Haryana Assembly Election 2024: ಎಲ್ಲ ಪಕ್ಷಗಳಿಗೆ ಬಿಗ್ ಶಾಕ್ ಕೊಟ್ಟ ರೈತರು
ಹರಿಯಾಣ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್, ಎಎಪಿ ಸೇರಿದಂತೆ ವಿವಿಧ ಪಕ್ಷಗಳು ಚುನಾವಣಾ ಪ್ರಚಾರದ ಅಖಾಡಕ್ಕಿಳಿದಿವೆ. ಇದೇ ಹೊತ್ತಿನಲ್ಲಿ ಹರಿಯಾಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದ್ದು, ಈ ಬಾರಿಯ ಚುನಾವಣೆಗೆ ಅಲ್ಲಿನ ರೈತರು ಪಕ್ಷಗಳಿಗೆ ಶಾಕ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ನಿನ್ನೆ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆದ ಕಿಸಾನ್ ಮಹಾಪಂಚಾಯತ್‌ನಲ್ಲಿ ರೈತರಲ್ಲಿ ಒಗ್ಗೂಡಿ ಒಂದು ದೃಢ ನಿರ್ಧಾರ ಪ್ರಕಟಿಸಿದ್ದಾರೆ. ಅದರಂತೆ ಈ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ಯಾವ ಪಕ್ಷವನ್ನೂ ವಿರೋಧಿಸುವುದೂ ಇಲ್ಲ ಎಂದು ರೈತರು ಘೋಷಿಸಿದ್ದಾರೆ.

ಭಾರತೀಯ ಕಿಸಾನ್ ನೌಜವಾನ್ ಒಕ್ಕೂಟದ ಆಶ್ರಯದಲ್ಲಿ ಮಹಾಪಂಚಾಯತ್ ನಡೆಯಿತು. ಇದರಲ್ಲಿ ಹರಿಯಾಣ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ರೈತರು ಹೆಚ್ಚಾಗಿ ಭಾಗವಹಿಸಿದ್ದರು.
ಈ ರೈತ ಚಳವಳಿಗೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಚಳವಳಿಯನ್ನು ಬಲಗೊಳಿಸುವುದು ನಮ್ಮ ಉದ್ದೇಶ. ಚುನಾವಣೆಯಲ್ಲಿ ನಾವು ಯಾರನ್ನೂ ಬೆಂಬಲಿಸುವುದಿಲ್ಲ, ವಿರೋಧ ಕೂಡ ಮಾಡುವುದಿಲ್ಲ. ಆದರೆ ಸರ್ಕಾರಗಳ ವೈಫಲ್ಯಗಳು, ರೈತರ ವಿರೋಧಿ ಕ್ರಮಗಳ ಬಗ್ಗೆ ಜನರಿಗೆ ನಾವು ಅರಿವು ಮೂಡಿಸಲಿದ್ದೇವೆ. ಈ ಮೂಲಕ ನಮ್ಮ ಆಂದೋಲನವನ್ನು ಬಲಗೊಳಿಸುತ್ತೇವೆ ಎಂದು ರೈತ ಮುಖಂಡ ಜಗಜಿತ್ ಸಿಂಗ್ ಡಲ್ಲೇವಾಲ್ ಹೇಳಿದ್ದಾರೆ.

ನಮ್ಮ ರೈತರು ಮುಂದಿಟ್ಟಿರುವ ಬೇಡಿಕೆಗಳು ಪಂಜಾಬ್, ಹರಿಯಾಣಕ್ಕೆ ಮಾತ್ರ ಸೀಮಿತವಾದದ್ದಲ್ಲ. ಇದು ಇಡೀ ದೇಶದ ರೈತರ ಬೇಡಿಕೆ. ಇದಕ್ಕಾಗಿ ದೇಶದ ವಿವಧೆಡೆ ಮಹಾಪಂಚಾಯತ್‌ಗಳನ್ನು ನಡೆಸುತ್ತಿದ್ದೇವೆ. ನಮ್ಮ ರೈತರ ಮುಂದಿನ ಮಹಾಪಂಚಾಯತ್ ಇದೇ ಸೆಪ್ಟೆಂಬರ್ 22ರಂದು ಕುರುಕ್ಷೇತ್ರದಲ್ಲಿ ನಡೆಯಲಿದೆ ಎಂದಿದ್ದಾರೆ.
ಇನ್ನು ಹರಿಯಾಣದಲ್ಲಿ ಈ ಬಾರಿ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೆ ಮತ ಹಾಕುವಂತೆ ನಾವು ಮನವಿ ಮಾಡೋದಿಲ್ಲ. ಆದರೆ ಅವರು ಪಕ್ಷದವರು ನಮ್ಮ ಬಳಿ ಮತ ಕೇಳಲು ಬಂದಾಗ ಕಳೆದ ವರ್ಷಗಳಲ್ಲಿ ನಮ್ಮ ರೈತರು ಹಾಗೂ ಕೂಲಿಕಾರರ ಮೇಲೆ ನಡೆದಿರುವ ದೌರ್ಜನ್ಯಗಳನ್ನು ನೆನಪು ಮಾಡಲು ರೈತರೆಲ್ಲ ನಿರ್ಧರಿಸಿದ್ದಾರೆ.
ರೈತರ ಈ ನಿರ್ಧಾರವು ಒಂದು ರೀತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೂ ಹಿನ್ನಡೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೆಲವು ಪಕ್ಷಗಳು ರೈತರನ್ನೇ ಗುರಿಯಾಗಿಟ್ಟುಕೊಂಡು ಪ್ರಚಾರ ನಡೆಸಿ, ಮತ ಸೆಳೆಯುವ ಅಂದಾಜಿನಲ್ಲಿದ್ದವು. ಆದರೆ, ಇದಕ್ಕೂ ಮುನ್ನವೇ ರೈತರು ಪಕ್ಷಗಳಿಗೆ ಟಕ್ಕರ್ ನೀಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಹರಿಯಾಣದಲ್ಲೂ ಹೆಚ್ಚಿನ ಮಂದಿ ರೈತರೇ ಇರುವುದರಿಂದ ಈ ಒಮ್ಮತದ ನಿರ್ಧಾರದಿಂದಾಗಿ ಮತಗಳ ಕೂಡ ಕುಸಿಯುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳಿಗೆ ಇದು ನುಂಗಲಾರದ ತುಪ್ಪ ಎನ್ನಲಾಗಿದೆ.
ಹರಿಯಾಣದಲ್ಲಿ ವಿಧಾನಭೆಯಲ್ಲಿ 90 ಸ್ಥಾನಕ್ಕೆ ಇದೇ ಅಕ್ಟೋಬರ್ 5ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗೂ ಮುನ್ನವೇ ರೈತರ ಈ ನಿರ್ಧಾರವು ಇದೀಗ ರಾಜಕೀಯ ಪಕ್ಷಗಳಿಗೆ ದೊಡ್ಡ ತಲೆನೋವನ್ನು ತಂದಿಟ್ಟಿದೆ.












Click it and Unblock the Notifications