ಕೇಂದ್ರ ಬಜೆಟ್ 2021; ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್ ಸಂಸದರು
ನವದೆಹಲಿ, ಫೆಬ್ರವರಿ 01; ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ರೈತರ ಪ್ರತಿಭಟನೆ ಮುಂದುವರೆದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ನೇ ಸಾಲಿನ ಬಜೆಟ್ ಮಂಡನೆಯನ್ನು ಮಾಡುತ್ತಿದ್ದಾರೆ.
ಬಜೆಟ್ ದಿನವೇ ಇಬ್ಬರು ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ತೊಟ್ಟು ಸಂಸತ್ ಭವನಕ್ಕೆ ಆಗಮಿಸಿದ್ದಾರೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಲು ಕಪ್ಪು ಬಟ್ಟೆ ತೊಟ್ಟು ಬಂದಿದ್ದಾರೆ.

ಕಾಂಗ್ರೆಸ್ ಸಂಸದರಾದ ಜಸ್ಬೀರ್ ಸಿಂಗ್ ಗಿಲ್ ಮತ್ತು ಗುರ್‌ಜಿತ್ ಸಿಂಗ್ ಆಹುಜಾ ಕಪ್ಪು ಬಟ್ಟೆ ಧರಿಸಿ ಸಂಸತ್ ಭವನಕ್ಕೆ ಆಗಮಿಸಿದ್ದಾರೆ. ಕೃಷಿ ನೀತಿಯನ್ನು ರದ್ದುಗೊಳಿಸಿ ಎಂದು ಬಟ್ಟೆಯ ಮೇಲೆ ಘೋಷಣೆ ಬರೆಯಲಾಗಿದೆ.
ದೆಹಲಿ ಹೊರವಲಯದಲ್ಲಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಬಜೆಟ್ ದಿನ ರೈತರ ಪ್ರತಿಭಟನೆ ತೀವ್ರಗೊಳ್ಳುವ ನಿರೀಕ್ಷೆ ಇರುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರೈತರು ದೆಹಲಿ ನಗರದೊಳಗೆ ನುಗ್ಗಲು ಪ್ರಯತ್ನ ನಡೆಸಬಹುದು ಎಂಬ ಮಾಹಿತಿ ಹಿನ್ನಲೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಭದ್ರತೆ ಹೆಚ್ಚಿಸಲಾಗಿದೆ. ಸಂಸತ್ ಕಡೆ ನಡಿಗೆಗೆ ರೈತರು ಕರೆ ನೀಡಿದ್ದಾರೆ. ಟ್ರಾಕ್ಟರ್ ಪರೇಡ್ ದಿನ ನಡೆದ ಹಿಂಸಾಚಾರದ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ದೆಹಲಿ ಗಡಿ ಪ್ರದೇಶದಲ್ಲಿ ಕಾಂಕ್ರೀಟ್ ಚಪ್ಪಡಿ, ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸುವ ನಿರೀಕ್ಷೆಯೂ ಇದೆ.
ಭಾರತೀಯ ಕಿಸಾನ್ ಯೂನಿಯನ್ ನಾಯಕ ನರೇಶ್ ಟಿಕಾಯತ್ ಈ ಕುರಿತು ಮಾತನಾಡಿದ್ದು, "ಪ್ರತಿಭಟನೆ ನಿರತ ರೈತರು ಪ್ರಧಾನಿಯ ಘನತೆಯನ್ನು ಗೌರವಿಸುತ್ತಾರೆ. ಆದರೆ, ತಮ್ಮ ಆತ್ಮಗೌರವವನ್ನು ರಕ್ಷಿಸಿಕೊಳ್ಳಲು ಬದ್ಧರಾಗಿದ್ದಾರೆ" ಎಂದು ಹೇಳಿದ್ದಾರೆ.












Click it and Unblock the Notifications