ತಿರುವನಂತಪುರಂ, ಅ 25: ರಾಜ್ಯದ ದೇವಸ್ಥಾನಗಳಿಗೆ ದಲಿತ ಅರ್ಚಕರನ್ನು ನೇಮಿಸಿ ಕ್ರಾಂತಿಕಾರಿ ಹೆಜ್ಜೆ ಆರಂಭಿಸಿದ್ದ ಕೇರಳದ ಪಿಣರಾಯಿ ವಿಜಯನ್ ಸರಕಾರ, ರಾಜ್ಯದ ಪುರಾಣ ಪ್ರಸಿದ್ದ ಗುರುವಾಯೂರು ಶ್ರೀಕೃಷ್ಣ ದೇವಾಲಯ ಪ್ರವೇಶಕ್ಕೂ ಹೊಸ ಮುನ್ನುಡಿ ಬರೆಯವ ಸಾಧ್ಯತೆಯಿದೆ.
ದಕ್ಷಿಣ ದ್ವಾರಕೆ ಎಂದೇ ಹೆಸರಾಗಿರುವ ಗುರುವಾಯೂರು ದೇವಾಲಯಕ್ಕೆ ಹಿಂದುಯೇತರರಿಗೆ ಪ್ರವೇಶವಿರಲಿಲ್ಲ. ಈಗ ಇತರ ಕೋಮಿನವರಿಗೂ ದೇವಾಲಯ ಪ್ರವೇಶಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ದೇವಾಲಯದ ಅರ್ಚಕ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡು, ಕೇರಳ ಸರಕಾರಕ್ಕೆ ಪತ್ರ ಬರೆದಿದೆ.
ಶಬರಿಮಲೆಗೆ ಭೇಟಿ ನೀಡಿದ ಎರಡನೇ ಕಮ್ಯೂನಿಸ್ಟ್ ಸಿಎಂ
ದೇವಾಲಯದ ಪ್ರಧಾನ ಅರ್ಚಕ (ತಂತ್ರಿ) ದಿನೇಶನ್ ನಂಬೂದಿರಿ, ಕೇರಳ ಸರಕಾರಕ್ಕೆ ಪತ್ರ ಬರೆದು, ಹಿಂದುಯೇತರರಿಗೆ ದೇವಾಲಯ ಪ್ರವೇಶಕ್ಕಿದ್ದ ನಿರ್ಬಂಧ ತೆಗೆದುಹಾಕಲು ನಮ್ಮದೇನೂ ತಕರಾರಿಲ್ಲ. ಎಲ್ಲಾ ಕೋಮಿನವರಿಗೂ ದೇವಾಲಯದ ಪ್ರವೇಶ ಮುಕ್ತವಾಗಲಿ, ಈ ಸಂಬಂಧ ರಾಜ್ಯ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದ ಎಂದು ನಂಬೂದಿರಿ ಹೇಳಿದ್ದಾರೆ.
ಹಿಂದೂ ಧರ್ಮದಲ್ಲಿ ನಂಬಿಕೆಯಿರುವ ಎಲ್ಲರಿಗೂ ದೇವಾಲಯ ಪ್ರವೇಶ ಮುಕ್ತವಾಗಿರಬೇಕು. ಹಿಂದಿನ ಪದ್ದತಿಗಳನ್ನು ಇನ್ನೂ ಮುಂದುವರಿಸಿಕೊಂಡು ಹೋಗದೇ, ಕಾಲಕ್ಕೆ ತಕ್ಕಂತೆ ಬದಲಾಗುವ ಅವಶ್ಯಕತೆಯಿದೆ ಎಂದು ದಿನೇಶನ್ ನಂಬೂದಿರಿ, ಅರ್ಚಕ ಮಂಡಳಿಯ ಪರವಾಗಿ ಸರಕಾರಕ್ಕೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಗುರುವಾಯೂರು ಅರ್ಚಕ ಮಂಡಳಿಯ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಯಾವ ಧರ್ಮದವರಾದರೇನು, ಎಲ್ಲರಿಗೂ ದೇವಾಲಯಕ್ಕೆ ಪ್ರವೇಶವಿರಬೇಕು. ಅರ್ಚಕರ ನಿರ್ಧಾರ ಶ್ಲಾಘನೀಯ ಎಂದು ಕಮ್ಯೂನಿಸ್ಟ್ ಮುಖಂಡರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಅರ್ಚಕ ಮಂಡಳಿಯ ಪತ್ರದ ಆಧಾರದ ಮೇಲೆ, ರಾಜ್ಯ ಸರಕಾರ ದೇವಾಲಯ ಪ್ರವೇಶ ಎಲ್ಲರಿಗೂ ಮುಕ್ತ ಎಂದು ಘೋಷಿಸುವ ಸಾಧ್ಯತೆಯಿದೆ. ವಿದೇಶಿಯರಿಗೆ ಮತ್ತು ಹಿಂದೂ ಧರ್ಮಕ್ಕೆ ಸೇರದ ಅನ್ಯಧರ್ಮೀಯರಿಗೆ ಗುರುವಾಯೂರು ಕೃಷ್ಣ ದೇಗುಲದಲ್ಲಿ ಪ್ರವೇಶ ನಿಷಿದ್ಧವಾಗಿದೆ.
ಹುಟ್ಟಿನಿಂದ ಕ್ರೈಸ್ತ ಧರ್ಮಕ್ಕೆ ಸೇರಿರುವ ಹೆಸರಾಂತ ಗಾಯಕ ಡಾ. ಕೆ ಜೆ ಯೇಸುದಾಸ್ ಅವರನ್ನೂ ಕೂಡಾ ಈ ಹಿಂದೆ ಗುರುವಾಯೂರು ದೇಗುಲದ ಒಳಗೆ ಬಿಟ್ಟಿರಲಿಲ್ಲ. ಹಿಂದೂ ಧರ್ಮದ ಮೇಲೆ ನನಗೆ ನಂಬಿಕೆಯಿದೆ ಎಂದು ಯೇಸುದಾಸ್ ಅಫಿಡವಿಟ್ ಸಲ್ಲಿಸಿದ ನಂತರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಪಾರ್ಸಿ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಗುರುವಾಯೂರು ದೇವಳಕ್ಕೆ ಪ್ರವೇಶ ನಿರಾಕರಿಸಿದ್ದು ಭಾರಿ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!