6.30ರ ನಂತರ ಚುನಾವಣೋತ್ತರ ಸಮೀಕ್ಷೆ ನಿರೀಕ್ಷಿಸಿ
ನವದೆಹಲಿ, ಮೆ.12: ಲೋಕಸಭೆ ಚುನಾವಣಾ ಮಹಾ ಸಮರದ ಅಂತಿಮ ಹಂತದ ಮತದಾನ ಸೋಮವಾರ ಸಂಜೆ ಕೊನೆಗೊಳ್ಳಲಿದೆ. ಮೇ.16 ರಂದು ಫಲಿತಾಂಶ ಹೊರಬೀಳಲಿದೆ. ಆದರೆ, ಅದಕ್ಕೂ ಮುನ್ನ ಮಾಧ್ಯಮಗಳು ತಮ್ಮ ಚುನಾವಣೋತ್ತರ ಸಮೀಕ್ಷೆ ಪ್ರಸಾರ ಮಾಡಲು ಹಾತೊರೆಯುತ್ತಿವೆ, ಘಟಾನುಘಟಿಗಳ ಭವಿಷ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಸಿದ್ದಪಡಿಸಿಕೊಂಡಿರುವ ಸಂಸ್ಥೆಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಈ ನಡುವೆ ಸೋಮವಾರ ಸಂಜೆ 6.30ರ ನಂತರವಷ್ಟೇ ಚುನಾವಣೋತ್ತರ ಸಮೀಕ್ಷೆ(exit poll result) ಪ್ರಸಾರ ಮಾಡಬಹುದು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್ 126 ಎ ಅನ್ವಯ ಈ ರೀತಿ ನಿರ್ದೇಶನ ನೀಡಲಾಗಿದೆ. ಈಗಾಗಲೇ ಪ್ರಮುಖ ಸುದ್ದಿ ಸಂಸ್ಥೆಗಳಿಗೆ ಈ ಬಗೆಗಿನ ಸುತ್ತೋಲೆ ಕಳಿಸಲಾಗಿದೆ. ನಿಯಮ ಮೀರಿ ಮುಂಚಿತವಾಗಿ ಸಮೀಕ್ಷಾ ವರದಿ ಪ್ರಕಟಿಸಿದರೆ ಕಾನೂನು ಉಲ್ಲಂಘಿಸಿದ್ದಂತಾಗುತ್ತದೆ ಎಂದು ಆಯೋಗ ಎಚ್ಚರಿಸಿದೆ.

ಮತಎಣಿಕೆಯ ದಿನವಾದ ಮೇ 16ರ ತನಕ ಎಕ್ಸಿಟ್ ಪೋಲಿಗೆ ಚುನಾವಣಾ ಆಯೋಗ ನಿಷೇಧ ಹೇರಿ ಮೇ.10 ರಂದು ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಆದರೆ, ನಂತರ ತನ್ನ ಆದೇಶವನ್ನು ಹಿಂಪಡೆದುಕೊಂಡಿತು.[ಚುನಾವಣಾ ಪೂರ್ವಸಮೀಕ್ಷೆಗಳ ಸಂಗ್ರಹ]
ಮೇ ಹನ್ನೆರಡರ ಸಂಜೆ ಆರು ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಇದಾದ ಮೂವತ್ತು ನಿಮಿಷದ ನಂತರ ಮತಗಟ್ಟೆ ಸಮೀಕ್ಷೆ ಪ್ರಸಾರ ಮಾಡಬಹುದು ಎಂದು ಆಯೊಗ ಸ್ಪಷ್ಟ ಪಡಿಸಿದೆ. ಕೊನೆ ಹಂತದ ಮತದಾನ ಪ್ರಕ್ರಿಯೆ ಮುಗಿದರೂ ಕೆಲವೆಡೆ ಮರು ಮತದಾನ ನಡೆಯುವುದರಿಂದ ಚುನಾವಣೋತ್ತರ ಸಮೀಕ್ಷೆ ವಿಳಂಬಗೊಳಿಸಿ ಪ್ರಸಾರ ಮಾಡುವಂತೆ ಮಾಧ್ಯಮಗಳಿಗೆ ಮುಖ್ಯ ಚುನಾವನಾಧಿಕಾರಿ ವಿ.ಎಸ್ ಸಂಪತ್ ಹೇಳಿದ್ದಾರೆ. (ಪಿಟಿಐ)












Click it and Unblock the Notifications