ರೈತರಿಂದ ತಡೆ: ಪಂಜಾಬ್‌ನಲ್ಲಿ 50, ಯುಪಿಯಲ್ಲಿ 4 ರೈಲು ರದ್ದು
ನವದೆಹಲಿ, ಆಗಸ್ಟ್ 21: ಕಬ್ಬಿನ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿ ರೈತರು ಛಂಡೀಗಢದ ಜಲಾಂದರ್ ರಸ್ತೆ ಬಳಿ ರೈಲು ತಡೆ ನಡೆಸಿದ್ದು, ರೈಲು ಸಂಚಾರಕ್ಕೆ ಹಾಗೂ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಭಾರೀ ಪರಿಣಾಮ ಬೀರಿದೆ. ಗಂಟೆಗಳ ಕಾಲ ಇಲ್ಲಿ ಸಂಚಾರದಟ್ಟನೆ ಉಂಟಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಫಿರಾಜ್ ಪುರ ವಲಯದ ರೈಲ್ವೇ ಅಧಿಕಾರಿಗಳ ಪ್ರಕಾರ, ಕಬ್ಬಿನ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿ ರೈತರು ಜಲಾಂದರ್ ರಸ್ತೆ ಬಳಿ ನಡೆಸಿದ ರೈಲು ತಡೆಯಿಂದಾಗಿ ಸುಮಾರು 50 ರೈಲುಗಳು ರದ್ದಾಗಿದೆ. ಇನ್ನು 54 ರೈಲುಗಳ ಹಳಿ ಬದಲಿಸಲಾಗಿದೆ ಅಥವಾ ಅರ್ಧದಲ್ಲೇ ಸ್ಥಗಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಲವಾರು ರೈತರು ಕಬ್ಬಿನ ಬಾಕಿ ಬೆಲೆ ಮತ್ತು ಕಬ್ಬಿನ ಬೆಲೆ ಏರಿಕೆಗೆ ಸಂಬಂಧಿಸಿದ ತಮ್ಮ ಮನವಿಯನ್ನು ಸ್ವೀಕರಿಸಿ ಎಂದು ಪಂಜಾಬ್ ಸರ್ಕಾರವನ್ನು ಒತ್ತಾಯಿಸಲು ಶುಕ್ರವಾರ ಅನಿರ್ದಿಷ್ಟ ಅವಧಿಗೆ ಆಂದೋಲನವನ್ನು ಆರಂಭಿಸಿದ್ದರು. ಇಂದು ರೈಲು ತಡೆ ನಡೆಸಿದ ರೈತರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಹಾಗೆಯೇ ತಮ್ಮ ಬೇಡಿಕೆ ಈಡೇರಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದಿದ್ದಾರೆ. ಇನ್ನು ರೈಲು ತಡೆ ನಡೆಸುವುದಾಗಿ ಹೇಳಿಕೆ ನೀಡಿದ್ದ ರೈತರು ತಾವು ಅಗತ್ಯ ತುರ್ತು ವಾಹನಗಳಿಗೆ ಸಂಚಾರ ಮಾಡಲು ಅವಕಾಶ ಮಾಡಿಕೊಡುವುದಾಗಿ ಹೇಳಿದ್ದರು. ಹಾಗೆಯೇ ರೈತರು ತುರ್ತು ವಾಹನಗಳಿಗೆ ಸಂಚಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ವರದಿಯು ಹೇಳಿದೆ.

ಪ್ರತಿಭಟನಾನಿರತ ರೈತರು ಜಲಂಧರ್ ಜಿಲ್ಲೆಯ ಧನೋವಲಿ ಗ್ರಾಮದ ಬಳಿಯ ಜಲಾಂದರ್- ಫಗ್ವಾರಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆದಿದ್ದಾರೆ ಎಂದು ಹೇಳಾಗಿದೆ. ರೈತರು ವಾಹನ ಸಂಚಾರ ಹಾಗೂ ರೈಲು ಸಂಚಾರವನ್ನು ತಡೆಹಿಡಿದ ಕಾರಣ ಹಲವಾರು ಪ್ರದೇಶಗಳಲ್ಲಿ ಸಂಚಾರದಟ್ಟಣೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಜಲಂಧರ್, ಅಮೃತಸರ ಮತ್ತು ಪಠಾಣ್‌ಕೋಟ್‌ನಲ್ಲಿ ಹೆಚ್ಚಿನ ಪ್ರಭಾವ ಬೀರಿದೆ ಎಂದು ವರದಿಯು ವಿವರಿಸಿದೆ. ಇನ್ನು ಹೊರಗಿನ ಸಂಚಾರದ ಮೇಲೆಯೂ ಈ ಪ್ರಭಾವ ಬೀರಿದೆ ಎನ್ನಲಾಗಿದೆ. ಆದರೆ ಸ್ಥಳೀಯ ಆಡಳಿತವು ಕೆಲವು ಪರ್ಯಾಯ ಮಾರ್ಗಗಳ ಮೂಲಕ ಸಂಚಾರವನ್ನು ಮಾಡುವಂತೆ ತಿಳಿಸಿದೆ ಎಂದು ಹೇಳಲಾಗಿದೆ.
