ಕಾಶ್ಮೀರಿ ಪಂಡಿತರಿಗೆ ವಿಶೇಷ ಸಂದೇಶ ಕೊಟ್ಟ ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ
ಜಮ್ಮು ಕಾಶ್ಮೀರದಲ್ಲಿ ದಶಕಗಳ ಬಳಿಕ ವಿಧಾನಸಭಾ ಚುನಾವಣೆ ನಡೆದಿದೆ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನ್ಯಾಶನಲ್ ಕಾನ್ಫರೆನ್ಸ್ (ಎನ್‌ಸಿ) ಸರ್ಕಾರ ರಚನೆಗೆ ಸಜ್ಜಾಗಿದೆ. ನ್ಯಾಶನಲ್ ಕಾನ್ಫರೆನ್ಸ್ ಪಕ್ಷಕ್ಕೆ 4 ಪಕ್ಷೇತರ ಶಾಸಕರು, ಕಾಂಗ್ರೆಸ್ ಮತ್ತು ಎಎಪಿ ಬೆಂಬಲ ಘೋಷಿಸಿವೆ. 370ನೇ ವಿಧಿ ರದ್ದು ಮಾಡಿದ ಬಳಿಕ ಮೊದಲ ಬಾರಿ ಸರ್ಕಾರ ರಚನೆಯಾಗಲಿದ್ದು, ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಬೆನ್ನಲ್ಲೇ ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಕಾಶ್ಮಿರಿ ಪಂಡಿತರಿಗೆ ವಿಶೇಷ ಸಂದೇಶ ಕೊಟ್ಟಿದ್ದಾರೆ.
1990ರ ದಶಕದ ಆರಂಭದಲ್ಲಿ ಮುಸ್ಲಿಂ ದಾಳಿಕೋರರು ಕಾಶ್ಮೀರಿ ಪಂಡಿತರನ್ನು ಅಲ್ಲಿಂದ ಒಕ್ಕಲೆಬ್ಬಿಸಿದ್ದರು. ಅಂದು ಕಾಶ್ಮಿರದಿಂದ ಚದುರಿಹೋಗಿದ್ದ ಪಂಡಿತರ ಸಮುದಾಯ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದೆ. ಈಗ, ಕಾಶ್ಮೀರಿ ಪಂಡಿತರ ಮರಳುವಿಕೆಗೆ ತಾನು ಮತ್ತು ಪಕ್ಷ ಕಾಯುತ್ತಿದೆ ಎಂದು ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಮಾಧ್ಯಮಗಳು ಕಾಶ್ಮೀರಿ ಪಂಡಿತರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಫಾರೂಕ್ ಅಬ್ದುಲ್ಲಾ, "ಇಲ್ಲಿಂದ ಹೋಗಿರುವ ನಮ್ಮ ಸಹೋದರ, ಸಹೋದರಿಯರು ಮನೆಗೆ ಮರಳುತ್ತಾರೆ ಎಂದು ನಾನು ನಂಬಿದ್ದೇನೆ. ಇದೀಗ ಸಮಯ ಬಂದಿದೆ, ಕಾಶ್ಮೀರಿ ಪಂಡಿತರು ತಮ್ಮ ಮನೆಗೆ ವಾಪಸ್ ಬರಬೇಕು. ಅವರು ಮಾತ್ರವಲ್ಲ ಜಮ್ಮುವಿನ ಜನ ಕೂಡ ವಾಪಸ್ ಬರಬೇಕು" ಎಂದು ಹೇಳಿದರು.
ತಮ್ಮ ಪಕ್ಷವು ಹಿಂದೂ ಮತ್ತು ಮುಸ್ಲಿಂ ಎನ್ನುವ ತಾರತಮ್ಯ ಮಾಡುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ, ಕಾಶ್ಮೀರದಲ್ಲಿ ಎಲ್ಲರಿಗೂ ಬದುಕಲು ಜಾಗವಿದೆ ಎಂದು ಹೇಳಿದರು.
ನಾವು ಕಾಶ್ಮೀರಿ ಪಂಡಿತರ ಶತ್ರುಗಳಲ್ಲ
ಕಾಶ್ಮೀರಿ ಪಂಡಿತರು ತಮ್ಮ ಮನೆಗಳಿಗೆ ವಾಪಸ್ ಬರಬೇಕು, ಅವರ ಮನೆಗಳನ್ನು ನೋಡಿಕೊಳ್ಳಬೇಕು,. ಅವರನ್ನು ನಾವು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದರು. ಕಾಶ್ಮೀರಿ ಪಂಡಿತರು ವಾಪಸಾಗಲು ಸರ್ಕಾರವು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ, ನಾವು ಕಾಶ್ಮೀರಿ ಪಂಡಿತರ ಶತ್ರುಗಳಲ್ಲ ಎಂದು ಹೇಳಿದರು.
ಅವರು ಬಹಳ ಹಿಂದೆಯೇ ತಮ್ಮ ಮನೆಗಳಿಗೆ ಮರಳಬೇಕಿತ್ತು. ನಾವು ಅವರನ್ನು ಚನ್ನಾಗಿ ನಡೆಸಿಕೊಳ್ಳಬೇಕು. ನ್ಯಾಶನಲ್ ಕಾಂಗ್ರೆಸ್ ಅವರ ಶತ್ರುವಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನಾವು ಭಾರತೀಯರು, ಎಲ್ಲರೂ ಜೊತೆಗೆ ಬದುಕಬೇಕು ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.
ಸರ್ಕಾರ ರಚಿಸಲು ಹಕ್ಕು ಮಂಡನೆ
90 ಸ್ಥಾನಗಳಲ್ಲಿ 48 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಡ ಸರ್ಕಾರ ರಚಿಸಲು ಹಕ್ಕು ಮಂಡಿಸಿದೆ. ಜಮ್ಮು ಮತ್ತು ಕಾಶ್ಮೀರ 10 ವರ್ಷಗಳ ನಂತರ ಚುನಾಯಿತ ಸರ್ಕಾರವನ್ನು ಪಡೆಯಲು ಸಜ್ಜಾಗಿದೆ. 2024ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿ 42, ಕಾಂಗ್ರೆಸ್ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 29 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಎರಡನೇ ಅತಿ ದೊಡ್ಡ ಪಕ್ಷ ಎನಿಸಿಕೊಂಡಿದೆ.












Click it and Unblock the Notifications