Breaking: ಉತ್ತರಪ್ರದೇಶದ ಪ್ರಯಾಗ್‌ರಾಜ್ ಕುಂಭ ಮೇಳದಲ್ಲಿ ಅಗ್ನಿ ಅವಘಡ
ಲಕ್ನೋ ಜನವರಿ 20: ಉತ್ತರಪ್ರದೇಶದ ಪ್ರಯಾಗ್‌ರಾಜ್ ಮಹಾ ಕುಂಭ ಮೇಳದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಟೆಂಟ್‌ವೊಂದು ಧಗಧಗಿಸಿದೆ. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕದಳ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೆಂಕಿ ಒಂದು ಟೆಂಟ್‌ನಿಂದ ಮತ್ತೊಂದು ಟೆಂಟ್‌ಗೆ ಆವರಿಸಿಕೊಳ್ಳುತ್ತಿದ್ದು, ಇದರಿಂದಾಗಿ ಸ್ಥಳದಲ್ಲಿ ನೆಲೆಗೊಂಡಿದ್ದ ನೂರಾರು ನಾಗಾ ಸಾಧುಗಳನ್ನು ಸ್ಥಳಾಂತರಿಸಲಾಗುತ್ತಿದೆ.
ಚಳಿಗಾಲದಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿ ಹರಡಿಕೊಳ್ಳುತ್ತಿದ್ದು ಆಕಾಶದೆತ್ತರಕ್ಕೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದರಿಂದಾಗಿ ಮಹಾ ಕುಂಭ ಮೇಳದಲ್ಲಿ ಭಾಗಿಯಾದ ಭಕ್ತರು ಭಯ ಭೀತರಾಗಿದ್ದಾರೆ. ಬೆಂಕಿ ಅವಘಡದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಘಟನೆಗೆ ಕಾರಣ ಏನು ಎಂದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಹರಡಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಸಂಭವಿಸಿದ ವರದಿಯಾಗಿಲ್ಲ. ಈ ಬಗ್ಗೆ ಮಾತನಾಡಿದ ಅಖಾರ ಪೊಲೀಸ್ ಠಾಣೆಯ ಉಸ್ತುವಾರಿ ಭಾಸ್ಕರ್ ಮಿಶ್ರಾ, "ಮಹಾ ಕುಂಭಮೇಳದ ಸೆಕ್ಟರ್ 19ರಲ್ಲಿ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಶಿಬಿರಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
"ತುಂಬಾ ದುಃಖಕರ! ಮಹಾ ಕುಂಭದಲ್ಲಿ ನಡೆದ ಬೆಂಕಿಯ ಘಟನೆ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಆಡಳಿತವು ತಕ್ಷಣದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಮಾಡಲಿದೆ. ಎಲ್ಲರ ಸುರಕ್ಷತೆಗಾಗಿ ನಾವು ಗಂಗಾ ಮಾತೆಯನ್ನು ಪ್ರಾರ್ಥಿಸುತ್ತೇವೆ" ಎಂದು ಮಹಾ ಕುಂಭದ ಅಧಿಕೃತ ಎಕ್ಸ್ ಹ್ಯಾಂಡಲ್ ಹೇಳಿದೆ.
ಮಹಾ ಕುಂಭ ಮೇಳದಲ್ಲಿ ಸಂಭವಿಸಿದ ಅಗ್ನಿ ಅವಘಡದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರ ಸೂಚನೆಯ ಮೇರೆಗೆ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ಸಿಎಂಒ ತಿಳಿಸಿದೆ. ಸ್ಥಳದಲ್ಲಿದ್ದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications