂಕಿಯ್ನು ಸಂಪೂರ್ಣವಾಗಿ ನಂದಿಸಲಾಯಿತು. ಘಟನೆಯಲ್ಲಿ ಒಟ್ಟು 11 ಜನರಿಗೆ ಸಣ್ಣ ಸುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಗಾಯಗೊಂಡವರು ಆಸ್ಪತ್ರೆಗೆ
ಗಾಯಗೊಂಡವರನ್ನು ರಾಹುಲ್ ಕುಮಾರ್ (18), ಗೌರವ್ (22), ಸಿದ್ಧಾರ್ಥ್ (18) ಹಿತೇಶ್ (17), ಮೋಹಿತ್ (25), ಶಿವಂ (18) ಮನೋಜ್ ಕುಮಾರ್ (34), ರಾಮೇಶ್ವರ್ (29), ಹರದಯಾಳ್ (59), ಮಣಿರಾಮ್ (45) ಮತ್ತು ರೈಲಿಗೆ ಬೆಂಕಿ ತಗುಲಿ ವಿಕಾಸ್ (17) ಎಂದು ಗುರುತಿಸಲಾಗಿದೆ. ಈವರೆಗೆ ಬೆಂಕಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.
ಎರಡು ಬೋಗಿಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಎರಡು ಪಕ್ಕದ ಕೋಚ್‌ಗಳು ಸಹ ಪರಿಣಾಮ ಬೀರಿದ್ದರಿಂದ, ಒಟ್ಟು ನಾಲ್ಕು ಬೋಗಿಗಳನ್ನು ಈ ರೈಲಿನಿ ಬೇರ್ಪಡಿಸಲಾಗಿದೆ. ಗಾಯಾಳುಗಳ ಪೈಕಿ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿಷಯ ತಿಳಿಯುತ್ತಿದ್ದಂತೆ ಆಗ್ರಾ ಪೊಲೀಸ್ ಕಮಿಷನರೇಟ್‌ನ ಉಪ ಪೊಲೀಸ್ ಕಮಿಷನರ್ (ಪಶ್ಚಿಮ) ಸೋನಮ್ ಕುಮಾರ್ ಹಾಗೂ ಐದು ಅಗ್ನಿಶಾಮಕ ಸಿಬ್ಬಂದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ತಂಡವು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಇನ್ನೂ ಘಟನೆಯಿಂದ ಇದೇ ಮಾರ್ಗದಲ್ಲಿ ಓಡಾಡುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಯಿತು.












Click it and Unblock the Notifications