ಕೋವಿಡ್-19 ಬಗ್ಗೆ ಇಂಚಿಂಚು ಮಾಹಿತಿ ಕೊಡುವ ಲವ್ ಅಗರ್ವಾಲ್ ಯಾರು?
ನವದೆಹಲಿ, ಏಪ್ರಿಲ್ 22: ನೀವು ಪ್ರತಿ ದಿನ ನ್ಯೂಸ್ ಚಾನೆಲ್ ಗಳನ್ನು ನೋಡುತ್ತಿದ್ದರೆ, ನಿಮಗೆ ಲವ್ ಅಗರ್ವಾಲ್ ಪರಿಚಯ ಇದ್ದೇ ಇರುತ್ತೆ. ಯಾಕಂದ್ರೆ, ಕಳೆದ 40 ದಿನಗಳಿಂದ ಪ್ರತಿ ಸಂಜೆ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಭಾರತ ಹೋರಾಡುತ್ತಿರುವ ಬಗೆಗಿನ ಇಂಚಿಂಚು ಮಾಹಿತಿ ನೀಡುತ್ತಿರುವವರು ಲವ್ ಅಗರ್ವಾಲ್.
Recommended Video
ಭಾರತದಲ್ಲಿರುವ ಸೋಂಕಿತರ ಸಂಖ್ಯೆ, ಐಸಿಯು ಬೆಡ್ ಗಳ ಪ್ರಮಾಣ, ಸುರಕ್ಷತಾ ಸಾಧನಗಳು, ಹಾಟ್ ಸ್ಪಾಟ್ಸ್ ಸೇರಿದಂತೆ ಕೋವಿಡ್-19 ತಡೆಗಟ್ಟಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸುದ್ಧಿಗೋಷ್ಠಿಯಲ್ಲಿ ಮೀಡಿಯಾ ಮೂಲಕ ಜನರಿಗೆ ತಿಳಿಸುತ್ತಾ ಬಂದಿದ್ದಾರೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್.
ಹೆಲ್ತ್ ಎಮರ್ಜೆನ್ಸಿ ಉಂಟಾಗಿರುವ ಈ ವೇಳೆಯಲ್ಲಿ ನರೇಂದ್ರ ಮೋದಿ ಸರ್ಕಾರದ ದನಿಯಾಗಿರುವ ಲವ್ ಅಗರ್ವಾಲ್ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದಾರೆ. ಹಾಗಾದ್ರೆ, ಯಾರು ಈ ಲವ್ ಅಗರ್ವಾಲ್.? ಅವರ ಹಿನ್ನಲೆ ಏನು ಅಂತೀರಾ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ...

48 ವರ್ಷ ವಯಸ್ಸಿನ ಐಎಎಸ್ ಅಧಿಕಾರಿ
48 ವರ್ಷ ವಯಸ್ಸಿನ ಐಎಎಸ್ ಅಧಿಕಾರಿ ಈ ಲವ್ ಅಗರ್ವಾಲ್. ಸದ್ಯ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ, ಕೋವಿಡ್-19 ಕುರಿತಾಗಿ ಕೇಂದ್ರ ಸರ್ಕಾರದ ವಕ್ತಾರರಾಗಿದ್ದಾರೆ.

1996 ಬ್ಯಾಚ್ ಅಧಿಕಾರಿ
ಸಿಎ ಕೆ.ಜಿ.ಅಗರ್ವಾಲ್ ಪುತ್ರನಾಗಿರುವ ಲವ್ ಅಗರ್ವಾಲ್ ಆಂಧ್ರ ಪ್ರದೇಶದ 1996 ಬ್ಯಾಚ್ ಅಧಿಕಾರಿ. ತಂದೆ ಕೆ.ಜಿ.ಅಗರ್ವಾಲ್ ಹೇಳುವ ಪ್ರಕಾರ, ಸಿವಿಲ್ ಸರ್ವೀಸ್ ಅನ್ನು ವೃತ್ತಿಯಾಗಿ ಸ್ವೀಕರಿಸುವುದು ಲವ್ ಅಗರ್ವಾಲ್ ರವರ ಮೊದಲ ಆಯ್ಕೆ ಆಗಿರಲಿಲ್ಲ. ''ನನ್ನ ಹಾಗೆ ನನ್ನ ಮಗ ಸಿಎ ಆಗಬೇಕು ಎಂದುಕೊಂಡಿದ್ದೆ. ಆದ್ರೆ, ಆತನಿಗೆ ಸಿಎ ಇಷ್ಟ ಇರಲಿಲ್ಲ. ಐಐಟಿ ಓದಲು ಇಷ್ಟವಿತ್ತು. ''ಐಐಟಿ ಎಕ್ಸಾಂ ಅಷ್ಟು ಸುಲಭ ಅಲ್ಲ'' ಅಂತ ನಾನು ಹೇಳಿದಾಗ ''ಒಮ್ಮೆ ಟ್ರೈ ಮಾಡುವೆ. ಅದರಲ್ಲಿ ಯಶಸ್ವಿ ಆಗಲಿಲ್ಲ ಅಂದ್ರೆ ಸಿಎ ಆಗುವೆ'' ಎಂದು ಹೇಳಿದ್ದ ಲವ್ ಮೊದಲ ಪ್ರಯತ್ನದಲ್ಲೇ ಐಐಟಿಯಲ್ಲಿ ಯಶಸ್ವಿಯಾದ'' ಎನ್ನುತ್ತಾರೆ ತಂದೆ ಕೆ.ಜಿ.ಅಗರ್ವಾಲ್.

ಮೂರನೇ ಪ್ರಯತ್ನದಲ್ಲಿ ಐಎಎಸ್ ಪಾಸ್
ಐಐಟಿ-ದೆಹಲಿ ಸೇರಿ ಮೆಕ್ಯಾನಿಕಲ್ ಎಂಜಿನಿಯರ್ ವ್ಯಾಸಂಗ ಮಾಡಿದ ಲವ್ ಅಗರ್ವಾಲ್ ಓದಿನ ಜೊತೆಗೆ ಮಸ್ತಿಯನ್ನೂ ಮಾಡುತ್ತಿದ್ದರಂತೆ. ಯಾವತ್ತೂ ಸ್ಪರ್ಧಾತ್ಮಕವಾಗಿ ಯೋಚಿಸದ ಲವ್ ಅಗರ್ವಾಲ್, ತಮ್ಮ ಗೆಳೆಯರಿಗೂ ನೋಟ್ಸ್ ಕೊಡುತ್ತಿದ್ದರಂತೆ. ಐಐಟಿ ಮುಗಿಸಿದ ಮೇಲೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ಲವ್ ಅಗರ್ವಾಲ್ ಅಣಿಯಾಗಿದ್ದರಂತೆ. ಆಗ ಪುತ್ರನಿಗೆ ಸಿವಿಲ್ ಸರ್ವೀಸ್ ತೆಗೆದುಕೊಳ್ಳಲು ಸೂಚಿಸಿದ್ದೇ ಅವರ ತಂದೆ ಕೆ.ಜಿ.ಅಗರ್ವಾಲ್. 1996 ರಲ್ಲಿ ಮೂರನೇ ಪ್ರಯತ್ನದಲ್ಲಿ ಲವ್ ಅಗರ್ವಾಲ್ ಐಎಎಸ್ ಪಾಸ್ ಮಾಡಿದರು. ಆಲ್ ಇಂಡಿಯಾ ಮಟ್ಟದಲ್ಲಿ 21 ನೇ rank ಗಳಿಸಿದ ಲವ್ ಅಗರ್ವಾಲ್ ಆಂಧ್ರ ಪ್ರದೇಶದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಅತ್ಯಂತ ಜನಪ್ರಿಯ ಐಎಎಸ್ ಅಧಿಕಾರಿ
2016 ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಯಾದ ಲವ್ ಅಗರ್ವಾಲ್ ಪ್ರಸ್ತುತ ಭಾರತದ ಅತ್ಯಂತ ಜನಪ್ರಿಯ ಐಎಎಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.












Click it and Unblock the Notifications