ಜಲಂಧರ್-ಚಾಹೇರು ವಿಭಾಗದಲ್ಲಿ ರೈಲು ತಡೆ ಮಾಡಿ ಕುಳಿತಿರುವ ರೈತರು ಲುಧಿಯಾನ- ಅಮೃತಸರ ಮತ್ತು ಲುಧಿಯಾನ- ಜಮ್ಮು ರೈಲು ಹಳಿಗಳ ಸಂಚಾರವನ್ನು ತಡೆದಿದ್ದಾರೆ. ಈ ರೈಲಿನ ತಡೆಯಿಂದಾಗಿ ಅಮೃತಸರ- ಹೊಸದಿಲ್ಲಿ (02030) ಮತ್ತು ಅಮೃತಸರ- ಹೊಸ ದೆಹಲಿ ಶೇನ್ ಇ ಪಂಜಾಬ್ (04068) ಸೇರಿದಂತೆ ಹಲವು ರೈಲುಗಳ ಮೇಲೆ ಪರಿಣಾಮ ಬೀರಿದೆ ಎಂದು ಮಾಧ್ಯಮಗಳು ವಿವರಿಸಿದೆ.
ಈ ರೈತರುಗಳು ಕಬ್ಬಿನ ರಾಜ್ಯ ಖಾತರಿ ಬೆಲೆಯನ್ನು (ಎಸ್‌ಎಪಿ) ಅಧಿಕ ಮಾಡುವಂತೆ ಪಂಜಾಬ್ ಸರ್ಕಾರವವನ್ನು ಆಗ್ರಹಿಸಿದ್ದಾರೆ. ಹಾಗೆಯೇ 200-250 ಕೋಟಿ ರೂಪಾಯಿ ಬಾಕಿ ಪಾವತಿಯನ್ನು ನೀಡುವಂತೆ ಪಂಜಾಬ್ ಸರ್ಕಾರವನ್ನು ರೈತರು ಒತ್ತಾಯಿಸಿದ್ದಾರೆ. ಈ ಬೇಡಿಕೆ ಈಡೇರುವವರೆಗೂ ನಾವು ಪ್ರತಿಭಟನೆಯಿಂದ ಹಿಂಜರಿಯಲಾರೆವು ಎಂದು ದೃಢವಾಗಿ ರೈತರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲೂ ರೈತರಿಂದ ರೈಲು ತಡೆ
ಇನ್ನು ಉತ್ತರ ಪ್ರದೇಶದಲ್ಲಿಯೂ ರೈತರ ಪ್ರತಿಭಟನೆಯಿಂದಾಗಿ ನಾಲ್ಕು ರೈಲುಗಳು ರದ್ದಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಬಂದೊದಗಿತ್ತು ಎಂದು ವರದಿಯು ಹೇಳಿದೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೇ ಅಧಿಕಾರಿಗಳು ಮೊರದಬಾದ್‌ನಲ್ಲಿ ಮೂರು ಕೌಂಟರ್‌ಗಳನ್ನು ತೆರೆಯಲಾಗಿದೆ. ಈ ಕೌಂಟರ್‌ಗಳಲ್ಲಿ ಪ್ರಯಾಣಿಕರಿಗೆ ರೈಲು ಟಿಕೆಟ್ ದರವನ್ನು ಮರು ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೊರದಬಾದ್ ರೈಲ್ವೇ ನಿಲ್ದಾಣದ ಅಧಿಕಾರಿ ಜೆ ಕೆ ಠಾಕೂರ್ ಮಾತನಾಡಿ, "ಮೊರದಬಾದ್‌ನಲ್ಲಿ ಎರಡು ರೈಲುಗಳು ಹಾಗೂ ಬರೇಲಿಯಲ್ಲಿ ಎರಡು ರೈಲುಗಳು ರೈತರ ಪ್ರತಿಭಟನೆಯಿಂದಾಗಿ ರದ್ದಾಗಿದೆ. ನಾವು ಪ್ರಯಾಣಿಕರಿಗೆ ರೈಲು ಟಿಕೆಟ್ ದರವನ್ನು ಮರು ಪಾವತಿ ಮಾಡಲು ಕೌಂಟರ್ ತೆರೆದಿದ್ದೇವೆ," ಎಂದು ಮಾಹಿತಿ ನೀಡಿದ್ದಾರೆ. ರೈಲು ಸಂಚಾರಕ್ಕೆ ಅನುವು ಮಾಡಿಕೊಳ್ಳು ನಾವು ರೈತರಲ್ಲಿ ಮನವಿ ಮಾಡಿದೆವು. ಆದರೆ ಅವರು ಸ್ಥಳದಿಂದ ಕದಲಲಿಲ್ಲ. ಆದರೆ ನಾವು ಟಿಕೆಟ್ ಅನ್ನು ಕೊನೆಗೆ ರದ್ದು ಮಾಡಬೇಕಾಯಿತು," ಎಂದು ಪ್ರಯಾಣಿಕರು ಹೇಳಿದ್ದಾರೆ.
ಕಳೆದ ನವೆಂಬರ್ 26 ರಿಂದ ದೇಶಾದಾದ್ಯಂತ ರೈತರು ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಹಾಗೂ ಸರ್ಕಾರದ ನಡುವೆ ಹಲವು ಹಂತಗಳಲ್ಲಿ ಮಾತುಕತೆ ನಡೆದಿದ್ದರೂ ಕೂಡಾ ಎಲ್ಲಾ ಮಾತುಕತೆಗಳು ವಿಫಲವಾಗಿದೆ. ಸರ್ಕಾರ ಕೆಲವು ತಿದ್ದು ಪಡಿ ಮಾಡಲು ಒಪ್ಪಿದೆಯಾದರೂ ಆ ಕಾನೂನನ್ನೇ ರದ್ದು ಮಾಡಲು ಒಪ್ಪಿಲ್ಲ. ಆದರೆ ರೈತರು ಮಾತ್ರ ಕಾನೂನು ಸಂಪೂರ್ಣವಾಗಿ ರೈತರಿಗೆ ಮಾರಕ. ಆ ಹಿನ್ನೆಲೆ ಮೂರು ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
(ಒನ್ ಇಂಡಿಯಾ)












Click it and Unblock the Notifications