ದೇಶದ ಆರ್ಥಿಕ ಸ್ಥಿತಿ ಕುಲಗೆಡಿಸಿದ ಜೇಟ್ಲಿ: ಸ್ವಪಕ್ಷೀಯರಿಂದಲೇ ಟೀಕೆ
ದೇಶದ ಆರ್ಥಿಕ ಹಿನ್ನಡೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕುಲಗೆಡಿಸಿದ್ದಾರೆಂದು ಮಾಜಿ ವಿತ್ತ ಸಚಿವ ಮತ್ತು ಹಿರಿಯ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ಕಿಡಿಕಾರಿದ್ದಾರೆ.
ನವದೆಹಲಿ, ಸೆ 27: ದೇಶದ ಆರ್ಥಿಕ ಸ್ಥಿತಿಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕುಲಗೆಡಿಸಿದ್ದಾರೆಂದು ಮಾಜಿ ವಿತ್ತ ಸಚಿವ ಮತ್ತು ಹಿರಿಯ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ಕಿಡಿಕಾರಿದ್ದಾರೆ.
ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಮಾಪನ ಮಾಡುವ ಹೊಸ ಪದ್ದತಿಯೂ ಸರಿಯಾದುದಲ್ಲ ಎಂದು ಹೇಳಿರುವ ಸಿನ್ಹಾ, ಹಣಕಾಸು ಸಚಿವ ಜೇಟ್ಲಿ ಈಗಾಲಾದರೂ ಆರ್ಥಿಕ ಕುಸಿತಗೊಂಡಿರುವುದರ ಬಗ್ಗೆ ಸಾರ್ವಜನಿಕವಾಗಿ ವಿವರಿಸಬೇಕೆಂದು ಆಗ್ರಹಿಸಿದ್ದಾರೆ.

ಜೇಟ್ಲಿ ತನ್ನ ನ್ಯಾಷನಲ್ ಡ್ಯೂಟಿಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಬಿಜೆಪಿಯಲ್ಲಿರುವ ಬಹುತೇಕ ಮುಖಂಡರಿಗೆ ಆರ್ಥಿಕ ಹಿನ್ನಡೆಯ ಬಗ್ಗೆ ತಿಳಿದಿದೆ. ಆದರೆ ಅದನ್ನು ಜನರ ಮುಂದೆ ಹೇಳಲು ಭಯ ಪಡುತ್ತಿದ್ದಾರೆಂದು ಯಶವಂತ್ ಸಿನ್ಹಾ ಟೀಕಿಸಿದ್ದಾರೆ.
2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ನಾಲ್ಕು ಖಾತೆಯನ್ನು ನಿಭಾಯಿಸುತ್ತಿದ್ದ ಜೇಟ್ಲಿ ಒಬ್ಬ ಸೂಪರ್ ಮ್ಯಾನ್ ಎಂದು ಅಣಕವಾಡಿರುವ ಸಿನ್ಹಾ, ಜೇಟ್ಲಿ ಈ ದೇಶ ಕಂಡ ಅತ್ಯಂತ ಅದೃಷ್ಟಶಾಲಿ ರಾಜಕಾರಣಿ. ಇಂದಿನ ದೇಶದ ಆರ್ಥಿಕ ಹಿನ್ನಡೆಗೆ ಜೇಟ್ಲಿ ಕಾರಣ ಎಂದು ಸಿನ್ಹಾ ಹೇಳಿದ್ದಾರೆ.
ಅಪನಗದೀಕರಣ ಎನ್ನುವುದು ಒಂದು ಕಾರಣ ಮಾತ್ರ, ಇದಕ್ಕೆ ಮೊದಲೇ ಆರ್ಥಿಕ ಹಿನ್ನಡೆಯಾಗುವ ಸುಳಿವು ಸಿಕ್ಕಿದ್ದರೂ, ಮೋದಿ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿಲ್ಲ. ಸರಕು ಮತ್ತು ಸೇವಾ ತೆರಿಗೆ (GST) ಪದ್ದತಿಯನ್ನು ಅತ್ಯಂತ ಕೆಟ್ಟರೀತಿಯಲ್ಲಿ ಕಾರ್ಯರೂಪಕ್ಕೆ ತರಲಾಯಿತು ಎಂದು ಸಿನ್ಹಾ, ಮೋದಿ ಸರಕಾರವನ್ನು ಟೀಕಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ, ಇಂಡಿಯಾ ಮಿಲೇನಿಯಂ ಬಾಂಡ್ ಮುಂತಾದ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದರು.
ಅವಸರದ ಜಿಎಸ್ಟಿ ಅನುಷ್ಠಾನ ಮತ್ತು ಅಪನಗದೀಕರಣ ಜಿಡಿಪಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಮಾಜಿ ಪ್ರಧಾನಿ, ಹಿರಿಯ ಆರ್ಥಿಕ ತಜ್ಞ ಮನ್ ಮೋಹನ್ ಸಿಂಗ್ ಕೆಲವು ದಿನಗಳ ಹಿಂದೆ ಅಭಿಪ್ರಾಯಪಟ್ಟಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications