
ದೀಪಾವಳಿವರೆಗೆ 'ಗರೀಬ್ ಕಲ್ಯಾಣ' ಯೋಜನೆ ವಿಸ್ತರಣೆ: ಮೋದಿ
ನವದೆಹಲಿ, ಜೂನ್ 27: ದೀಪಾವಳಿವರೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ದೇಶವನ್ನುದ್ದೇಶಿಸಿ ಮಾತನಾಡಿರುವ ಅವರು, 'ಬಡವರು ಹಸಿವಿನಿಂದ ಬಳಲಲು ಬಿಡುವುದಿಲ್ಲ, ನವೆಂಬರ್‌ವರೆಗೆ ಗರೀಬ್ ಕಲ್ಯಾಣ ಯೋಜನೆ ವಿಸ್ತರಿಸಲಾಗಿದೆ' ಎಂದು ಮಾಹಿತಿ ನೀಡಿದರು.

ಈ ಕೊರೊನಾ ಸಮಯದಲ್ಲಿ ಜನರು ಹಸಿದವರ ಪರವಾಗಿ ನಿಲ್ಲುವುದು ಸರ್ಕಾರದ ಕರ್ತವ್ಯವಾಗಿದೆ, ನವೆಂಬರ್ ತಿಂಗಳವರೆಗೆ ಪ್ರತಿ ತಿಂಗಳು ಆಹಾರ ಧಾನ್ಯವನ್ನು 80 ಕೋಟಿ ಮಂದಿಗೆ ನೀಡಲಾಗುವುದು ಎಂದು ಹೇಳಿದರು.
18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರ ಸರ್ಕಾರದಿಂದ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್ಯಗಳ ಲಸಿಕೆಗಳ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಲು ಕೇಂದ್ರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ನೀಡಿರುವ ಲಸಿಕೆಯ ಶೇ.25ರಷ್ಟು ಖಾಸಗಿ ಆಸ್ಪತ್ರೆಗಳು ಪಡೆಯಬಹುದು, ಹಣವಿರುವವರು ಹಾಗೂ ಲಸಿಕೆ ಉಚಿತವಾಗಿ ಬೇಡ ಎನ್ನುವವರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಲಸಿಕೆಯನ್ನು ಪಡೆದುಕೊಳ್ಳಬಹುದು'' ಎಂದು ಮಾಹಿತಿ ನೀಡಿದರು.