Jharkhand Election: ಚುನಾವಣೆಗೆ ಮುನ್ನವೇ ಬಿಜೆಪಿ ವಿರುದ್ಧ ಎಫ್‌ಐಆರ್ ದಾಖಲು
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 13ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್ ಜೊತೆ ಇಂಡಿಯಾ ಒಕ್ಕೂಟದ ಪಕ್ಷಗಳು ಸ್ಪರ್ಧಿಸಿದ್ದು ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿವೆ. ಮತ್ತೊಂದು ಕಡೆ ಎನ್‌ಡಿಎ ಈ ಬಾರಿ ಜಾರ್ಖಂಡ್ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಭರ್ಜರಿ ಪ್ರಚಾರ ನಡೆಸುತ್ತಿದೆ. ಪ್ರಚಾರದ ಭಾಗವಾಗಿ ಎದುರಾಳಿ ಪಕ್ಷದ ನಾಯಕರನ್ನು ಅವಹೇಳನ ಮಾಡಲಾಗಿದೆ ಎಂದು ಬಿಜೆಪಿಯ ಜಾರ್ಖಂಡ್ ಘಟಕದ ವಿರುದ್ಧ ದೂರು ದಾಖಲಾಗಿದೆ.
ಜಾರ್ಖಂಡ್ ಬಿಜೆಪಿ ಸಾಮಾಜಿಕ ಮಾಧ್ಯಮದ ಅಧಿಕೃತ ಖಾತೆಗಳಲ್ಲಿ ಎದುರಾಳಿ ಪಕ್ಷದ ನಾಯಕರ ವ್ಯಕ್ತಿತ್ವವನ್ನು ಅವಮಾನಿಸುವಂತೆ ಪೋಸ್ಟ್‌ಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ದೂರು ನೀಡಿದ್ದು, ರಾಂಚಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್‌ಐಆರ್ ದಾಖಲಾಗಿದೆ.

ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್‌ಗಳಲ್ಲಿ ಸುಳ್ಳು ವಿಷಯಗಳನ್ನು ಪ್ರಚಾರ ಮಾಡುವ ಮೂಲಕ ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರಲು ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿನಲ್ಲಿ ಆರೋಪಿಸಿದೆ.
ಎಫ್‌ಐಆರ್‌ನಲ್ಲಿ ಏನಿದೆ?
ನವೆಂಬರ್ 13 ಮತ್ತು ನವೆಂಬರ್ 20 ರಂದು ರಾಜ್ಯದಲ್ಲಿ ಎರಡು ಹಂತದ ಚುನಾವಣೆಗಳು ನಡೆಯುತ್ತಿದ್ದು, ಬಿಜೆಪಿ ವಿರೋಧ ಪಕ್ಷದ ಅಬ್ಯರ್ಥಿಗಳ ಮೇಲೆ ಆಧಾರ ರಹಿತ ಆರೋಪಗಳನ್ನು ಮಾಡಿ ಪೋಸ್ಟ್ ಹಂಚಿಕೊಳ್ಳುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಹೋಲುವ ಮೂರು ಪಾತ್ರಗಳನ್ನು ಒಳಗೊಂಡಿರುವ ಮತ್ತು ಅವರನ್ನು ಬುಡಕಟ್ಟು ವಿರೋಧಿ ಎಂದು ಬಿಂಬಿಸುವ ವಿಡಿಯೋಗಳನ್ನು ಬಿಜೆಪಿ ಹಂಚಿಕೊಂಡಿದ್ದು ಇದು ಮತದಾರರ ದಿಕ್ಕು ತಪ್ಪಿಸುವ ಪ್ರಯತ್ನ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಈ ವಿಡಿಯೊ ಸ್ಪಷ್ಟವಾಗಿ ಮಾದರಿ ನೀತಿ ಸಂಹಿತೆ (MCC) ಮತ್ತು ಸಂಬಂಧಿತ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಕಾಂಗ್ರೆಸ್ ಹೇಳಿದ್ದು, ಕಾಂಗ್ರೆಸ್ ನಾಯಕರನ್ನು ಕೆಟ್ಟದಾಗಿ ತೋರಿಸಲು ಬಿಜೆಪಿ ಇಂತಹ ವಿಡಿಯೋ ಹಂಚಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69(ಎ) ಅಡಿಯಲ್ಲಿ ಆಕ್ಷೇಪಾರ್ಹ ವೀಡಿಯೊಗಳನ್ನು ಕೂಡಲೇ ತೆಗೆದುಹಾಕುವಂತೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯು ಬಿಜೆಪಿ ಸಾಮಾಜಿಕ ಮಾಧ್ಯಮ ವೇದಿಕೆಗೆ ಪತ್ರ ಬರೆದು ಸೂಚನೆ ಕೊಟ್ಟಿದೆ.












Click it and Unblock the Notifications